“ದಲಿತರ ಜಾತಿ ನಿಂದನೆ ಮಾಡೋದಲ್ಲದೇ, ಒಕ್ಕಲಿಗರು, ಮಹಿಳೆಯರ ಬಗ್ಗೆ ಅಷ್ಟೊಂದು ತುಚ್ಛವಾಗಿ ಮಾತನಾಡಿರೋ ನೀಚ ಮುನಿರತ್ನ. ಜೈಲಿನಲ್ಲಿರುವ ಕೈದಿಯೂ ಹಾಗೆ ಮಾತನಾಡಿರಲ್ಲ. ಅಂತಹ ದುಷ್ಟ ವ್ಯಕ್ತಿ ಸರ್ವಜನಾಂಗದ ಶಾಂತಿಯ ತೋಟಕ್ಕೆ ಬಂದು ಈ ತರಹ ಜಾತಿ ನಿಂದನೆ, ದಬ್ಬಾಳಿಕೆ ಮಾಡಿರೋದು ಕನ್ನಡ ನಾಡಿಗೆ ಮಾಡಿದ ಅವಮಾನ. ಆತ ಜನಪ್ರತಿನಿಧಿ ಆಗಲು ಯೋಗ್ಯನಲ್ಲ. ಆತನನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು, ಗಡಿಪಾರು ಮಾಡಬೇಕು. ರಾಜಕಾಲುವೆ ಮೇಲೆ ಕಟ್ಟಿರುವ ಮನೆ, ಅಕ್ರಮ ಆಸ್ತಿ ಮುಟ್ಟುಗೋಲು ಹಾಕಬೇಕು” ಎಂದು ಜ್ಞಾನಪ್ರಕಾಶ ಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ಬಿಜೆಪಿಯವರಿಗೆ ನೈತಿಕತೆ ಇಲ್ಲ. ಇದ್ದಿದ್ದರೆ ಪಕ್ಷದಿಂದ ಉಚ್ಚಾಟನೆ ಮಾಡಿರೋರು. ಸಂವಿಧಾನದ ಎಲ್ಲಾ ಸಂಸ್ಥೆಗಳನ್ನು ಬಿಜೆಪಿಯವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮುನಿರತ್ನ ಪಾಪದ ಕೊಡ ತುಂಬಿದೆ. ಆತನನ್ನು ಕೋರ್ಟ್ ಬಿಡಬಹುದು, ಆದರೆ ದಲಿತ ಸಮುದಾಯ ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಶಾಸಕ ಮುನಿರತ್ನ ಜಾತಿನಿಂದನೆ, ಮಹಿಳಾ ನಿಂದನೆ ವಿರುದ್ಧ ಬೆಂಗಳೂರು ವಿವಿ ವಿದ್ಯಾರ್ಥಿ ಸಂಘಟನೆ “ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಕರ್ನಾಟಕ” ಇಂದು(ಅ.1) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿತ್ತು. 31 ಜಿಲ್ಲೆಗಳ ಹಿಂದುಳಿದ ವರ್ಗದವರು, ಒಕ್ಕಲಿಗ ಸಮುದಾಯದ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕುಣಿಗಲ್ ಶಾಸಕ ಡಾ ರಂಗನಾಥ್ ಮಾತನಾಡಿ, “ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರ ಆಡಿಯೋ ಕೇಳಿದ ನಂತರ, ಏಳು ಕೋಟಿ ಜನರು ಅಚ್ಚರಿ ಪಡುವಂಥ ಘಟನಾವಳಿಗಳ ಸರಣಿ ನೋಡಿದರೆ, ನಾವು ಚಿಂತನೆ ಮಾಡಿದ್ದು ಏನು, ಈ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ಗೊತ್ತಾಗುತ್ತಿದೆ. ಭಾರತದ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನದಲ್ಲಿರುವ ಮಹಿಳೆಯ ಬಗ್ಗೆ, ಗಾಂಧಿ ಕಟ್ಟಿದ, ಅಂಬೇಡ್ಕರ್ ಆಸೆ ಪಟ್ಟ ಭಾರತದಲ್ಲಿ ಮಹಿಳೆಯರನ್ನು ಅವಾಚ್ಯ, ಅಸಭ್ಯಕರ ಭಾಷೆ, ಅಸಾಂವಿಧಾನಿಕ ಭಾಷೆಯನ್ನು ಬಳಸಿದ್ದು ನೋಡಿ ಬೇಸರವಾಯ್ತು.
