ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಈಗ ಅವರದ್ದೇ ಪಕ್ಷದ ನಾಯಕರ ವಿರುದ್ಧ ಎಫ್‌ಐಆರ್ ಆಗಿದೆ. ಎಫ್‌ಐಆರ್ ಆಗಿರುವ ಬಿಜೆಪಿ ನಾಯಕರೂ ರಾಜೀನಾಮೆ ನೀಡಲಿ” ಎಂದು ಹೇಳಿದರು.
ಭಾನುವಾರ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಖರ್ಗೆ, “ಈಗಾಗಲೇ ಚುನಾವಣಾ ಬಾಂಡ್ ವಿಚಾರದಲ್ಲಿ ಸುಲಿಗೆ ಮಾಡಲಾಗುತ್ತಿದೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ. ಕಂಪನಿಗಳ ಮೇಲೆ ಸಿಬಿಐ, ಐಟಿ, ಇಡಿ ದಾಳಿ ನಡೆದ ಬೆನ್ನಲ್ಲೇ ಚುನಾವಣಾ ಬಾಂಡ್ ಖರೀದಿಸಲಾಗಿದೆ. ಬಾಂಡ್ ಖರೀದಿ ಮಾಡಿದ ಬಳಿಕ ಪ್ರಕರಣ ಮರೆಯಾಗುತ್ತದೆ” ಎಂದರು.
“ಈ ಪ್ರಕರಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ.ಡಿ ಅಧಿಕಾರಿಗಳು, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿರುದ್ಧ ಎಫ್‍ಐಆರ್ ದಾಖಲಿಸಲು ನ್ಯಾಯಾಲಯ ಅವಕಾಶ ನೀಡಿದೆ. ಅಸಂವಿಧಾನಿಕವಾದ ಚುನಾವಣಾ ಬಾಂಡ್‌ನಲ್ಲಿರುವವರು ಕ್ರಿಮಿನಲ್ ಆರೋಪಿಗಳಾಗಿದ್ದು ಇವರ ವಿರುದ್ಧ ಸೂಕ್ತ ತನಿಖೆ ನಡೆಯಬೇಕು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ
“ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ 23 ಸಚಿವರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಕುಮಾರಸ್ವಾಮಿ ಅವರೂ ಸೇರಿದಂತೆ ಇವರೆಲ್ಲರೂ ತಮ್ಮ ಪ್ರಕರಣದಲ್ಲಿ ಎ1 ಆಗಿದ್ದಾರೆ. 2011ರ ಡಿನೋಟಿಫಿಕೇಶನ್ ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕ ಅಶೋಕ್ ಎ1 ಆಗಿದ್ದಾರೆ. ಎ2 ಪೂಜ್ಯ ಅಪ್ಪಾಜಿ ಅವರಿದ್ದಾರೆ” ಎಂದು ದೂರಿದರು.
ಬಿಜೆಪಿಯ 572 ಕೋಟಿ ರೂಪಾಯಿಯ ಚುನಾವಣಾ ಬಾಂಡ್ ಅನ್ನು 33 ಕಂಪನಿಗಳು ಖರೀದಿ ಮಾಡಿದ್ದು ಈ ಕಂಪನಿಗಳ ಲಾಭ ಶೂನ್ಯವಾಗಿದೆ. ಒಟ್ಟಾರೆ ನಷ್ಟದ ಪ್ರಮಾಣ 1 ಲಕ್ಷ ಕೋಟಿ ರೂ.ಗಳಷ್ಟಿದೆ. ಇನ್ನು ಆರು ಕಂಪನಿಗಳು ಲಾಭಕ್ಕಿಂತ ಅಧಿಕ ದೇಣಿಗೆ ನೀಡಿದೆ. ಇನ್ನು ಮೂರು ಕಂಪನಿಗಳಿಗೆ ಲಾಭವಿದ್ದರೂ ನಷ್ಟ ತೋರಿಸಿದ್ದಾರೆ. ಆದರೆ ಬಿಜೆಪಿಗೆ 193 ಕೋಟಿ ರೂ.ದೇಣಿಗೆ ನೀಡಿದ್ದಾರೆ” ಎಂದು ವಿವರಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ನಾಳೆ (ಸೆ.17) ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ, ಅಭಿವೃದ್ಧಿ ಬಗ್ಗೆ ಚರ್ಚೆ: ಪ್ರಿಯಾಂಕ್ ಖರ್ಗೆ
ಇನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಮನಿ ಲಾಂಡರಿಂಗ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಹತ್ತು ವರ್ಷಗಳಿಂದ ನೀವೇ ಅಧಿಕಾರದಲ್ಲಿದ್ದೀರಿ. ಇಷ್ಟು ವರ್ಷ ನೀವೇನು ಬೆಟ್ಟು ಚೀಪುತ್ತಾ ಕೂತಿದ್ದೀರಾ” ಎಂದು ಪ್ರಶ್ನಿಸಿದರು.
“ಬಿಜೆಪಿ ನಾಯಕರು ಮುನಿರತ್ನ ಸಮರ್ಥನೆ ಮಾಡಿಕೊಳ್ಳುವುದನ್ನು ನೋಡಿದಾಗ ಅವರದ್ದು ಏನಾದರೂ ಸಿಡಿ ಇದೆಯೇ ಎಂಬ ಪ್ರಶ್ನೆ ಹುಟ್ಟುತ್ತೆ” ಎಂದು ಕುಟುಕಿದರು.
