ತನ್ನ ಮಗಳಿಗೆ ಮದುವೆ ಮಾಡಿ, ಆಕೆಗೆ ಸ್ಥಿರವಾದ ಸುಖಮಯ ಬದುಕನ್ನು ಕಟ್ಟಿಕೊಟ್ಟಿರುವ ಜಗ್ಗಿ ವಾಸುದೇವ್ ಅಲಿಯಾಸ್ ಸದ್ಗುರು, ತಮ್ಮ ತಲೆ ಬೋಳಿಸಿಕೊಂಡು, ಲೌಕಿಕ ಬದುಕನ್ನು ತ್ಯಜಿಸಿ ಸನ್ಯಾಸಿನಿಯಂತೆ ಬಾಳಬೇಕೆಂದು ತಮ್ಮ ಯೋಗ ಕೇಂದ್ರಗಳಲ್ಲಿ ತರುಣಿಯರನ್ನು ಹುರಿದುಂಬಿಸುವುದು ಯಾಕೆ?
ಮದ್ರಾಸ್ ಹೈಕೋರ್ಟ್ ಈ ಪ್ರಶ್ನೆಯನ್ನು ಸೋಮವಾರ ಕೇಳಿದೆ. ಉತ್ತರವನ್ನು ಬಯಸಿದವರು ನ್ಯಾಯಮೂರ್ತಿಗಳಾದ ಎಸ್.ಎಂ.ಸುಬ್ರಹ್ಮಣ್ಯಂ ಮತ್ತು ವಿ.ಶಿವಗಾನಂ.
ಕೊಯಮತ್ತೂರಿನ ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಎಸ್.ಕಾಮರಾಜ್ (69) ಅವರು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯ ಸಂದರ್ಭ.
42 ಮತ್ತು 39ರ ವಯಸ್ಸಿನ ತಮ್ಮ ಇಬ್ಬರು ವಿದ್ಯಾವಂತ ಹೆಣ್ಣುಮಕ್ಕಳು ಕಾಯಮ್ಮಾಗಿ ಇಶಾ ಯೋಗ ಸೆಂಟರ್ ನಲ್ಲಿ ನೆಲೆಸುವಂತೆ ಅವರ ‘ಮಿದುಳನ್ನು ತೊಳೆಯಲಾಗಿದೆ’ ಎಂಬುದು ಕಾಮರಾಜ್ ಅವರ ಅಳಲು.
ಇಬ್ಬರೂ ಹೆಣ್ಣುಮಕ್ಕಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ತಮ್ಮ ಸ್ವಂತ ಇಚ್ಛೆಯ ಪ್ರಕಾರ ಕೊಯಮತ್ತೂರಿನ ವೆಳ್ಳಿಯನ್ ಗಿರಿ ಬೆಟ್ಟದ ತಪ್ಪಲಿನ ಯೋಗ ಕೇಂದ್ರದಲ್ಲಿ ತಾವು ನೆಲೆಸಿರುವುದಾಗಿ ಇಬ್ಬರೂ ಹೇಳಿಕೆ ನೀಡಿದರು. ಆದರೆ ನ್ಯಾಯಮೂರ್ತಿಗಳು ಅವರೊಂದಿಗೆ ಕುಶಲೋಪರಿ ನಡೆಸಿ, ವಿಷಯವನ್ನು ಆಳವಾಗಿ ಕೆದಕಬಯಸಿದರು. ನ್ಯಾಯಮೂರ್ತಿಗಳು ಇನ್ನಷ್ಟು ಆಳಕ್ಕೆ ಇಳಿಯುವ ಆಗತ್ಯವಿಲ್ಲವೆಂದು ಇಶಾ ಫೌಂಡೇಶನ್ ಪರ ವಕೀಲ ಕೆ.ರಾಜೇಂದ್ರಕುಮಾರ್ ಆಕ್ಷೇಪ ಪ್ರಕಟಿಸಿದರು. ಪ್ರಕರಣದ ವ್ಯಾಪ್ತಿಯನ್ನು ಹಿಗ್ಗಿಸುವಂತಿಲ್ಲ ಎಂದರು. ಸಂಪೂರ್ಣ ನ್ಯಾಯ ನೀಡಿಕೆಯು ನ್ಯಾಯಾಲಯದ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಸಂವಿಧಾನದ 226ನೆಯ ವಿಧಿಯ ವ್ಯಾಪ್ತಿಯಲ್ಲಿ ವಿಷಯದ ಆಳಕ್ಕಿಳಿದು ನ್ಯಾಯ ಒದಗಿಸಬೇಕಿದೆ ಎಂದು ನ್ಯಾಯಮೂರ್ತಿಗಳು ಸಮರ್ಥಿಸಿಕೊಂಡರು.
“ತನ್ನ ಮಗಳಿಗೆ ಮದುವೆ ಮಾಡಿ, ಆಕೆಗೆ ಸ್ಥಿರವಾದ ಸುಖಮಯ ಬದುಕನ್ನು ಕಟ್ಟಿಕೊಟ್ಟಿರುವ ಜಗ್ಗಿ ವಾಸುದೇವ್ ಅಲಿಯಾಸ್ ಸದ್ಗುರು, ತಮ್ಮ ತಲೆ ಬೋಳಿಸಿಕೊಂಡು, ಲೌಕಿಕ ಬದುಕನ್ನು ತ್ಯಜಿಸಿ ಸನ್ಯಾಸಿನಿಯಂತೆ ಬಾಳಬೇಕೆಂದು ತಮ್ಮ ಯೋಗ ಕೇಂದ್ರಗಳಲ್ಲಿ ತರುಣಿಯರನ್ನು ಹುರಿದುಂಬಿಸುವುದು ಯಾಕೆ ಎಂಬ ಗುಮಾನಿ ತಮಗಿದೆ” ಎಂದು ನ್ಯಾಯಮೂರ್ತಿ ಶಿವಗಾನಂ ಹೇಳಿದರು.