ಜನರ ಭಿಕ್ಷೆಯಲ್ಲಿ ಒಬ್ಬ ಶಾಸಕನಾಗುವುದು ಒಂದು ಭಾಗ್ಯ. ವಿಧಾನಸಭೆಯ ಜವಾಬ್ದಾರಿಯುತ ಸ್ಥಾನದಲ್ಲಿ ಕೂರುವ ಅವಕಾಶ ಕೊಟ್ಟ ಜನರ ಬಗ್ಗೆ ಅವಹೇಳನಕರವಾಗಿ ಮಾತಾಡಿದ್ದು ದುಃಖ ತಂದಿದೆ. ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಬಿಜೆಪಿಯ ಶಾಸಕನ ವಿಚಾರದಲ್ಲಿ ಮೌನವಾಗಿ ಸಮರ್ಥನೆ ಮಾಡುತ್ತಿದ್ದಾರೆ ಎಂದರೆ ಬಿಜೆಪಿ ಯಾವ ಸ್ಥಿತಿ ತಲುಪಿದೆ ಎಂದು ಗೊತ್ತಾಗುತ್ತದೆ” ಎಂದು ಹೇಳಿದರು.
ಎಂಎಲ್‌ಸಿ ಸುಧಾಮ್ ದಾಸ್ ಮಾತನಾಡಿ, “ಯಾವ ವ್ಯಕ್ತಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೊ ಅವನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಜನರಿಂದ ಚುನಾಯಿತನಾಗುವ ಮೂಲಕ ಬಂದಿದ್ದಾನೆ. ಅದೇ ಸಂವಿಧಾನ ನೀಡಿದ ಹಕ್ಕಿನಿಂದಾಗಿ ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಆತನ ಮಾತುಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸುವುದಲ್ಲ, ಆ ಮಾನಸಿಕತೆಯನ್ನೂ ಗಂಭೀರವಾಗಿ ಪರಿಣಿಸಬೇಕಾಗಿದೆ. ಈ ಪ್ರಕರಣದಲ್ಲಿ ಜಾಮೀನು ನೀಡಿದೆ. ಆದರೆ, ಸಮುದಾಯದ ನ್ಯಾಯಾಲಯದಲ್ಲಿ ಯಾವುದೇ ಕ್ಷಮೆ ಇಲ್ಲ. ಇಷ್ಟಾದರೂ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ, ಪಕ್ಷದಿಂದ ಉಚ್ಚಾಟನೆ ಮಾಡದ ಬಿಜೆಪಿಯವರಿಗೆ ಈ ಚುನಾವಣೆಯಲ್ಲಿ ಸರಿಯಾದ ಬುದ್ಧಿ ಕಲಿಸಬೇಕಿದೆ” ಎಂದರು.

ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಮಾತನಾಡಿ, “ಆತನ ಉದ್ಧಟತನ ಎಷ್ಟಿದೆಯೆಂದರೆ, ಆತ ಒಕ್ಕಲಿಗರನ್ನೂ ಬಿಟ್ಟಿಲ್ಲ, ಮಹಿಳೆಯರನ್ನೂ ಬಿಟ್ಟಿಲ್ಲ, ಈ ದೇಶದಲ್ಲಿ ಬಹುಸಂಖ್ಯಾತರಾಗಿರುವ ಹಿಂದುಳಿದ ವರ್ಗಗಳನ್ನು ತುಚ್ಛವಾಗಿ ಮಾತನಾಡಿದ್ದಾನೆ. ಬಿಜೆಪಿ ಪಕ್ಷ ಈ ವಿಚಾರದಲ್ಲಿ ಸರಿಯಾದ ತೀರ್ಮಾನ ಕೈಗೊಂಡಿಲ್ಲದಿದ್ದರೆ ರಾಜ್ಯಕ್ಕೆ ಕೇಂದ್ರ ಸಚಿವರು ಬರುವಾಗ ಕಪ್ಪು ಪಟ್ಟಿ ಪ್ರದರ್ಶಿಸಲಾಗುವುದು ಎಂದು ಎಚ್ಚರಿಸಿದರು. ವಿಧಾನಸಭೆಯಲ್ಲೂ ಆತನ ಅನರ್ಹತೆಗೆ ಒತ್ತಾಯ ಮಾಡುತ್ತೇವೆ” ಎಂದು ಹೇಳಿದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಈ ಪ್ರಜಾಪ್ರಭುತ್ವದ ವ್ಯವಸ್ಥೆ ಯಾವಾಗ ಬಂದತು ಎಂದು ನೋಡಬೇಕಿದೆ. ಗಾಂಧಿ, ಅಂಬೇಡ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿ ಈ ದೇಶವನ್ನು ಒಗ್ಗೂಡಿಸಲು ಸಂವಿಧಾನ ಜಾರಿ ಮಾಡಿ ನಾವೆಲ್ಲ ಇಲ್ಲಿ ಸೇರುವಂತಾಗಿದೆ. ಇಂತಹ ವ್ಯವಸ್ಥೆ ತರಬೇಕಿದ್ದರೆ ಮೂರು ಸಾವಿರ ವರ್ಷಗಳ ಹೋರಾಟ, ಹಿಂದು ಸಂಸ್ಕೃತಿ ಒಂದು ಕಡೆಯಾದರೆ, ಮನುವಾದ ಎಂಬ ಅಸ್ತ್ರ ನಮ್ಮ ಸಮಾಜ, ಸಮುದಾಯವನ್ನು ಛಿದ್ರ ಛಿದ್ರ ಮಾಡಿ ಕೇವಲ ಕೆಲವೊಂದು ವರ್ಗಕ್ಕೆ ಆಡಳಿತ, ಶಕ್ತಿ, ಆರ್ಥಿಕತೆ, ಅಧಿಕಾರ ಕೊಡುವ ಪ್ರಯತ್ನವಾಗಿತ್ತು. ನಾವು 75-80 ವರ್ಷಗಳಿಂದ ಒಗ್ಗಟ್ಟಾಗಿ, ಒಂದಾಗಿ, ಸಮಾನವಾಗಿ ಇರುವುದನ್ನು ಅಸ್ಥಿರಗೊಳಿಸಲು ಮನುವಾದದ ಶಕ್ತಿಗಳು ಸತತವಾಗಿ ಪ್ರಯತ್ನ ಮಾಡುತ್ತಾ ಬರುತ್ತಿವೆ. ಮುನಿರತ್ನನಂಥವರು ಶಾಸಕರಾಗಲಿ ಮನುವಾದದ ಶಕ್ತಿಗಳ ಬೆಂಬಲವಿದೆ. ಪ್ರಧಾನಿ ಕಾಶ್ಮೀರದಲ್ಲಿ ಹರಿಯಾಣ, ಚುನಾವಣಾ ಭಾಷಣ ಮಾಡುವಾಗ ಕರ್ನಾಟಕದಲ್ಲಿ ಗಣೇಶ ದೊಡ್ಡ ಕೆರೆಯಲ್ಲಿ ಮುಳುಗಿದ್ನಾ, ಚಿಕ್ಕ ಕೆರೆಯಲ್ಲಿ ಎದ್ನಾ ಎಂದು ಪ್ರಸ್ತಾಪ ಮಾಡುವಾಗ, ನಿಮ್ಮ ಸ್ವಂತ ಪಕ್ಷದ ಶಾಸಕರು ಯಾವ ರೀತಿ ಪದ ಬಳಕೆ ಮಾಡುತ್ತಿದ್ದಾರೆ? ಒಕ್ಕಲಿಗರು, ದಲಿತರು, ಮಹಿಳೆಯರಿಗೆ ಯಾವ ರೀತಿ ಅವಮಾನ ಆಗ್ತಿದೆ, ಅದು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಮೊರಾಲಿಟಿ, ಹಿಂದೂಯಿಸಂ, ಹಿಂದೂ ಧರ್ಮದ ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದೀರಿ, ಅದಕ್ಕೆ ತದ್ವಿರುದ್ದವಾಗಿ ಮಾತನಾಡುವ ನಿಮ್ಮ ಪಕ್ಷದ ನಾಯಕರ ಬಗ್ಗೆ ನಿಮ್ಮ ಮೌನ ವಿಶ್ವಕ್ಕೆ ಎದ್ದು