ಮುಡಾ ನೀಡಿದ್ದ 14 ಸೈಟ್ಗಳನ್ನು ವಾಪಸ್ ಮಾಡಿರುವುದು ನನ್ನ ಪತ್ನಿಯ ಸ್ವತಂತ್ರ ನಿರ್ಧಾರ. ಈ ಬಗ್ಗೆ ನನ್ನ ಜೊತೆ ಅವರು ಚರ್ಚೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಪತ್ನಿ ಪಾರ್ವತಿ ಸ್ವಂತ ಆಲೋಚನೆಯಿಂದ ತೀರ್ಮಾನ ಕೈಗೊಂಡಿದ್ದಾರೆ. ಈ ಬಗ್ಗೆ ನನ್ನ ಜೊತೆಗೆ ಯಾವುದೇ ಚರ್ಚೆ ನಡೆದಿಲ್ಲ. ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ” ಎಂದರು.
“ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ.ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ. ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು. ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ” ಎಂದು ತಿಳಿಸಿದರು.
“ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ. ಅವರ ಸಹೋದರ ನೀಡಿದ್ದ ಜಮೀನು ಅದಾಗಿತ್ತು. ಮುಡಾದವರು ಅವರನ್ನು ಸ್ವಾಧೀನಕ್ಕೆ ಪಡೆದುಕೊಂಡು ಸೈಟ್ ಮಾಡಿ ಹಂಚಿಕೆ ಮಾಡಿದ್ದರು” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದ್ವೇಷ ರಾಜಕಾರಣಕ್ಕೆ ದಿಟ್ಟ ಉತ್ತರದ ಅಗತ್ಯವಿದೆ
“ಮನನೊಂದು ಪತ್ನಿ ಸೈಟ್ ವಾಪಸ್ ಕೊಟ್ಟಿದ್ದಾರೆ. ನಮಗೆ ಬದಲಿ ನಿವೇಶನವಾಗಿ ವಿಜಯ ನಗರದಲ್ಲಿ ನೀಡಿದ್ದರು. ನಾವೇನು ವಿಜಯ ನಗರದಲ್ಲೇ ಕೊಡಿ ಎಂದು ಕೇಳಿಲ್ಲ. ಆದರೆ ಈ ವಿವಾದದಿಂದ ಮನನೊಂದು ನನ್ನ ಯಜಮಾನರಿಗೆ ರಾಜಕೀಯ ತೇಜೋವಧೆ ಆಗುವುದು ಬೇಡ ಎಂದು ಸೈಟ್ ವಾಪಸ್ ಕೊಟ್ಟಿದ್ದಾರೆ” ಎಂದರು.
ಇ.ಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, “ಕಾನೂನು ಕ್ರಮ ಏನಾದರೂ ಕೈಗೊಳ್ಳಲಿ. ಆದರೆ, ಯಾವ ಆಧಾರದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಅಕ್ರಮವಾಗಿ ಹಣಕಾಸು ವರ್ಗಾವಣೆ ಆಗಿಲ್ಲ. ನನ್ನ ಪಾತ್ರ ಏನೂ ಇಲ್ಲ” ಎಂದು ಹೇಳಿದರು.
ಸೈಟ್ ವಾಪಸ್ ಮಾಡುವ ಮೂಲಕ ಸಿದ್ದರಾಮಯ್ಯ ತನ್ನ ತಪ್ಪು ಒಪ್ಪಿಕೊಂಡಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, “ಸೈಟ್ ವಾಪಸ್ ಮಾಡುವುದರಿಂದ ಹೇಗೆ ತಪ್ಪು ಒಪ್ಪಿದಂತಾಗುತ್ತದೆ? ಮನನೊಂದು ಸೈಟ್ ವಾಪಸ್ ಮಾಡಿದ್ದಾರೆ. ಬಿಜೆಪಿಗರು ಸುಳ್ಳು ಹೇಳೋದರಲ್ಲಿ ನಿಸ್ಸೀಮರು. ರಾಜೀನಾಮೆ ಕೊಟ್ಟರೆ ಮುಗಿದು ಹೋಗುತ್ತಾ? ನಾನು ಅತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ ರಾಜಿನಾಮೆ ನೀಡುವ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.