ಏಕಕಾಲಕ್ಕೆ ಚುನಾವಣೆ ನಡೆಸುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಈ ಕುರಿತು ಇರುವ ಟೀಕೆ ಮತ್ತು ಕಳವಳಗಳನ್ನು ನಿರ್ಲಕ್ಷಿಸಿ 'ಒಂದು ದೇಶ, ಒಂದು ಚುನಾವಣೆ' ಯೋಚನೆ ಜಾರಿಗೆ ಮುಂದಾದರೆ ಐತಿಹಾಸಿಕ ಪ್ರಮಾದವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ನಡೆಸುವ ‘ಒಂದು ದೇಶ, ಒಂದು ಚುನಾವಣೆ’ ಯೋಜನೆಯ ಬಗ್ಗೆ ಮಾಜಿ ರಾಷ್ಟ್ರಪತಿ ಹಾಗೂ ಸಮಿತಿಯ ನೇತೃತ್ವದ ವಹಿಸಿದ್ದ ರಾಮನಾಥ್ ಕೋವಿಂದ್ ಅವರ ಉನ್ನತ ಮಟ್ಟದ ಸಮಿತಿಯು ಮಾರ್ಚ್‌ನಲ್ಲಿ ಸಲ್ಲಿಸಿದ್ದ 18,626 ಪುಟಗಳ ವರದಿಯನ್ನು ಕೇಂದ್ರ ಸಚಿವ ಸಂಪುಟ ಕಳೆದ ವಾರ ಅಂಗೀಕರಿಸಿದೆ. ಈ ಮೂಲಕ ಎನ್‌ಡಿಎ ನೇತೃತ್ವ ಬಿಜೆಪಿ ಸರ್ಕಾರ ತನ್ನ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಮುಂದಾಗಿದೆ. ಏಕ ಕಾಲದಲ್ಲಿ ಒಂದು ಚುನಾವಣೆ ನಡೆಸಲು ಸಂವಿದಾನಕ್ಕೆ 18 ತಿದ್ದುಪಡಿಗಳನ್ನು ತರಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ. ಹಲವು ವೈವಿಧ್ಯತೆಗಳನ್ನು ಹೊಂದಿರುವ ಹತ್ತಾರು ರಾಜ್ಯಗಳು, ಪಕ್ಷಗಳು, ವಿವಿಧ ಚುನಾವಣಾ ದಿನಾಂಕಗಳನ್ನು ಹೊಂದಿರುವ ನಮ್ಮ ಒಕ್ಕೂಟ ವ್ಯವಸ್ಥೆಯಲ್ಲಿ ಒಂದೇ ಸಮಯದಲ್ಲಿ ಚುನಾವಣೆ ನಡೆಸುವುದು ಕಷ್ಟ ಮಾತ್ರವಲ್ಲ ಹಲವು ಸವಾಲುಗಳು ಎದುರಾಗುತ್ತವೆ.
ಭಾರತದ 28 ರಾಜ್ಯ ಹಾಗೂ 8 ಕೆಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರದೊಂದಿಗೆ ಏಕಕಾಲಕ್ಕೆ ಚುನಾವಣೆ ನಡೆಯುವುದು ಕೇವಲ ಮೂರು ರಾಜ್ಯಗಳಾದ ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಮಾತ್ರ. ಉಳಿದ ರಾಜ್ಯಗಳಿಗೆ ವಿವಿಧ ವರ್ಷಗಳಲ್ಲಿ ಚುನಾವಣೆ ನಡೆಯುತ್ತವೆ. 2024ರಲ್ಲಿ ಜಮ್ಮು ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ನಡೆಯಲಿವೆ. 2025ರಲ್ಲಿ ದೆಹಲಿ ಹಾಗೂ ಬಿಹಾರ ವಿಧಾನಸಭೆಗಳಿಗೆ, ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಪುದುಚೆರಿ ವಿಧಾನಸಭೆಗಳ ಅವಧಿ 2026ರಲ್ಲಿ ಮುಗಿಯಲಿದೆ. ಹಾಗೆಯೇ ಗೋವಾ, ಗುಜರಾತ್, ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ವಿಧಾನಸಭೆಗಳಿಗೆ 2027ಕ್ಕೆ ನಡೆದರೆ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ, ತೆಲಂಗಾಣ, ಕರ್ನಾಟಕ ವಿಧಾನಸಭೆಗಳಿಗೆ 2028ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ.
