ಕುತೂಹಲ ಕೆರಳಿಸದ ‘ದಳಪತಿ’ ವಿಜಯ್ ರಾಜಕೀಯ ನಡೆ

Date:

ತಮಿಳುನಾಡಿನಲ್ಲಿ ನಟ ವಿಜಯ್ ರಾಜಕಾರಣಕ್ಕೆ ಧುಮುಕುವ ನಿರ್ಧಾರ ನೋಡಿದರೆ, ಕಮಲ್ ಮತ್ತು ರಜನಿಗಿಂತ ಇವರು ದೊಡ್ಡ ನಟರೇ, ರಾಜಕಾರಣವೆಂಬ ಸಾಗರದಲ್ಲಿ ಈಜಿ ದಡ ಸೇರಬಲ್ಲರೇ ಎಂಬ ಪ್ರಶ್ನೆ ಎದುರಾಗುತ್ತದೆ. ಅವರಿಗಿಲ್ಲದ ವರ್ಚಸ್ಸು, ತಾಖತ್ತು, ಜನಪ್ರಿಯತೆ ಇವರಿಗಿದೆಯೇ ಎಂಬ ಅನುಮಾನವಿದೆ. ಅವರಿಗೇ ಸ್ಪಷ್ಟತೆ ಇಲ್ಲದ, ಕುತೂಹಲ ಕೆರಳಿಸದ, ಸುದ್ದಿಗಷ್ಟೇ ಸೀಮಿತವಾದ ವಿಜಯ್ ರಾಜಕೀಯ ನಡೆ ಯಾರಿಗಾಗಿ ಎಂಬ ಪ್ರಶ್ನೆ ಹುಟ್ಟು ಹಾಕಿದೆ.

ಸದ್ಯ ತಮಿಳುನಾಡಿನಲ್ಲಿ ರಜನಿಕಾಂತ್ ಬಿಟ್ಟರೆ, ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಎಂದರೆ, ಅದು ‘ದಳಪತಿ’ ವಿಜಯ್. ಇದೀಗ ಅವರು ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ತಮ್ಮದೇ ಆದ ಪಕ್ಷವೊಂದನ್ನು ಹುಟ್ಟು ಹಾಕಿ, ಅದಕ್ಕೆ ‘ತಮಿಳಗ ವೆಟ್ರಿ ಕಳಗಂ’ ಎಂದು ಹೆಸರಿಟ್ಟಿದ್ದಾರೆ. ‘ತಮಿಳಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡು ವಿಜಯ ಪಕ್ಷ’ ಎಂದರ್ಥ. ಪಕ್ಷದ ನೋಂದಣಿಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ರಾಜಕಾರಣಕ್ಕೆ ಧುಮುಕುವ ದಿನ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, ‘ನಿಜಜೀವನದಲ್ಲಿ ನೀವು ಮುಖ್ಯಮಂತ್ರಿಯಾದರೆ?’ ಎಂದು ಧುತ್ತನೆ ಎದುರಾದ ಪ್ರಶ್ನೆಗೆ ವಿಜಯ್, ‘ಸಿಎಂ ಆದರೆ, ನಾನು ಎಂದಿಗೂ ನಟಿಸುವುದಿಲ್ಲ’ ಎಂದು ಎರಡರ್ಥ ಧ್ವನಿಸುವ ರೀತಿ ಮಾತನಾಡಿದ್ದಾರೆ. ಅದೀಗ ವೈರಲ್ ಆಗಿದೆ. ಈ ವೈರಲ್ ಜನಪ್ರಿಯತೆ ಗಾಳಿಯದು. ಗಾಳಿ ಬೀಸಿದಂತೆಲ್ಲ ಬದಲಾಗುವಂಥದು.

