ಪ್ರಧಾನಿ ಮೋದಿ ಅವರು ಕಪ್ಪು ಹಣ ಹೊರತರುತ್ತೇವೆ. ನಕಲಿ ನೋಟುಗಳ ಹಾವಳಿಗೆ ಬ್ರೇಕ್ ಹಾಕಿ, ಖೋಟಾ ನೋಟುಗಳು ಇಲ್ಲದಂತೆ ಮಾಡುತ್ತೇವೆಂದು ಹೇಳಿಕೊಂಡು ನೋಟು ಅಮಾನ್ಯೀಕರಣ ಮಾಡಿದ್ದರು. ಮುಂದುವರೆದು ಕೆಲವು ಮಾಧ್ಯಮಗಳು ಮೋದಿ ಹೊಸದಾಗಿ ತರುತ್ತಿರುವ ನೋಟುಗಳನ್ನು ನಕಲಿ ಮಾಡಲು ಸಾಧ್ಯವೇ ಇಲ್ಲ ಎಂದು ಭಾರೀ ಪ್ರಚಾರ ಕೊಟ್ಟಿದ್ದರು. ಆದರೆ, ಇಂದಿಗೂ ನಕಲಿ ನೋಟುಗಳ ಹಾವಳಿ ಮುಂದುವರೆದಿದೆ.
ವಿಷಾಧನೀಯ ಸಂಗತಿ ಅಂದ್ರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿಯೇ ನಕಲಿ ನೋಟುಗಳ ಹಾವಳಿ ಹೆಚ್ಚಳವಾಗಿದೆ. ನಟ ಅನುಪಮ್ ಖೇರ್ ಅವರ ಭಾವಚಿತ್ರವಿರುವ 500 ರೂ. ಮುಖಬೆಲೆಯ ಖೋಟಾ ನೋಟುಗಳು ಗುಜರಾತ್‌ನಲ್ಲಿ ಹರಿದಾಡುತ್ತಿವೆ. ನಕಲಿ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಬದಲಾಗಿ ನಟ ಅನುಪಮ್ ಖೇರ್ ಅವರ ಫೋಟೋ ಇರುವುದೂ ಅಚ್ಚರಿ ಮೂಡಿಸಿದೆ. ಈ ಖೋಟಾ ನೋಟುಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗುತ್ತಿವೆ.
ನಮ್ಮ ಕರೆನ್ಸಿ ನೋಟುಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಭಾವಚಿತ್ರವಿದೆ. ಆದರೂ, ಈ ಖೋಟಾ ನೋಟುಗಳಲ್ಲಿ ಅನುಪಮ್ ಅವರ ಚಿತ್ರಗಳು ಕಾಣಿಸಿಕೊಂಡಿವೆ. ವಂಚಕರು ಬರೋಬ್ಬರಿ 2,100 ಗ್ರಾಂ ಚಿನ್ನವನ್ನು ಖರೀದಿ ಮಾಡಲು ₹1.60 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಅಂಗಡಿಗೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಮಾಣಿಕ್ ಚೌಕ್ ಪ್ರದೇಶದಲ್ಲಿರುವ ಮೆಹುಲ್ ಠಕ್ಕರ್ ಎಂಬವರ ಚಿನ್ನದ ಅಂಗಿಡಗೆ ಬಂದಿದ್ದ ಇಬ್ಬರು ವಂಚಕರು, 2 ಕೆ.ಜಿ ಚಿನ್ನವನ್ನು ₹1.6 ಕೋಟಿಗೆ ಖರೀದಿ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆ ಪೈಕಿ, ಮೊದಲ ಕಂತಿನಲ್ಲಿ ₹1.30 ಕೋಟಿ ಹಾಗೂ ಎರಡನೇ ಕಂತಿನಲ್ಲಿ 30 ಲಕ್ಷ ನೀಡುವುದಾಗಿ ಭರವಸೆ ನೀಡಿದ್ದರು.
ಒಪ್ಪಂದದಂತೆ,ವಂಚಕರು ಠಕ್ಕರ್ ಅವರಿಗೆ ಹಣ ನೀಡಿದ್ದು, ಅದರಲ್ಲಿ ಅನುಪಮ್ ಖೇರ್ ಅವರ ಫೋಟೋಗಳಿರುವ ₹500 ಮುಖಬೆಲೆಯ ನಕಲಿ ನೋಟುಗಳನ್ನು ಕಳಗಡೆ ಇಟ್ಟು, ಮೇಲ್ಬಾಗದಲ್ಲಿ ಅಸಲಿ ನೋಟುಗಳನ್ನು ಇಟ್ಟಿದ್ದರು. ಆ ನಕಲಿ ನೋಟುಗಳ ಮೊತ್ತ ₹1.3 ಕೋಟಿ ಎಂದು ತಿಳಿದುಬಂದಿದೆ. ಅಲ್ಲದೆ, ನೋಟುಗಳನ್ನು ಪೂರ್ತಿ ಎಣಿಸುವ ಮುನ್ನವೇ ಅಂಗಡಿಯಿಂದ ಕಾಲ್ಕಿತ್ತಿದ್ದಾರೆ.
ಇನ್ನು, ಮೆಹುಲ್ ಠಕ್ಕರ್ ಅವರು ತನ್ನ ಉದ್ಯೋಗಿ ಭರತ್ ಜೋಶಿಗೆ ನೋಟುಗಳ ಬಂಡಲ್‌ಅನ್ನು ಎಣಿಸಲು ಕೊಟ್ಟಿದ್ದಾರೆ. ಆ ನೋಟುಗಳನ್ನು ಯಂತ್ರದ ಸಹಾಯದಿಂದ ಎಣಿಸುವಾಗ ಅದರಲ್ಲಿ ನಕಲಿ ನೋಟುಗಳಿವೆ ಎಂಬುದು ಗೊತ್ತಾಗಿದೆ.
ನಕಲಿ ನೋಟುಗಳನ್ನು ಕಂಡ ಮೆಹುಲ್ ಠಕ್ಕರ್ ಮತ್ತು ಭರತ್ ಜೋಶಿ ಅಹಮದಾಬಾದ್‌ನ ನವರಂಗ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೆಹುಲ್ ಠಕ್ಕರ್ ಅವರ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ಇಬ್ಬರು ಆರೋಪಿಗಳನ್ನು ಗುರುತಿಸಿದ್ದಾರೆ. ಆರೋಪಿಗಳನ್ನು ಹಿಡಿಯಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.