ಬಜಾಜ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ 42 ವರ್ಷದ ವ್ಯಕ್ತಿಯೊಬ್ಬರು ‘ಕೆಲಸದ ಒತ್ತಡ’ದಿಂದ ಬಳಲಿರುವುದಾಗಿ ಹೇಳಿಕೊಂಡಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರ ಪ್ರದೇಶದ ಝಾನ್ಸಿಯಲ್ಲಿ ‘ಏರಿಯಾ ಮ್ಯಾನೇಜರ್’ ಆಗಿ ಕೆಲಸ ಮಾಡುತ್ತಿದ್ದ ತರುಣ್ ಸಕ್ಸೇನಾ ಆತ್ಮಹತ್ಯೆ ಮಾಡಿಕೊಂಡಿದ್ದರೆ. “ತಮ್ಮ ಹಿರಿಯ ಅಧಿಕಾರಿಗಳು ಕಳೆದ ಎರಡು ತಿಂಗಳ ಕೆಲಸದ ಗುರಿಯನ್ನು ಪೂರೈಸುವಂತೆ ಒತ್ತಡ ಹೇರುತ್ತಿದ್ದಾರೆ. ಸಂಬಳ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕಳೆದ 45 ದಿನಗಳಿಂದ ನಿದ್ರೆಯೂ ಇಲ್ಲ” ಎಂದು ತಮ್ಮ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಆರೋಪಗಳ ಬಗ್ಗೆ ಬಜಾಜ್ ಕಂಪನಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತರುಣ್ ಅವರು ಝಾನ್ಸಿ ಪ್ರದೇಶದಲ್ಲಿ ಬಜಾಜ್ ಫೈನಾನ್ಸ್ ಲೋನ್‌ಗಳ EMIಗಳನ್ನು ಸಂಗ್ರಹಿಸುವ ಕೆಲಸಕ್ಕೆ ನೇಮಿಸಲಾಗಿತ್ತು. ಆದರೆ, ಹಲವಾರು ಕಾರಣಗಳಿಂದಾಗಿ ಅವರು ತಮಗೆ ನೀಡಲಾಗಿದ್ದ ಗುರಿ (ಟಾರ್ಗೆಟ್)ಅನ್ನು ಪೂರೈಸಲಾಗಿರಲಿಲ್ಲ. ಇದರಿಂದ, ಅವರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದರು ಎಂದು ತಿಳಿದುಬಂದಿದೆ
“ಕಂಪನಿಯಲ್ಲಿ ಹಿರಿಯರು ಪದೇ ಪದೇ ಅವಮಾನ ಮಾಡಿದ್ದಾರೆ. ನಾನು ಭವಿಷ್ಯದ ಬಗ್ಗೆ ತುಂಬಾ ಚಿಂತಿತನಾಗಿದ್ದೇನೆ. ನಾನು ಯೋಚಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದೇನೆ” ಎಂದು ತರುಣ್ ಹೇಳಿದ್ದಾರೆ.
“ನಾನು 45 ದಿನಗಳಿಂದ ನಿದ್ದೆ ಮಾಡಿಲ್ಲ. ನಾನು ಊಟ ಮಾಡುವುದಕ್ಕೂ ಕಷ್ಟಪಟ್ಟಿದ್ದೇನೆ. ನಾನು ಸಾಕಷ್ಟು ಒತ್ತಡದಲ್ಲಿದ್ದೇನೆ. ಏನೇ ಆದರೂ ನೀಡಿರುವ ಗುರಿಗಳನ್ನು ಪೂರೈಸಬೇಕು ಅಥವಾ ಕೆಲಸ ಬಿಡಬೇಕೆಂದು ಹಿರಿಯ ವ್ಯವಸ್ಥಾಪಕರು ನನಗೆ ಒತ್ತಡ ಹೇರುತ್ತಿದ್ದಾರೆ” ಎಂದು ತರುಣ್ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ.
ಸಾಲ ವಸೂಲಾತಿ ಹೆಚ್ಚಿಸುವಂತೆ ತರುಣ್ ಅವರಿಗೆ ಕಂಪನಿಯು ಒತ್ತಡ ಹೇರುತ್ತಿತ್ತು ಎಂದು ತರುಣ್ ನಿವಾಸ ಸಮೀಪವೇ ವಾಸಿಸುತ್ತಿರುವ ಅವರ ಸಂಬಂಧಿ ಗೌರವ್ ಸಕ್ಸೇನಾ ಆರೋಪಿಸಿದ್ದರು. “ಇಂದು ಬೆಳಿಗ್ಗೆ 6 ಗಂಟೆಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ, ಅವರ ಹಿರಿಯರು ಮಾನಸಿಕ ಒತ್ತಡವನ್ನು ಹೇಳಿದ್ದರು. ಅವರನ್ನು ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದರು” ಎಂದು ಹೇಳಿದ್ದಾರೆ.
“ಆತ್ಮಹತ್ಯೆ ಟಿಪ್ಪಣಿಯಲ್ಲಿ ಅವರ ಹಿರಿಯರು ಗುರಿ ಪೂರೈಸುವಂತೆ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸಲಾಗಿದೆ. ಕುಟುಂಬದಿಂದ ನಮಗೆ ದೂರು ಬಂದರೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ವಿನೋದ್ ಕುಮಾರ್ ಗೌತಮ್ ಹೇಳಿದ್ದಾರೆ.
ಇತ್ತೀಚೆಗೆ, ಅರ್ನ್ಸ್ಟ್ ಅಂಡ್ ಯಂಗ್ ಇಂಡಿಯಾ ಉದ್ಯೋಗಿ, ಚಾರ್ಟರ್ಡ್ ಅಕೌಂಟೆಂಟ್ ಅನ್ನಾ ಸೆಬಾಸ್ಟಿಯನ್ ಪೆರೈಲ್ (26 ವರ್ಷ) ಕೂಡ ಕೆಲಸ ಒತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ತಮ್ಮ ಸಾವಿಗೆ ಹಿರಿಯ ವ್ಯವಸ್ಥಾಪಕರೇ ಕಾರಣವೆಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.