ಕೋವಿಂದ್ ಸಮಿತಿ ನೀಡಿರುವ ಶಿಫಾರಸ್ಸಿನ ಅನ್ವಯ ಒಂದು ಚುನಾವಣೆ ಅನುಷ್ಠಾನಕ್ಕಾಗಿ ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದ ಎರಡು ಮಸೂದೆಗಳು ಸೇರಿ ಒಟ್ಟು ಮೂರು ಮಸೂದೆಗಳನ್ನು ಮಂಡಿಸಲು ನಿರ್ಧರಿಸಲಾಗಿದೆ. ತಿದ್ದುಪಡಿಗಳ ಅನ್ವಯ ರಾಜ್ಯಗಳ ವಿದ್ಯಮಾನಗಳಿಗೆ ಸಂಬಂಧಿಸಿದ್ದರಿಂದ, ಇದಕ್ಕೆ ಕನಿಷ್ಠ ಶೇ. 50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯ ಎಂದು ಸಮಿತಿ ಹೇಳಿದೆ. ಅದೇ ರೀತಿ ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶ ಸರ್ಕಾರ ಕಾಯ್ದೆ–1991, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ ಕಾಯ್ದೆ–1963 ಹಾಗೂ ಜಮ್ಮು–ಕಾಶ್ಮೀರ ಪುನರ್‌ರಚನೆ ಕಾಯ್ದೆ–2019ಕ್ಕೆ ತಿದ್ದುಪಡಿ ತರುವುದು ಅಗತ್ಯ ಎಂದು ಸಮಿತಿ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಧಾನಸೌಧದಲ್ಲೇ ಅತ್ಯಾಚಾರ? ಇದು ಕೇವಲ ತನಿಖೆಯಿಂದ ಬಗೆಹರಿಯುವ ಸಂಗತಿಯಲ್ಲ
ಇದರೊಂದಿಗೆ ಚುನಾವಣೆಯನ್ನು ಎರಡು ಹಂತಗಳಲ್ಲಿ ಕಾರ್ಯಗತಗೊಳಿಸುವುದು. ಮೊದಲ ಹಂತದಲ್ಲಿ ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆಗೆ ಚುನಾವಣೆ ನಡೆಸುವುದು. ಎರಡನೇ ಹಂತದ ಅನ್ವಯ ಲೋಕಸಭೆ, ವಿಧಾನಸಭೆ ಚುನಾವಣೆಗಳೊಂದಿಗೆ ಪುರಸಭೆ ಹಾಗೂ ಪಂಚಾಯಿತಿ ಚುನಾವಣೆಗಳನ್ನು ಸೇರಿಸುವುದು. ಒಂದು ವೇಳೆ ಲೋಕಸಭೆ, ವಿಧಾನಸಭೆಗಳೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲಾಗದಿದ್ದರೆ, ಸಾರ್ವರ್ತಿಕ ಚುನಾವಣೆ ನಡೆದು ನೂರು ದಿನಗಳೊಳಗೆ ನಡೆಸುವುದು. ಅಗತ್ಯಬಿದ್ದರೆ ವಿಧಾನಸಭೆಯ ಅವಧಿಯನ್ನು ಮೊಟಕುಗೊಳಿಸಲಾಗುವುದು. ಇವೆಲ್ಲ ಚುನಾವಣೆಯನ್ನು ಒಂದೇ ಬಾರಿ ನಡೆಸಲು ಸಂವಿಧಾನಕ್ಕೆ 18 ತಿದ್ದುಪಡಿಗಳನ್ನು ತರುವುದು ಸಮಿತಿಯಲ್ಲಿರುವ ಪ್ರಮುಖ ವರದಿಗಳು.