ವಿಜಯ್ ರಾಜಕಾರಣಕ್ಕಿಳಿಯುವ ಸುಳಿವನ್ನು ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿಯೇ ನೀಡಿದ್ದರು. ಮತದಾನದ ದಿನ ಸೈಕಲ್ ನಲ್ಲಿ ಸಾಗುವ ಮೂಲಕ, ಕೇಂದ್ರ ಸರ್ಕಾರದ ವಿರುದ್ಧ ಸಡ್ಡು ಹೊಡೆದಿದ್ದರು. ಅದಾದ ನಂತರ, ವಿದ್ಯಾರ್ಥಿಗಳನ್ನು ಕುರಿತು, ‘ಅಂಬೇಡ್ಕರ್, ಪೆರಿಯಾರ್ ಬಗ್ಗೆ ಹೊಸ ತಲೆಮಾರಿನ ಯುವಕ ಯುವತಿಯರು ತಿಳಿಯಬೇಕು’ ಎಂದು ಕರೆ ಕೊಟ್ಟಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ವಿದ್ಯಮಾನಗಳನ್ನು ವಿಶ್ಲೇಷಿಸಿದರೆ, ಒಂದಂತೂ ಸ್ಪಷ್ಟವಾಗುತ್ತದೆ- ವಿಜಯ್ ತಮಿಳುನಾಡು ಬಯಸುವ ದ್ರಾವಿಡಪಡೆ ಕಟ್ಟಲು ಸಿದ್ಧರಾಗುತ್ತಿದ್ದಾರೆ. ಹಾಗೆಯೇ ಬಲಪಂಥೀಯರ ವಿರುದ್ಧವಿರುವ, ಹಿಂದಿ ಹೇರಿಕೆಯನ್ನು ವಿರೋಧಿಸುವ, ಪ್ರಾದೇಶಿಕ ಅಸ್ಮಿತೆಯ ಪರವಿರುವ, ತಳಸಮುದಾಯಗಳನ್ನು ತಬ್ಬಿಕೊಳ್ಳುವ ತವಕದಲ್ಲಿರುವ ಸೂಚನೆಗಳು ಕಾಣಿಸುತ್ತವೆ.

ಇಷ್ಟಕ್ಕೇ ಇವರೊಬ್ಬ ರಾಜಕಾರಣಿಯಾಗಲು ಸಾಧ್ಯವಿಲ್ಲ. ಅದು ಈ ಹೊಸಗಾಲದಲ್ಲಿ ಸುಲಭವಲ್ಲ. ಇದೇ ವಿಚಾರಗಳನ್ನು ಮುಂದೆ ಮಾಡಿ ದಶಕಗಳ ಕಾಲ ತಮಿಳುನಾಡನ್ನು ಆಳಿದ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಈಗಾಗಲೇ ಆಳವಾಗಿ ಬೇರೂರಿದೆ. ಸದ್ಯಕ್ಕೆ ಅಧಿಕಾರದಲ್ಲೂ ಇದೆ. ಕರುಣಾನಿಧಿಯವರ ಪುತ್ರ ಸ್ಟಾಲಿನ್ ಮುಖ್ಯಮಂತ್ರಿಯಾಗಿದ್ದು, ಪುತ್ರ ಅಳಗಿರಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ. ಡಿಎಂಕೆ ಅಜೆಂಡಾವನ್ನೇ ಮತ್ತೆ ಹೇಳುವುದರಲ್ಲಿ ಹೊಸತನವಿಲ್ಲ. ಅಂದಮೇಲೆ ‘ದಳಪತಿ’ ವಿಜಯ್ ರಾಜಕಾರಣ ಯಾರಿಗಾಗಿ ಮತ್ತು ಏತಕ್ಕಾಗಿ?

ತಮಿಳುನಾಡಿನ ಜನಜೀವನವನ್ನು, ಭಾಷಾಭಿಮಾನವನ್ನು, ಅತಿರೇಕಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿನ ಜನರ ನರನಾಡಿಗಳಲ್ಲಿ ಸಿನಿಮಾ ಬೆರೆತುಹೋಗಿರುವುದಕ್ಕೆ ಪುರಾವೆ ಸಿಗುತ್ತದೆ. ಚಿತ್ರರಂಗದ ನಟನಟಿಯರು ನಾಯಕರಾಗಿ ಹೊರಹೊಮ್ಮಿರುವುದು, ರಾಜಕಾರಣಕ್ಕೆ ಬಂದು ರಾಜ್ಯವಾಳಿರುವುದು ಎದ್ದು ಕಾಣುತ್ತದೆ.

