ದೇಶದ ಮಹಾನಗರಗಳು, ನಗರಗಳು ದೊಡ್ಡ ಪಟ್ಟಣಗಳ ಚರಂಡಿಗಳು ಮತ್ತು ಮಲದ ಗುಂಡಿಗಳನ್ನು ಸ್ವಚ್ಛ ಮಾಡುವ ಶೇ.92ರಷ್ಟು ಸಿಬ್ಬಂದಿ ಪರಿಶಿಷ್ಟ ಜಾತಿ-ಪಂಗಡ ಹಾಗೂ ಹಿಂದುಳಿದ ಜಾತಿಗಳಿಗೆ ಸೇರಿದವರಾಗಿದ್ದಾರೆ ಈ ‘ಮೀಸಲಾತಿ’ಯನ್ನು ಉಗ್ರವಾಗಿ ಪ್ರತಿಭಟಿಸುವ ಅಪೂರ್ವ ಅವಕಾಶವೊಂದು ಮೀಸಲಾತಿ ವಿರೋಧಿಗಳಿಗೆ ಒದಗಿ ಬಂದಿದೆ.
ಕೇವಲ ಮಲವನ್ನು ಬಳಿಯುವ ಮತ್ತು ಮಲದ ಗುಂಡಿಗೆ ಇಳಿಯುವ 43,797 ಸಿಬ್ಬಂದಿಯ ಪೈಕಿ ಶೇ.97.2ರಷ್ಟು ಮಂದಿ ಪರಿಶಿಷ್ಟ ಜಾತಿಗಳಿಗೆ ಸೇರಿದವರು. ಉಳಿದಂತೆ ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ವರ್ಗದವರ ಪ್ರಮಾಣ ಸುಮಾರು ತಲಾ ಶೇ.1ರಷ್ಟು.
ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 3000 ನಗರ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾದ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ. ಈ ಸರ್ಕಾರಿ ಅಂಕಿಅಂಶಗಳ ಪ್ರಕಾರ ಮಲದ ಗುಂಡಿಗಳು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ 38,000 ಸಿಬ್ಬಂದಿ (ಶೇ.91.9) ಪರಿಶಿಷ್ಟರು ಮತ್ತು ಹಿಂದುಳಿದವರು. ಈ ಪೈಕಿ ಪರಿಶಿಷ್ಟ ಜಾತಿಗಳಿಗೆ ಸೇರಿದವರ ಪ್ರಮಾಣ ಶೇ.68.9. ಪರಿಶಿಷ್ಟ ಪಂಗಡಗಳಿಗೆ ಸೇರಿದವರು ಶೇ 8.3 ಇತರೆ ಹಿಂದುಳಿದ ವರ್ಗಗಳಿಗೆ ಸೇರಿದವರ ಪ್ರಮಾಣ ಶೇ.14.7. ಇನ್ನು ಸಾಮಾನ್ಯ ವರ್ಗಗಳಿಗೆ (ಜನರಲ್ ಕೆಟಗರಿ) ಸೇರಿದ ಸಿಬ್ಬಂದಿಯ ಪ್ರಮಾಣ ಕೇವಲ ಶೇ.8.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಮಂತ್ರಾಲಯ ಈ ಅಂಕಿಅಂಶಗಳನ್ನು ಸಂಗ್ರಹಿಸಿದೆ. ಚರಂಡಿಗಳು ಮತ್ತು ಮಲದ ಗುಂಡಿಗಳ ಸ್ವಚ್ಛತೆಯ ಕೆಲಸದ ಯಾಂತ್ರೀಕರಣ ಈ ಅಂಕಿಅಂಶ ಸಂಗ್ರಹದ ಉದ್ದೇಶವೆಂದು ಹೇಳಲಾಗಿದೆ. 2019-2023ರ ನಡುವೆ ಚರಂಡಿಗಳು ಮತ್ತು ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ 377 ಮಂದಿ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ‘ದಿ ಹಿಂದೂ’ ಪತ್ರಿಕೆಯ ವಿಶೇಷ ವರದಿ ಹೇಳಿದೆ.
2018ರ ದೇಶದಲ್ಲಿ ಮನುಷ್ಯರ ಮಲವನ್ನು ಸ್ವಚ್ಛ ಮಾಡುವ ಮನುಷ್ಯರ ಸಂಖ್ಯೆ 58,098 ಎಂದು ಗುರುತಿಸಲಾಗಿತ್ತು. 2018ರಿಂದ ಇಂತಹ ಮನುಷ್ಯರನ್ನು ಹೊಸದಾಗಿ ಗುರುತಿಸುವ ಕೆಲಸ ನಡೆದಿಲ್ಲ. ಈ ನಡುವೆ ಮನುಷ್ಯರ ಮಲವನ್ನು ಮನುಷ್ಯರೇ ಸ್ವಚ್ಛಗೊಳಿಸುತ್ತಿರುವ ಕುರಿತ 6,500ಕ್ಕೂ ಹೆಚ್ಚು ದೂರುಗಳನ್ನು ಸರ್ಕಾರ ಪರಿಶೀಲಿಸಿಲ್ಲ.
2018ರ ತನಕ ಗುರುತಿಸಲಾದ ಎಲ್ಲ 58,098 ಮಲ ಬಳಿವ ಮನುಷ್ಯರಿಗೆ ಒಂದೇ ಇಡುಗಂಟಾಗಿ ತಲಾ 40 ಸಾವಿರ ರುಪಾಯಿಗಳನ್ನು ನೀಡಲಾಗಿದೆ. ಈ ಪೈಕಿ 18,880 ಮಂದಿ ಬದಲಿ ಉದ್ಯೋಗಗಳಿಗೆ ಸಂಬಂಧಿಸಿದ ಕೌಶಲ್ಯ ತರಬೇತಿಯನ್ನು ಆಯ್ದುಕೊಂಡಿದ್ದರು. 2,051 ಮಂದಿ ಪರ್ಯಾಯ ವ್ಯಾಪಾರಗಳನ್ನು ನಡೆಸಲು ಯೋಜನೆಯ ಸಬ್ಸಿಡಿಗಳು-ಸಾಲಗಳನ್ನು ಆರಿಸಿಕೊಂಡರು.