ಸ್ವತಂತ್ರ ಭಾರತದಲ್ಲಿ ಸಂವಿಧಾನ ರಚನೆಯ ನಂತರ 1951 ಮತ್ತು 1967ರ ನಡುವೆ ಏಕಕಾಲದಲ್ಲಿ ಚುನಾವಣೆ ನಡೆಯುತ್ತಿದ್ದ ಕಾರಣ ಆ ಪ್ರಕ್ರಿಯೆಯನ್ನು ‘ಏಕಕಾಲದ ಚುನಾವಣೆ’ ಎಂದೇ ಕರೆಯಲಾಗುತ್ತಿತ್ತು ಸರ್ಕಾರಿ ದಾಖಲೆಗಳಲ್ಲೂ ಇದೇ ರೀತಿ ಉಲ್ಲೇಖಿಸಲಾಗುತ್ತಿತ್ತು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಸಲ್ಲಿಕೆಯಾದ ಕಾನೂನು ಆಯೋಗದ 1999ರ ವರದಿಯಲ್ಲಿ ‘ಒಂದು ದೇಶ, ಒಂದು ಚುನಾವಣೆ’ ಎಂದು ಬಳಸಲಾಗಿತ್ತು. ಆನಂತರ ಇದೇ ಪರಿಭಾಷೆಯನ್ನು ಪ್ರಮುಖವಾಗಿ ಬಳಸಲಾಗುತ್ತಿದೆ. ಅದರ ನಂತರ ಲೋಕಸಭೆ, ವಿಧಾನಸಭೆ ವಿಸರ್ಜನೆ, ಪ್ರಾದೇಶಿಕ ಪಕ್ಷಗಳು ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದವು. ಕೆಲವಿದ್ದ ಪಕ್ಷಗಳು ನೂರಾರಾದವು. ರಾಜಕೀಯ ಕಾರಣಗಳಿಗಾಗಿ ಹಲವಾರು ಬಾರಿ ವಿರೋಧ ಪಕ್ಷಗಳಿರುವ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಯಿತು. ಹೀಗೆ ಹತ್ತಾರು ಕಾರಣಗಳಿಂದ ಚುನಾವಣಾ ದಿನಾಂಕಗಳು ಬದಲಾದವು.
ರಾಷ್ಟ್ರೀಯ ವಿಚಾರಗಳು ಮುನ್ನಲೆಗೆ – ಹಲವು ಸವಾಲುಗಳು
ಏಕ ಕಾಲದ ಚುನಾವಣೆಗೆ ಬಿಜೆಪಿ ಹಾಗೂ ಕೆಲ ಮಿತ್ರ ಪಕ್ಷಗಳು ಹೊರತುಪಡಿಸಿ, ಬಹುತೇಕ ಪಕ್ಷಗಳ ಬೆಂಬಲವಿಲ್ಲ. ಸದ್ಯದ ಸರ್ಕಾರಕ್ಕೂ ಸಂಪೂರ್ಣ ಬಹುಮತವಿಲ್ಲದೆ ಮಿತ್ರಪಕ್ಷಗಳನ್ನು ನೆಚ್ಚಿಕೊಂಡಿದೆ. ಬಿಜೆಪಿಯ ಈ ವಿಚಾರವು ಕೂಡ ದೇಶದ ವೈವಿಧ್ಯಮಯ ರಾಜಕೀಯ ಸನ್ನಿವೇಶ, ಸಮಾಜದಲ್ಲಿನ ವೈವಿಧ್ಯ ಹಾಗೂ ದೇಶದ ಜನಜೀವನದಲ್ಲಿನ ವೈವಿಧ್ಯಕ್ಕೆ ವಿರುದ್ಧವಾಗಿದೆ. ಅಷ್ಟಲ್ಲದೆ, ಈ ವ್ಯವಸ್ಥೆಯು ದೇಶದ ಒಕ್ಕೂಟ ಸ್ವರೂಪಕ್ಕೆ ವಿರುದ್ಧವಾಗಿದೆ. ಏಕ ಚುನಾವಣೆಯು ರಾಷ್ಟ್ರೀಯ ಪಕ್ಷಗಳಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುತ್ತದೆ ವಿನಾ ಪ್ರಾದೇಶಿಕ ವಿಚಾರಗಳು, ಸಮಸ್ಯೆಗಳು ಮುನ್ನಲೆಗೆ ಬರುವುದಿಲ್ಲ. ಹೊಸ ವ್ಯವಸ್ಥೆಯು ಜಾರಿಗೆ ಬಂದರೆ, ರಾಜ್ಯ ಮತ್ತು ಪ್ರಾದೇಶಿಕ ವಿಚಾರಗಳಿಗಿಂತಲೂ ಹೆಚ್ಚಾಗಿ ಚುನಾವಣೆಗಳಲ್ಲಿ ರಾಷ್ಟ್ರೀಯ ವಿಷಯಗಳೆ ಪ್ರಧಾನವಾಗುತ್ತವೆ.