ಕಾಣುತ್ತದೆ. ತಾಕತ್ತು, ಧಮ್ಮು, ಧೈರ್ಯ ನಿಮ್ಮ ಪಾರ್ಟಿಯಲ್ಲಿ ಅನ್ಯಾಯ ಆದಾಗ ಎಲ್ಲಿ ಹೋಯ್ತು. ಈಗ ಪ್ರದರ್ಶನ ಮಾಡಿ. ಆತನನ್ನು ಉಚ್ಛಾಟಿಸಿ. ಮೌಲ್ಯಾಧಾರಿತ ರಾಜಕಾರಣ ಮಾಡಿ. ಮೋದಿಯವರು ಈವರೆಗೂ ಒಂದು ಮಾತೂ ಆಡಿಲ್ಲ. ಮನುವಾದದ ಒಂದು ಮುಖ ಏನೆಂದರೆ ಮಹಿಳೆಯದ ಮೇಲೆ ತುಳಿತ, ದೌರ್ಜನ್ಯ. ಮನುವಾದದಲ್ಲಿ ಸ್ತ್ರೀ ಪುರುಷ ಸಮಾನರು ಎಂದು ಯಾವತ್ತೂ ಹೇಳಿಲ್ಲ. ಗಮನಿಸಿ ಮನುವಾದ ಪಾಲಿಸುವ ಪಕ್ಷಗಳು, ನಾಯಕರು ಎಲ್ಲೇ ದೌರ್ಜನ್ಯ, ತಪ್ಪು ಆದರೂ ಮಹಿಳೆಯ ವಿರುದ್ಧ ಮಾತನಾಡುತ್ತಾರೆ. ಹಿಂದೆ ಗೃಹಸಚಿವರಾಗಿದ್ದವರು ಮೈಸೂರಿನಲ್ಲಿ ಒಂದು ದುರ್ಘಟನೆ ನಡೆದಾಗ ಆ ಹುಡುಗಿಗೆ, ಆ ಹೊತ್ತು, ಆ ಹುಡುಗನ ಜೊತೆ ಅಲ್ಲಿ ಏನ್ ಕೆಲಸ ಇತ್ತು? ಎಂದು ಕೇಳಿದ್ದರು. ಮನುವಾದಿಗಳ ಮನಸ್ಸಿನಲ್ಲಿದ್ದ ಭಾವನೆ ಹೆಚ್ಚು ದಿನ ಒಳಗೆ ಇರಲ್ಲ, ಬಯಲಾಗಿಯೇ ಆಗುತ್ತೆ. ಮಣಿಪುರ ಸೇರಿದಂತೆ ಹಲವು ಕಡೆ ಹೆಣ್ಣುಮಕ್ಕಳ ಮೇಲೆ ಅನ್ಯಾಯವಾದಾಗ ಅವರದ್ದು ಯಾವಾಗಲೂ ಮೌನ ಎಂದು ಟೀಕಿಸಿದರು.
ನೆಲಮಂಗಲ ಶಾಸಕ ಶ್ರೀನಿವಾಸ್, ಪರಿಶಿಷ್ಟ ವರ್ಗ ಮತ್ತು ಒಕ್ಕಲಿಗ ಸಮುದಾಯಗಳು ಮುನಿರತ್ನನಂಥ ಮುಖಂಡರು ಮತ್ತು ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕಿದೆ. ಮನುವಾದದ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಹಳ್ಳಿಗಳಲ್ಲಿ ಎಲ್ಲರಿಗೂ ಮನುವಾದದ ಅಪಾಯವನ್ನು ತಿಳಿಸಬೇಕಿದೆ. ವಿಧಾನಸಭೆ, ವಿಧಾನ ಪರಿಷತ್ ಎರಡೂ ಕಡೆ ಹೋರಾಟ ಮಾಡಲಾಗುವುದು. ಇದುವರೆಗೂ ಬಿಜೆಪಿ- ಜೆಡಿಎಸ್ ಧ್ವನಿ ಎತ್ತಿಲ್ಲ. ದಲಿತ ಸಂಘಟನೆಗಳ ಜೊತೆ ನಾವೆಲ್ಲ ಇದ್ದೇವೆ. ಮುಂದಿನ ಅಧಿವೇಶನದವರೆಗೆ ಕಾಯೋದಲ್ಲ, ದಲಿತರು ಒಕ್ಕಲಿಗರ ಬಗ್ಗೆ ಸ್ವಲ್ಪವಾದರೂ ಗೌರವ ಇದ್ದರೆ ಮಾಧ್ಯಮಗಳ ಮುಂದೆ ಬಂದು ಉಚ್ಚಾಟನೆ ಘೋಷಣೆ ಮಾಡಿ. ಇಲ್ಲದಿದ್ದರೆ ಕೇರಿ ಕೇರಿ, ಬೀದಿ ಬೀದಿಗಳಲ್ಲಿ ನಿಮ್ಮ ಮಾನ ಹರಾಜು ಹಾಕಲಾಗುವುದು ಎಂದರು.