10 ವರ್ಷ ಮುಖ್ಯಮಂತ್ರಿಯಾಗಿ ಮೆರೆದ ಜನಪ್ರಿಯ ಚಿತ್ರನಟ ಎಂಜಿಆರ್ ತಮಿಳಿರ ಆರಾಧ್ಯದೈವವೇ ಆಗಿಹೋಗಿದ್ದಾರೆ. ಹಾಗೆಯೇ 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಳಿದ ಚಿತ್ರನಟಿ ಜಯಲಲಿತಾ ತಮಿಳರ ‘ಅಮ್ಮ’ನಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದಾರೆ. ಇವರಿಬ್ಬರಿಗೂ ಮೊದಲೇ ಸಿನಿಮಾ ಕ್ಷೇತ್ರದಿಂದ ರಾಜಕಾರಣಕ್ಕಿಳಿದು, 19 ವರ್ಷಗಳ ಕಾಲ ತಮಿಳುನಾಡನ್ನು ಆಳಿದ ಕರುಣಾನಿಧಿ, ಶೂದ್ರ ಸಂಕೇತವಾಗಿ-ದ್ರಾವಿಡ ಅಸ್ಮಿತೆಯಾಗಿ ಅಜರಾಮರರಾಗಿದ್ದಾರೆ.

ಇವರ ನಡುವೆಯೇ ಚಿತ್ರನಟ ವಿಜಯಕಾಂತ್ ರಾಜಕೀಯ ಪಕ್ಷವೂ ಇದೆ. ಚಿತ್ರನಟ ಎಂಬ ಜನಪ್ರಿಯತೆಯನ್ನು ನಿಕಷಕ್ಕೊಡ್ಡಿ, ತಕ್ಕಮಟ್ಟಿಗೆ ತಮಿಳುನಾಡಿನಲ್ಲಿ ನೆಲೆ ಕಂಡುಕೊಂಡಿದ್ದರು. ಆದರೆ ಜನಬಲ ಮತ್ತು ಧನಬಲಗಳಿಲ್ಲದೆ ಬಲು ದೂರ ಸಾಗಲು ಸಾಧ್ಯವಾಗಲಿಲ್ಲ. ವಿಜಯಕಾಂತ್ ನಂತರ ತಮಿಳುನಾಡಿನ ರಾಜಕಾರಣಕ್ಕೆ ಧುಮುಕಿದವರು ತಮ್ಮ ಬಣ್ಣ ಮತ್ತು ಬುದ್ಧಿಯಿಂದ ಭಿನ್ನವಾಗಿ ಕಾಣಿಸಿಕೊಂಡಿದ್ದ ಕಮಲ್ ಹಾಸನ್. ಬುದ್ಧಿಜೀವಿ, ಪ್ರಗತಿಪರ, ಸೆಕ್ಯುಲರ್, ಆಧುನಿಕ ಎಂದೆಲ್ಲ ಹೆಸರು ಮಾಡಿದ್ದ ನಟ ಕಮಲ್ ಹಾಸನ್, ರಾಜಕೀಯ ಪಕ್ಷ ಹುಟ್ಟುಹಾಕಿ, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಮಾಡಿದ್ದರು. ಆದರೆ ಅವರಿಗೂ ಕೂಡ ದ್ರಾವಿಡರ ಮನಸ್ಸನ್ನು ಗೆಲ್ಲಲಾಗಲಿಲ್ಲ. ಇವರಿಬ್ಬರಿಗಿಂತ ಕೊಂಚ ಭಿನ್ನವಾಗಿ, ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ, ರಜನೀಕಾಂತ್ ರಾಜಕಾರಣಕ್ಕೆ ಬರಬಹುದು, ಸದ್ದು ಮಾಡಬಹುದು, ಗದ್ದುಗೆ ಹಿಡಿಯಬಹುದು ಎಂಬ ಸುದ್ದಿ ಇತ್ತು. ಆದರೆ ಅದು ಕೂಡ ಬರೀ ಸುದ್ದಿಯಾಗಿಯೇ ಉಳಿಯಿತು.