ಏಕ ಕಾಲದಲ್ಲಿ ಚುನಾವಣೆ ನಡೆಸಬೇಕೆಂದರೆ ಹಲವು ಸವಾಲುಗಳು ಎದುರಾಗುತ್ತವೆ. ಲೋಕಸಭೆಯ ಅವಧಿಯನ್ನು ನಿಗದಿಪಡಿಸುವ ಸಂವಿಧಾನದ 83ನೇ ವಿಧಿ ಮತ್ತು ಲೋಕಸಭೆಯನ್ನು ವಿಸರ್ಜನೆ ಮಾಡಲು ಅವಕಾಶ ಮಾಡಿಕೊಡುವ 85ನೇ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಅದೇ ರೀತಿ ರಾಜ್ಯ ವಿಧಾನಸಭೆಗಳ ಅವಧಿಯನ್ನು ನಿಗದಿಪಡಿಸುವ ಮತ್ತು ಅವನ್ನು ವಿಸರ್ಜನೆ ಮಾಡಲು ಅವಕಾಶ ಮಾಡಿಕೊಡುವ ಸಂವಿಧಾನದ 172 ಮತ್ತು 174ನೇ ವಿಧಿಗಳಿಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಜತೆಗೆ, ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲು ಅವಕಾಶ ಮಾಡಿಕೊಡುವ ಸಂವಿಧಾನದ 356ನೇ ವಿಧಿಗೂ ತಿದ್ದುಪಡಿ ತರಬೇಕಾಗುತ್ತದೆ. ಹಾಗೆಯೇ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು. ಇದರ ಜೊತೆಗೆ ಸಂವಿಧಾನದ ಕನಿಷ್ಠ ಐದು ಪರಿಚ್ಛೇದಗಳಿಗೆ ತಿದ್ದುಪಡಿ ತರಬೇಕು. ಹಲವು ರಾಜ್ಯಗಳ ವಿಧಾನಸಭೆಯ ಅವಧಿಯನ್ನು ಮೊಟಕುಗೊಳಿಸಿದರೆ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿದಂತಾಗುತ್ತದೆ.
