ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಸೋಮವಾರ ತಡರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ಅಥವಾ ರಜನಿಕಾಂತ್ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.
73 ವರ್ಷದ ನಟ ಮಂಗಳವಾರ (ಅಕ್ಟೋಬರ್ 1) ಕೆಲವು ಆರೋಗ್ಯ ತಪಾಸಣೆಗೆ ಒಳಗಾಗಲಿದ್ದಾರೆ. ಈ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ನಡುವೆ ಹೊಟ್ಟೆ ನೋವಿನಿಂದ ಬಳಲುತ್ತಿರುವ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಕುತೂಹಲ ಕೆರಳಿಸದ ‘ದಳಪತಿ’ ವಿಜಯ್ ರಾಜಕೀಯ ನಡೆ
2020ರ ಕೊನೆಯಲ್ಲಿಯೂ ರಜನಿಕಾಂತ್ ಅವರ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ರಾಜಕೀಯ ಜೀವನದಿಂದ ರಜನಿಕಾಂತ್ ಹಿಂದೆ ಸರಿಯಬೇಕಾಯಿತು.
2020ರಲ್ಲಿ ರಾಜಕೀಯ ಪಕ್ಷವನ್ನು ಆರಂಭಿಸುವುದಾಗಿ ರಜನಿಕಾಂತ್ ಘೋಷಿಸಿದ್ದರು. ಆದರೆ ಆ ಸಂದರ್ಭದಲ್ಲೇ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿದೆ. ಜೊತೆಗೆ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಹರಡುತ್ತಿದ್ದ ಸಂದರ್ಭ ಅದಾಗಿತ್ತು. ಆದ್ದರಿಂದ ರಾಜಕೀಯ ಪಕ್ಷ ಸ್ಥಾಪನೆಯ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.
ರಜನಿಕಾಂತ್ ಸದ್ಯ ಲೋಕೇಶ್ ಕನಕರಾಜ್ ಅವರ ಕೂಲಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೋಮವಾರ ಮುಂಜಾನೆ, ಅವರು ಹಿರಿಯ ಚಲನಚಿತ್ರ ನಿರ್ಮಾಪಕರಾದ ಎಸ್‌ಪಿ ಮುತ್ತುರಾಮನ್ ಮತ್ತು ಎವಿಎಂ ಸರವಣನ್ ಅವರನ್ನು ಭೇಟಿಯಾಗಿದ್ದು, ಫೋಟೋಗಳು ವೈರಲ್ ಆಗುತ್ತಿವೆ.