“ಕೆಂಪೇಗೌಡರ ನಾಡಿನಲ್ಲಿ ಉಪಜೀವನ ನಡೆಸಲು ಬಂದ ಮುನಿರತ್ನ ನಾಯ್ಡು ಈ ಭೂಮಿಯನ್ನು ಉತ್ತು ಬಿತ್ತು ಬೆಳೆಯನ್ನು ಬೆಳೆದ ದಲಿತರು, ಎಲ್ಲರಿಗೂ ಹಂಚಿಕೆ ಮಾಡಿದ ಒಕ್ಕಲಿಗ ಸಮುದಾಯವನ್ನು ಬಹಳ ಕೆಟ್ಟದಾಗಿ ಮಾತನಾಡಿದ್ದು ಕೇಳಿದ ದಿನವೇ ನಾನು, ಮಾವಳ್ಳಿ ಶಂಕರ್, ಗೋಪಾಲ್, ಹೆಚ್ ಪಿ ಸುಧಾಮ್ ದಾಸ್, ನರೇಂದ್ರ ಸ್ವಾಮಿ ಎಲ್ಲರೂ ಸೇರಿ ಆತನ ಮನೆಗೆ ಮುತ್ತಿಗೆ ಹಾಕಬೇಕೆಂದುಕೊಂಡಿದ್ದೆವು. ನಮಗೇ ಅಷ್ಟು ಆಕ್ರೋಶ ಬಂದಿತ್ತು. ಇನ್ನು ನಾಡು ಕಟ್ಟಿದ ಒಕ್ಕಲಿಗರ ಸಿಟ್ಟು ಎಷ್ಟಿರಬೇಡ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾಗರ ಹಾವಿಗೆ ತಲೆಯಲ್ಲಿ ವಿಷ ಇದ್ದರೆ, ಮನುವಾದಿಗಳಿಗೆ ಮೈಯೆಲ್ಲ ವಿಷ ಎಂದು ಪೆರಿಯಾರ್ ಹೇಳಿದ್ದರು. ಆ ಮನುವಾದದ ಪ್ರತಿನಿಧಿ ಮುನಿರತ್ನ ನಾಯ್ಡು. ನರೇಂದ್ರ ಮೋದಿಯವರು ಇಡೀ ದೇಶದಲ್ಲಿ ಅಗ್ರೆಸಿವ್ ಆಗಿ ಮಾತನಾಡುತ್ತಾರೆ, ಹಿಂದೂ ಎಲ್ಲರೂ ಒಂದು ಎಂದು ನಾವಿಂದು ಪ್ರಶ್ನೆ ಮಾಡುತ್ತಿದ್ದೇವೆ, ಈ ಅಯೋಗ್ಯನನ್ನು ಸಮರ್ಥಿಸಿಕೊಂಡಿದ್ದೀರಲ್ವಾ, ಮಾನ ಮರ್ಯಾದೆ ಇದ್ದರೆ ಆತನನ್ನು ಸ್ಥಾನದಿಂದ ಉಚ್ಚಾಟಿಸಿ, ಸದಸ್ಯತ್ವ ರದ್ದುಗೊಳಿಸಿ” ಎಂದು ಸವಾಲು ಹಾಕಿದರು.
ಎಂಎಲ್‌ಸಿ ಎಸ್ ರವಿ ಅವರು ಮಾತನಾಡಿ, ಇದೊಂದು ವೈಯಕ್ತಿಕ ಸ್ವಾರ್ಥದ ಕಾರ್ಯಕ್ರಮವಲ್ಲ. ಇದು ಜಾಗೃತ ಸಮಾಜ, ಎಚ್ಚೆತ್ತ ನಾಗರಿಕ ಸಮಾಜ ಇದೆ ಎಂದು ತೋರಿಸುವ ಸಭೆ. ಒಬ್ಬ ಶಾಸಕನಿಂದ ಸಮಾಜ ಹಾದಿ ತಪ್ಪುತ್ತಿದೆ ಎಂದು ತೋರಿಸಲು ಇಷ್ಟು ಜನ ಸೇರಿದ್ದಾರೆ ಎಂದರು.