ಹಾಗೆಯೇ ಪಕ್ಕದ ಆಂಧ್ರದತ್ತ ನೋಡಿದರೆ, ಅಲ್ಲೂ ಚಿತ್ರನಟರು ರಾಜಕಾರಣಕ್ಕಿಳಿದು, ದೊಡ್ಡ ಮಟ್ಟದ ಯಶಸ್ಸು ಕಂಡ ಇತಿಹಾಸವಿದೆ. ಅದು ಎನ್.ಟಿ. ರಾಮರಾವ್ ಮಾತ್ರ. ಅವರ ನಂತರ, ಜನಪ್ರಿಯ ನಟರೆಂದೇ ಗುರುತಿಸಿಕೊಂಡ, ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ಚಿರಂಜೀವಿ ‘ಪ್ರಜಾರಾಜ್ಯಂ’ ಎಂಬ ಪಕ್ಷ ಕಟ್ಟಿ ಚುನಾವಣಾ ರಾಜಕಾರಣಕ್ಕೂ ಧುಮುಕಿದ್ದರು. ಆದರೆ, ಮುಗ್ಗರಿಸಿಬಿದ್ದರು. ಅವರ ನಂತರ ಈಗ ಮತ್ತೊಬ್ಬ ಸ್ಟಾರ್ ನಟ ಪವನ್ ಕಲ್ಯಾಣ್ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಜನಸೇನಾ’ ಎಂಬ ಪಕ್ಷ ಕಟ್ಟಿ, ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರೊಂದಿಗೆ ಕೈ ಜೋಡಿಸುವ, ಬಿಜೆಪಿಯ ಮೋದಿ-ಶಾ ಜೊತೆ ಸಂಪರ್ಕ ಸಾಧಿಸುವ ಮೂಲಕ ಕೊಂಚ ಸದ್ದು ಮಾಡುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ನಟ ವಿಜಯ್ ರಾಜಕಾರಣಕ್ಕೆ ಧುಮುಕುವ ನಿರ್ಧಾರ ನೋಡಿದರೆ, ಕಮಲ್ ಮತ್ತು ರಜನಿಗಿಂತ ಇವರು ದೊಡ್ಡ ನಟರೇ, ರಾಜಕಾರಣವೆಂಬ ಸಾಗರದಲ್ಲಿ ಈಜಿ ದಡ ಸೇರಬಲ್ಲರೇ ಎಂಬ ಪ್ರಶ್ನೆ ಎದುರಾಗುತ್ತದೆ. ಅವರಿಗಿಲ್ಲದ ವರ್ಚಸ್ಸು, ತಾಖತ್ತು, ಜನಪ್ರಿಯತೆ ಇವರಿಗಿದೆಯೇ ಎಂಬ ಅನುಮಾನವೂ ಕಾಡುತ್ತದೆ.

ದ್ರಾವಿಡರ ಪಕ್ಷವಾಗಿ ಡಿಎಂಕೆ ಅಧಿಕಾರದಲ್ಲಿದೆ. ಇದಕ್ಕೆ ವಿರುದ್ಧವಾಗಿ ಎಐಡಿಎಂಕೆ, ಪಟ್ಟಾಲಿ ಮಕ್ಕಳ್ ಕಚ್ಚಿ, ವಿಡುದಲೈ ಚಿರತೈಗಳ್ ಕಚ್ಚಿ, ಬಿಜೆಪಿ ಕೂಡ ಇದೆ. ಇವರಿಗಿಂತ ಭಿನ್ನವಾದ ತತ್ವ-ಸಿದ್ಧಾಂತಗಳನ್ನು ಹೊಂದಿರುವ ಕಮ್ಯುನಿಸ್ಟ್, ಕಾಂಗ್ರೆಸ್ ಪಕ್ಷಗಳಿವೆ. ಇವರೆಲ್ಲರನ್ನು ಮೀರಿಸುವ ಬುದ್ಧಿವಂತಿಕೆ, ತಂತ್ರಗಾರಿಕೆ ವಿಜಯ್ ಅವರಲ್ಲಿದೆಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.