ಒಂದು ವೇಳೆ ಏಕ ಚುನಾವಣೆ ಜಾರಿಗೊಂಡು ನಿರಂತರವಾಗಿ ಕಾರ್ಯಗತವಾಗುವ ಸಾಧ್ಯತೆಯೂ ಕಡಿಮೆ. ಇದಕ್ಕೆ ಒಂದು ಸಣ್ಣ ಉದಾಹರಣೆಯನ್ನು ಕೊಡಬಹುದು. ಲೋಕಸಭೆ ಹಾಗೂ ವಿಧಾನಸಭೆಗೆ 2025ರಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುತ್ತದೆ ಎಂದಿಟ್ಟುಕೊಳ್ಳಿ. ಆ ವಿಧಾನಸಭೆಯ ಅವಧಿ 2029ರವರೆಗೂ ಇರುತ್ತದೆ. ಎರಡೂ ಸರ್ಕಾರಗಳ ಅವಧಿ 2030ಕ್ಕೆ ಇರುತ್ತದೆ. ಕೆಲವು ರಾಜ್ಯಗಳ ವಿಧಾನಸಭೆಯ ಅವಧಿ ಅಲ್ಪಮತದ ಕಾರಣದಿಂದಲೋ ಅಥವಾ ಬೇರೆ ಕಾರಣದಿಂದಲೋ 2028ರಲ್ಲೇ ವಿಧಾನಸಭೆ ವಿಸರ್ಜನೆಯಾಗಿಬಿಡುತ್ತದೆ. ಆಗ ಮತ್ತೆ ಹೊಸ ಸಮಸ್ಯೆ ಶುರುವಾಗುತ್ತದೆ. ಇವೆಲ್ಲ ಕಾರಣಗಳಿಂದಲೂ ಒಂದು ಚುನಾವಣೆಗೆ ಹಲವು ಸಮಸ್ಯೆಗಳಿವೆ. ಅಲ್ಲದೇ ಈ ವ್ಯವಸ್ಥೆಯು ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಪದೇ ಪದೇ ಅವಕಾಶ ಮಾಡಿಕೊಡುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಪ್ರಾದೇಶಿಕ ರಾಜಕೀಯ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ವಿವಿಧ ಸರ್ಕಾರೇತರ ಸಂಘಸಂಸ್ಥೆಗಳು ಮಾತ್ರವಲ್ಲದೆ ಹಲವು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ಬೊಕ್ಕಸಕ್ಕೆ ಹೊರೆ ಎನ್ನುವುದು ಅಸತ್ಯ
ಏಕ ಚುನಾವಣೆಗೆ ಬಿಜೆಪಿ ಸರ್ಕಾರ ನೀಡಿರುವ ಪ್ರಮುಖ ಕಾರಣವೆಂದರೆ ಖರ್ಚು ಕಡಿಮೆಯಾಗುತ್ತದೆ ಎನ್ನುವುದಾಗಿದೆ. 2019 ರ ಲೋಕಸಭಾ ಚುನಾವಣೆಗೆ 60,000 ಕೋಟಿ ರೂ. ಮತ್ತು 2024 ರ ಸಾರ್ವರ್ತಿಕ ಚುನಾವಣೆಗೆ 1,35,000 ಕೋಟಿ ರೂ. ವೆಚ್ಚವಾಗಿತ್ತು. ಆಗಾಗ ಚುನಾವಣೆಗಳು ನಡೆದರೆ ದೇಶದ ಬೊಕ್ಕಸಕ್ಕೆ ಹೊರೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ಒಂದು ಚುನಾವಣಾ ವಿಷಯದಲ್ಲಿ ಹೇಳುತ್ತಲೇ ಬರುತ್ತಿದೆ. ಆದರೆ ವಾಸ್ತವವಾಗಿ ಒಂದೇ ಬಾರಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ನಡೆಸಿದರೆ ಬೊಕ್ಕಸಕ್ಕೆ ಆಗುವ ಉಳಿತಾಯ ಕೇವಲ 5 ಸಾವಿರ ಕೋಟಿ ರೂ. ಮಾತ್ರ. ಕೇಂದ್ರ ವಾರ್ಷಿಕ ಬಜೆಟ್ 30 ಲಕ್ಷ ಕೋಟಿ ಮೀರುತ್ತದೆ. ಇದರಲ್ಲಿ 5 ಸಾವಿರ ಕೋಟಿ ರೂಪಾಯಿ ಅತ್ಯಂತ ಸಣ್ಣ ಮೊತ್ತ. ಇನ್ನೂ ಮುಖ್ಯ ವಿಚಾರವೆಂದರೆ ಚುನಾವಣೆಗೆ ಬೇಕಾದ ಸೌಲಭ್ಯ ಪರಿಕರಗಳನ್ನು ಕೊಳ್ಳಲು ಸಾವಿರಾರು ಕೋಟಿ ಹೊಂದಿಸಬೇಕಾಗುತ್ತದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ದೇಶದಲ್ಲಿ ಈಗ ಇರುವುದಕ್ಕಿಂತ ಹೆಚ್ಚಿನ ಇವಿಎಂಗಳ (ಎಲೆಕ್ಟ್ರಾನಿಕ್ ಮತಯಂತ್ರ) ಅಗತ್ಯವಿರುತ್ತದೆ. ಜತೆಗೆ ವಿವಿ-ಪ್ಯಾಟ್ ಯಂತ್ರಗಳು, ಅವುಗಳ ಸಂಗ್ರಹ ಮತ್ತು ನಿರ್ವಹಣೆಗೆ ಅಪಾರಮಟ್ಟದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಕಾನೂನು ಆಯೋಗವು 2015ರಲ್ಲಿ ನೀಡಿದ್ದ ವರದಿಯಲ್ಲಿ ಇವಿಎಂಗಳನ್ನು ಮಾತ್ರ ಹೊಂದಿಸಿಕೊಳ್ಳಲು 19,500 ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಈಗ ಆ ವೆಚ್ಚ ಇನ್ನಷ್ಟು ಹೆಚ್ಚಾಗಲಿದೆ. ಅಲ್ಲದೆ ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಯು ಹೆಚ್ಚುವರಿ ದಿನಗಳವರೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ಸಾಗಣೆ ವೆಚ್ಚ-ಊಟ, ವಸತಿ ವೆಚ್ಚವೂ ಗಣನೀಯ ಮಟ್ಟದಲ್ಲಿ ಏರಿಕೆಯಾಗಲಿದೆ ಎಂಬುದನ್ನು ವರದಿಗಳಲ್ಲಿ ತಿಳಿಸಲಾಗಿದೆ.
‘ಒಂದು ದೇಶ, ಒಂದು ಚುನಾವಣೆ’ ಯೋಜನೆ ಕುರಿತು ಇರುವ ಪ್ರಶ್ನೆಗಳು, ಕಳವಳಗಳು, ಟೀಕೆಗಳು ಮತ್ತು ವಿರೋಧಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಕೋವಿಂದ್ ನೇತೃತ್ವ ಸಮಿತಿಯು ಮಾಡಿಲ್ಲ. ಕೇಂದ್ರ ಸರ್ಕಾರ ಕೂಡ ಈ ಯಾವುದೇ ಪ್ರಶ್ನೆಗಳಿಗೆ ಉತ್ತರವನ್ನು ನೀಡಿಲ್ಲ. ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳು ಸ್ಥಳೀಯ ಸಮಸ್ಯೆಗಳು, ವಿಚಾರಗಳ ಆಧಾರದಲ್ಲಿ ನಡೆಯುತ್ತವೆ. ಆದರೆ, ಏಕಕಾಲಕ್ಕೆ ಚುನಾವಣೆ ನಡೆದರೆ ಇವೆಲ್ಲವೂ ಮರೆಯಾಗುತ್ತವೆ. ರಾಷ್ಟ್ರೀಯ ಪಕ್ಷಗಳು ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ತಮ್ಮದೇ ರೀತಿಯ ಅನುಕೂಲಗಳನ್ನು ಪಡೆಯುತ್ತವೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ನಡುವಣ ವ್ಯತ್ಯಾಸವನ್ನು ಗುರುತಿಸುವಷ್ಟು ವಿವೇಚನೆಯು ಮತದಾರರಿಗೆ ಇದೆ ಎಂದು ಸಮಿತಿ ಹೇಳಿದೆ. ಆದರೆ ಪರಿಪೂರ್ಣವಾಗಿ ವಿವರಿಸಿಲ್ಲ. ಏಕಕಾಲಕ್ಕೆ ಚುನಾವಣೆ ನಡೆಸುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಈ ಕುರಿತು ಇರುವ ಟೀಕೆ ಮತ್ತು ಕಳವಳಗಳನ್ನು ನಿರ್ಲಕ್ಷಿಸಿ ‘ಒಂದು ದೇಶ, ಒಂದು ಚುನಾವಣೆ’ ಯೋಚನೆ ಜಾರಿಗೆ ಮುಂದಾದರೆ ಐತಿಹಾಸಿಕ ಪ್ರಮಾದವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
– ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್
