ಮಹಿಳೆಯೊಬ್ಬರನ್ನು ಆಕೆಯ ಇಬ್ಬರು ಪುತ್ರರು ಮತ್ತು ಸೊಸೆಯೇ ಮರಕ್ಕೆ ಕಟ್ಟಿ, ಜೀವಂತವಾಗಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ತ್ರಿಪುರಾದ ಚಂಪಕ್‌ನಗರದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ವಿಕೃತಿಗೆ ಬಲಿಯಾದ ಮಹಿಳೆಯನ್ನು 55 ವರ್ಷದ ಮಿನಾತಿ ದೇಬನಾಥ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಮ್ಮ ಮನೆಯ ಹಿಂದಿನ ಮರದ ಬಳಿ ಮಹಿಳೆಯ ಸುಟ್ಟ ದೇಹವನ್ನು ಪೊಲೀಸರು ಪತ್ತೆ ಮಾಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾಇಸಿದ್ದಾರೆ.
ಆಕೆಯನ್ನು ಆಕೆಯ ಇಬ್ಬರು ಮಕ್ಕಳಾದ ರಣಬೀರ್ ದೇಬನಾಥ್, ಬಿಪ್ಲಬ್ ದೇಬನಾಥ್ ಹಾಗೂ ರಣಬೀರ್ ಅವರ ಪತ್ನಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೂವರನ್ನೂ ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ಮೃತ ಮಹಿಳೆ ಮಿನಾತಿ ದೇಬನಾಥ್ ಅವರಿಗೆ ಮೂವರು ಗಂಡು ಮಕ್ಕಳಿದ್ದಾರೆ. ಅವರಲ್ಲಿ ಹಿರಿಯ ಮಗ ಅಗರ್ತಲಾದಲ್ಲಿ ವಾಸಿಸುತ್ತಿದ್ದಾರೆ. 2022ರಲ್ಲಿ ತಮ್ಮ ಪತಿಯನ್ನು ಕಳೆದುಕೊಂಡ ಮಹಿಳೆ, ತಮ್ಮ ಇಬ್ಬರು ಮಕ್ಕಳೊಂದಿಗೆ ಚಂಪಕ್‌ನಗರದಲ್ಲಿ ವಾಸಿಸುತ್ತಿದ್ದರು.
ಆಕೆಯ ಹತ್ಯೆಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಕೌಟುಂಬಿಕ ಕಲಹದ ಕಾರಣಕ್ಕೆ ಹತ್ಯೆ ನಡೆದಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.