ಯುಜಿಡಿ ಒಳಚರಂಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಮಲೀನ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಅಗತ್ಯ ಜಮೀನು ಪಡೆಯಲು ಗುಬ್ಬಿ ಅಮಾನಿಕೆರೆ ಗ್ರಾಮದ ಬಳಿ 3.2 ಎಕರೆ ಜಮೀನು ವಶಕ್ಕೆ ಪಡೆಯಲು ಎಲ್ಲಾ ಪ್ರಕ್ರಿಯೆ ಅಂತಿಮವಾಗಿದ್ದು ಜಮೀನು ಮಾಲೀಕರಿಗೆ ಹಣ ಸಂದಾಯ ಮಾಡಲು ಚರ್ಚೆ ನಡೆಸಿ ಘಟಕ ನಿರ್ಮಾಣಕ್ಕೆ ಸರ್ವ ಸದಸ್ಯರ ಸಭೆಯಲ್ಲಿ ಅಸ್ತು ನೀಡಲಾಯಿತು.
ಗುಬ್ಬಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಸಮ್ಮುಖದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಕಾಮಗಾರಿ ಪ್ರಸ್ತಾವನೆಗೆ ಅಗತ್ಯ ಮೂರು ಕೋಟಿ ರೂ ವ್ಯಯಕ್ಕೆ ಚರ್ಚೆ ನಡೆಸಲಾಯಿತು.ಬಹು ದಿನಗಳ ನಂತರದಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ ಜನರ ಬಳಕೆಗೆ ಸಿದ್ದವಾಗಲಿದೆ. ಈ ನಿಟ್ಟಿನಲ್ಲಿ ಕೊನೆಯ ಹಂತದ ಶುದ್ಧೀಕರಣ ಘಟಕ ಸ್ಥಾಪನೆಗೆ ಭೂಮಿ ಪಡೆಯುವ ತಾಂತ್ರಿಕ ಅಂಶದಿಂದ ವಿಳಂಬವಾಗಿತ್ತು. ಸರ್ಕಾರದಿಂದ ಹಣದ ಅವಶ್ಯಕತೆ ಇತ್ತು. ಈಗಾಗಲೇ 28 ಕೋಟಿ ವ್ಯಯವಾಗಿರುವ ಒಳ ಚರಂಡಿ ಕಾಮಗಾರಿ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಈ ಜೊತೆಗೆ ಒಟ್ಟು 33 ಕೋಟಿ ರೂಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರಿಂದ ಚಾಲನೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಿಲ್ಲ. ಸಹಕಾರ ಸಂಘಗಳ ಚುನಾವಣೆಗೆ ನಾನು ಹೋಗಲ್ಲ. ನನಗೆ ಅವಶ್ಯವಿಲ್ಲ. ಸಹಾಯಕ ನಿಬಂಧಕರು ಕರೆದ ಡೈರಿ ಕಾರ್ಯದರ್ಶಿಗಳ ಸಭೆ ಬಗ್ಗೆ ಮಾಹಿತಿ ಇಲ್ಲ. ನೋಟಿಫಿಕೇಶನ್ ಆದ ಮೇಲೆ ನೀತಿ ಸಂಹಿತೆ ಜಾರಿಗೆ ಬರುತ್ತೆ. ಸಭೆಯು ಅಧಿಕಾರಿಗಳು ನಡೆಸಿರಬಹುದು. ಶಾಸಕನಾಗಿ ನಾನು ಹಾಲಿನ ಡೈರಿ ಸದಸ್ಯರ ಸಭೆ ನಡೆಸಬಹುದಾಗಿದೆ. ಈ ಸಭೆ ನಾನು ಕರೆದಿದ್ದಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಸಾಮಾನ್ಯ ಸಭೆಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ, ಮುಖ್ಯಾಧಿಕಾರಿ ಮಂಜುಳಾದೇವಿ, ಇಂಜಿನಿಯರ್ ಬಿಂದುಸಾರ, ಯುಜಿಡಿ ಇಂಜಿನಿಯರ್ ಚಂದೇಶೇಖರ್ ಸೇರಿದಂತೆ ಪಪಂ ಸದಸ್ಯರು ಹಾಜರಿದ್ದರು.
