ಕವಿ ಪ್ರಕಾಶನದ ಮೇ ಬಳಗ ಹಾಗೂ ಲಡಾಯಿ ಪ್ರಕಾಶನದ ಚಿತ್ತಾರ ಕಲಾ ಬಳಗ ಸಂಯುಕ್ತ ಆಶ್ರಯದಲ್ಲಿ ವಿಜಯಪುರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಅಕ್ಟೋಬರ್ 6ರಂದು ಜನಕಲ ಸಾಂಸ್ಕೃತಿಕ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಪತ್ರಕರ್ತ ಅನಿಲ್ ಹೊಸಮನಿ ಹೇಳಿದರು.
ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಮೊದಲ ಬಾರಿಗೆ ಕ್ರಾಂತಿಗೀತೆಗಳ ಮೇಳ ನಡೆಯಲಿದೆ. ಕಲಾತಂಡಗಳು, ಕಲಾವಿದರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಕಲಾತಂಡಗಳು ಭಾಗವಹಿಸಲಿವೆ. ಈ ಮೇಳಕ್ಕೆ ಸರ್ಕಾರದಿಂದಾಗಲಿ ಅಥವಾ ರಾಜಕಾರಣಿಗಳಿಂದಾಗಲಿ ಯಾವುದೇ ತರಹದ ಸಹಾಯ ಪಡೆಯುತ್ತಿಲ್ಲ. ಬೇರೆ ಬೇರೆ 14 ವೇದಿಕೆ ಒಕ್ಕೂಟಗಳ ಸಹಯೋಗ ಇರಲಿದ್ದು, ಮೇಳದಲ್ಲಿ ಒಂಬತ್ತು ಕಲಾ ತಂಡಗಳು ಭಾಗವಹಿಸಲಿವೆ. 10:30ಕ್ಕೆ ಕಾರ್ಯಕ್ರಮ ಉದ್ಘಾಟನೆ ಯಾಗಲಿದ್ದು, ಕ್ರಾಂತಿಕಾರಿ ಸಂದೇಶ ಸಾರುವ ಹಾಡುವ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಉದ್ಘಾಟನೆಗೆ ಆಹ್ವಾನಿಸಲಾಗಿದೆ. ಸಂಜೆ 6:15ಕ್ಕೆ ಸಮಾರೋಪ ಸಮಾರಂಭ ನಡೆಯುತ್ತದೆ. ಸಂಜೆ 6:45ಕ್ಕೆ ಎಂಎಂ ಕಲ್ಬುರ್ಗಿಯವರ ರಕ್ತ ವಿಲಾಪ ನಾಟಕವನ್ನು ರಾಯಚೂರು ಸಮುದಾಯ ತಂಡದವರು ಪ್ರದರ್ಶನಗೊಳಿಸಲಿದ್ದಾರೆ” ಎಂದರು.
ಲಡಾಯಿ ಪ್ರಕಾಶನದ ಮುಖ್ಯಸ್ಥ ಬಸವರಾಜ್ ಸುಳಿಭಾವಿ ಮಾತನಾಡಿ, “ಜನಕಲ ಸಾಂಸ್ಕೃತಿಕ ಮೇಳವನ್ನು ಜನಮುಖಿಯಾಗಿಸುವ ಪ್ರಯತ್ನ ನಡೆಯುತ್ತಿದೆ. ಮೊದಲಿಗೆ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಂತೆ ಈಗ ರಾಜ್ಯದಲ್ಲಿ ದಲಿತ ಸಂಘಟನೆ, ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡಿದೆ. ಜನಮುಖಿಯಾದಂತಹ ಸಾಹಿತ್ಯವನ್ನು ಜನಗಳಿಗೆ ತಲುಪಿಸುವ ಹಾಡುಗಾರಿಕೆಯನ್ನು ಆರಂಭಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ಮೇ ಬಳಗ ಈ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯ; ಬಿಜೆಪಿ, ಜೆಡಿಎಸ್ ನಡೆ ಖಂಡಿಸಿ ಅಹಿಂದ ಪ್ರತಿಭಟನೆಗೆ ಸಿದ್ಧತೆ
“ಸಾಮಾನ್ಯ ಜನರಿಗೆ ಸಾಹಿತ್ಯವನ್ನು ತಲುಪಿಸುವುದು ಮತ್ತು ಬೇರೆ ಬೇರೆ ರಾಜ್ಯಗಳಿಗೆ ಸಾಹಿತ್ಯವನ್ನು ಪರಿಚಯಿಸುವ ಕೆಲಸ ಇದರಿಂದಾಗುತ್ತದೆ. ಈಗಾಗಲೇ ದಲಿತ ಚಳವಳಿಗೆ 50 ವರ್ಷ ತುಂಬಿದ್ದರಿಂದ ಇಡೀ ಚಳವಳಿಯ ಹಿನ್ನೋಟ ಗಮನಿಸುವ ಅವಲೋಕನ ಕಾರ್ಯ ನಡೆಯಲಿದೆ. ರಾಜ್ಯಾದ್ಯಂತ ತಿರುಗಾಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಅನಕ್ಷರಸ್ಥರ ಎದೆಯೊಳಗೆ ಅಂಬೇಡ್ಕರ್ ಅವರ ಹೋರಾಟವನ್ನು ಹಾಡುಗಳ ಮೂಲಕ ಪರಿಚಯಿಸುವ ಕೆಲಸ ನಡೆಯಲಿದೆ” ಎಂದರು.
ಬಸವಾದಿ ಶರಣರ ವಚನ ತಿದ್ದುಪಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು,” ವಚನಕಾಲ, ಶರಣಕಾಲ, ಬಸವಣ್ಣನವರ ವಚನಗಳ ತೆರೆಸುವ ಕೆಲಸ ಆಗಬಾರದು. ಲಿಂಗಾಯತರು ಪ್ರಜ್ಞಾವಂತರು ಇದರ ವಿರುದ್ಧ ಪ್ರತಿದ್ವನಿಸಬೇಕು” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಭುಗೌಡ ಪಾಟೀಲ, ನಾಗರಾಜ್ ಲಂಬು, ಚನ್ನು ಕಟ್ಟಿಮನಿ, ರಾಜೇಶ್ವರಿ ಯರನಾಳ ಸೇರಿದಂತೆ ಇತರರು ಇದ್ದರು.