“ತಮ್ಮ ದಾರಿಯನ್ನು ತಾವು ಆರಿಸಿಕೊಳ್ಳುವ ಸ್ವಾತಂತ್ರ್ಯ ವಯಸ್ಕರಿಗಿದೆ. ಹೀಗಿರುವಾಗ ನ್ಯಾಯಾಲಯದ ಸಂಶಯ ತಮಗೆ ಅರ್ಥವಾಗುತ್ತಿಲ್ಲ” ಎಂದು ನ್ಯಾಯಮೂರ್ತಿಗಳನ್ನು ತಡೆಯಲು ಯತ್ನಿಸಿದರು ರಾಜೇಂದ್ರಕುಮಾರ್.
“ನೀವು ನಿರ್ದಿಷ್ಟ ಕಕ್ಷಿದಾರರನ್ನು (ಇಶಾ ಫೌಂಡೇಶನ್) ಪ್ರತಿನಿಧಿಸಿ ವಾದಿಸುತ್ತಿದ್ದೀರಿ. ಹೀಗಾಗಿ ನಿಮಗೆ ಅರ್ಥವಾಗುವುದಿಲ್ಲ. ಆದರೆ ಈ ನ್ಯಾಯಲಯ ಯಾರ ಪರವಾಗಿಯೂ ಇಲ್ಲ, ಯಾರದೇ ವಿರೋಧವಾಗಿಯೂ ಇಲ್ಲ. ಕಕ್ಷಿದಾರರಿಗೆ ನ್ಯಾಯ ಸಲ್ಲಿಸುವುದಷ್ಟೇ ನಮ್ಮ ಕರ್ತವ್ಯ” ಎಂದು ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಅವರು ರಾಜೇಂದ್ರಕುಮಾರ್ ಅವರ ಬಾಯಿ ಮುಚ್ಚಿಸಿದರು.
ಈ ನಡುವೆ ಅರ್ಜಿದಾರ ಪ್ರೊ.ಕಾಮರಾಜ್ ಅವರ ಹೆಣ್ಣುಮಕ್ಕಳಿಬ್ಬರೂ ಹೇಳಿಕೆ ನೀಡಬಯಸಿದರು. ಅಷ್ಟರಲ್ಲಿಯೇ ಅವರನ್ನು ಉದ್ದೇಶಿಸಿ ನ್ಯಾಯಾಲಯ ಕೇಳಿದ ಪ್ರಶ್ನೆ- ‘ನೀವು ಆಧ್ಯಾತ್ಮದ ಹಾದಿಯಲ್ಲಿದ್ದೀರಿ ಎಂದು ಹೇಳಿಕೊಳ್ಳುತ್ತೀರಿ. ಆದರೆ ನಿಮಗೆ ಜನ್ಮ ಕೊಟ್ಟವರನ್ನು ನಿರ್ಲಕ್ಷ್ಯ ಮಾಡುವುದು ಪಾಪ ಎಂದು ನಿಮಗೆ ಅನಿಸುವುದಿಲ್ಲವೇ? ನಿಮ್ಮ ಪೋಷಕರ ಬಗೆಗೆ ನಿಮ್ಮಲ್ಲಿ ಅದೆಷ್ಟೊಂದು ದ್ವೇಷವಿದೆಯೆಂದು ಎದ್ದು ಕಾಣುತ್ತಿದೆ’.
ಇಶಾ ಫೌಂಡೇಶನ್ ವಿರುದ್ಧ ಹಲವಾರು ಕ್ರಿಮಿನಲ್ ಮೊಕದ್ದಮೆಗಳಿವೆ. ಅಲ್ಲಿ ಕೆಲಸ ಮಾಡುವ ವೈದ್ಯನೊಬ್ಬನ ಮೇಲೆ ಇತ್ತೀಚೆಗೆ ಪೋಕ್ಸೋ ಕೇಸ್ ಹಾಕಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಎಂ.ಪುರುಷೋತ್ತಮನ್ ನ್ಯಾಯಾಲಯದ ಗಮನ ಸೆಳೆದರು. ಇಶಾ ಫೌಂಡೇಷನ್ ವಿರುದ್ಧ ಹೂಡಲಾಗಿರುವ ಎಲ್ಲ ಮೊಕದ್ದಮೆಗಳ ವಿವರ ಮತ್ತು ಅವುಗಳ ವಿಚಾರಣೆ ಯಾವ ಹಂತದಲ್ಲಿದೆ ಎಂಬ ವಿವರಗಳನ್ನು ಇದೇ ಅಕ್ಟೋಬರ್ ನಾಲ್ಕರ ಒಳಗಾಗಿ ಸಲ್ಲಿಸುವಂತೆ ನ್ಯಾಯಪೀಠ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ನಿರ್ದೇಶನ ನೀಡಿತು.
ತಮ್ಮ ಇಬ್ಬರೂ ಹೆಣ್ಣುಮಕ್ಕಳಿಗೆ ಮೈಮನಗಳನ್ನು ಮರೆಸುವಂತಹ ಯಾವುದೋ ಬಗೆಯ ಆಹಾರ ಮತ್ತು ಔಷಧಿಯನ್ನು ನೀಡಲಾಗುತ್ತಿದೆ ಎಂದು ಪ್ರೊ.ಕಾಮರಾಜ್ ತಮ್ಮ ಅಹವಾಲಿನಲ್ಲಿ ಆರೋಪಿಸಿದ್ದಾರೆ.
ಸೌಜನ್ಯ- ದಿ ಹಿಂದೂ ಪತ್ರಿಕೆ