ಇದೇ ಸಂದರ್ಭದಲ್ಲಿಯೇ ಲೋಕಸಭಾ ಚುನಾವಣೆ ಎದುರಾಗಿದೆ. ದೇಶದ ಮಟ್ಟಿಗೆ ಇದು ಬಹುಮುಖ್ಯವಾದ ಚುನಾವಣೆ. ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದು, ಈಗ ಮೂರನೇ ಬಾರಿಗೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿಯವರಿಗೆ ಹಾಗೂ ಇವರನ್ನು ಎದುರಿಸಲಿರುವ ವಿರೋಧ ಪಕ್ಷಗಳಿಗೆ ಬಹಳ ಮುಖ್ಯವಾದ ಚುನಾವಣೆ ಎಂದೇ ಎಲ್ಲರೂ ವಿಶ್ಲೇಷಿಸುತ್ತಿದ್ದಾರೆ. ಆದರೆ ನಟ ವಿಜಯ್, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಯಾರ ಪರ-ವಿರೋಧವೂ ಇಲ್ಲ. ತಟಸ್ಥ ನಿಲುವು ತಾಳಲಿದ್ದೇವೆ’ ಎಂದಿದ್ದಾರೆ.

ಕಾದು ನೋಡುವ ತಂತ್ರಕ್ಕೆ ತಲೆಬಾಗಿರುವ ವಿಜಯ್ ನಡೆ ಸದ್ಯಕ್ಕೆ ಯಾರಲ್ಲೂ, ಯಾವ ಕುತೂಹಲವನ್ನೂ ಕೆರಳಿಸಿಲ್ಲ. ಆದರೆ, ಒಂದೇ ಒಂದು ಚಿತ್ರಕ್ಕೆ ಕೋಟ್ಯಂತರ ರೂಪಾಯಿ ದುಡಿಯುವ ಚಿತ್ರರಂಗ ಕೊಂಚ ಕಳೆಗುಂದಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರಿ ಗೌರವದೊಂದಿಗೆ ನೆರವೇರಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಅಂತಿಮ ಸಂಸ್ಕಾರ: ಸಿಎಂ ಭಾಗಿ

ನಿನ್ನೆ(ಫೆ.25) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ...

ಜೈಲು ಸೇರಿದ ಬಜರಂಗದಳ ಕಾರ್ಯಕರ್ತರನ್ನು ಭೇಟಿಯಾದ ಶೋಭಾ ಕರಂದ್ಲಾಜೆ

ಲವ್ ಜಿಹಾದ್​ ಪ್ರಕರಣದಲ್ಲಿ ​ಹಲ್ಲೆ ಆರೋಪದಡಿ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಸೇರಿರುವ...

ಕರಂದ್ಲಾಜೆ ವಿರುದ್ದ ಷಡ್ಯಂತ್ರ ನಡೀತಿದೆ ಎಂದ ಬಿಎಸ್‌ವೈ; ಬಾಸ್ ಈಸ್ ಆಲ್ವೇಸ್ ರೈಟ್ ಎಂದ ಸಿ ಟಿ ರವಿ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನಾನು ಟಿಕೆಟ್ ಕೇಳಿಲ್ಲ. ಈ ಬಗ್ಗೆ ಈಗಾಗಲೇ...

ಶೇಖ್ ಶಹಜಹಾನ್ ಬಂಧಿಸಿ ಎಂದ ಹೈಕೋರ್ಟ್; ವಾರದಲ್ಲಿ ಬಂಧಿಸುತ್ತೇವೆ ಎಂದ ಟಿಎಂಸಿ

ಸಂದೇಶ್ ಖಾಲಿಯ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮುಖ ಆರೋಪಿ ತೃಣಮೂಲ...