ವ್ಯವಸ್ಥೆ ವಿರುದ್ಧ ಬಂಡೆದ್ದು ನಕ್ಸಲ್ ಚಳವಳಿಗಳಿಂದ ಗುರುತಿಸಿಕೊಂಡು ಭೂಗತನಾಗಿದ್ದ ಸಾಮಾನ್ಯ ವ್ಯಕ್ತಿಯೊಬ್ಬ ಆನಂತರದ ಜೀವನದಲ್ಲಿ ಉಂಟಾದ ಹಲವು ತಿರುವುಗಳಿಂದ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟನಾಗಿ ವಿಜೃಂಭಿಸಿದವರು ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ. ಇವರಿಗೆ ಈಗ ಫಾಲ್ಕೆ ಪ್ರಶಸ್ತಿಯ ಗರಿ...
ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ‘ದಾದಾ ಸಾಹೇಬ್ ಫಾಲ್ಕೆ‘ 2022ನೇ ಸಾಲಿಗೆ ಬಾಲಿವುಡ್ ಹಾಗೂ ಬಂಗಾಳಿ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಬಾಲಿವುಡ್, ಬಂಗಾಳಿಯ ಕಮರ್ಷಿಯಲ್ ಚಿತ್ರಗಳು ಮಾತ್ರವಲ್ಲದೆ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ ಮಿಥುನ್ ಅವರಿಗೆ ಸಿನಿಮಾ ರಂಗದ ಅತ್ಯುನ್ನತ ಪುರಸ್ಕಾರ ‘ಫಾಲ್ಕೆ’ ದೊರೆತಿದೆ.
1950ರ ಜೂನ್ 16ರಂದು ಕೋಲ್ಕತ್ತಾದಲ್ಲಿ ಬಂಗಾಳಿ ಕುಟುಂಬದಲ್ಲಿ ಜನಿಸಿದ ಮಿಥುನ್ ಚಕ್ರವರ್ತಿಯವರು ತುಂಬಾ ತಳಮಟ್ಟದಿಂದ ಬೆಳೆದು ಬಂದವರು. ಕೋಲ್ಕತ್ತಾದ ಸ್ಕಾಟೀಷ್ ಕ್ರೈಸ್ಟ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪೂರ್ಣಗೊಳಿಸಿದ ನಂತರ ಸಿನಿಮಾ ಆಸಕ್ತಿಯಿದ್ದ ಕಾರಣಕ್ಕೆ ಪುಣೆಯ ಪ್ರತಿಷ್ಠಿತ ಎಫ್‌ಟಿಐಐ ಸಂಸ್ಥೆಯಲ್ಲಿ ಅಭಿನಯ ವಿಷಯದಲ್ಲಿ ಮತ್ತೊಂದು ಪದವಿ ಪಡೆಯುತ್ತಾರೆ. ಆಗಲೇ ಕಮ್ಯೂನಿಸ್ಟ್ ಚಿಂತನೆಗಳಿಗೆ ಪ್ರಭಾವಿತರಾಗಿ ವ್ಯವಸ್ಥೆಯ ವಿರುದ್ಧ ಬಂಡೆದ್ದು ನಕ್ಸಲ್ ಆಗಿ ಭೂಗತರಾಗುತ್ತಾರೆ. ಸರ್ಕಾರದ ದುರಾಡಳಿತದ ವಿರುದ್ಧ ಕಮ್ಯೂನಿಸ್ಟ್ ನಾಯಕರ ಜೊತೆಗೂಡಿ ಕೆಲ ವರ್ಷಗಳ ಕಾಲ ಹೋರಾಟಗಳಲ್ಲಿ ಭಾಗಿಯಾಗುತ್ತಾರೆ. ಆದರೆ ಅನಿರೀಕ್ಷಿತವಾಗಿ ಆದ ಅವರ ಒಬ್ಬನೇ ಸೋದರನ ವಿದ್ಯುತ್ ಆಘಾತಕ್ಕೆ ಸಿಕ್ಕಿ ಮರಣ ಹೊಂದಿದ ನಂತರ ಮಿಥುನ್ ಅವರು ತಮ್ಮ ನಕ್ಸಲ್ ಹೋರಾಟದ ಹಾದಿಯನ್ನು ಬಿಟ್ಟು ಕುಟುಂಬದ ಕಡೆ ಮರಳುತ್ತಾರೆ. ತಮ್ಮ ಆರಂಭದ ದಿನಗಳಲ್ಲಿ ನಕ್ಸಲ್ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿಯೇ ಏನೋ ನಕ್ಸಲ್ ಸಂಬಂಧಿತ 1980ರಲ್ಲಿ ಹಿಂದಿ ಚಿತ್ರ ‘ದಿ ನಕ್ಸಲೈಟ್’ ಹಾಗೂ 2015ರಲ್ಲಿ ಬಂಗಾಳಿ ಚಿತ್ರ ‘ನಕ್ಸಲ್’ನಲ್ಲಿ ಅಭಿನಯಿಸಿದ್ದಾರೆ.
ಮನೆಗೆ ಬಂದ ನಂತರ ಜೀವನ ನಡೆಸಬೇಕಾದ ಅನಿವಾರ್ಯತೆಯಿರುವುದರಿಂದ ತಾವು ಇಷ್ಟಪಟ್ಟು ಕಲಿತ ಸಿನಿಮಾ ರಂಗವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರತಿಭೆಯಿದ್ದರೂ ಕೂಡ ಯಾವುದೇ ಸಿನಿಮಾದ ಹಿನ್ನಲೆಯಿಲ್ಲದ ಕಾರಣ ಆರಂಭದ ದಿನಗಳಲ್ಲಿ ಅಷ್ಟು ಸುಲಭವಾಗಿ ಅವಕಾಶ ಸಿಗಲಿಲ್ಲ. ಹಲವು ನಿರ್ದೇಶಕ, ನಿರ್ಮಾಪಕರಿಗೆ ಆಡಿಷನ್ ಕೊಟ್ಟರು. ಯಾರೊಬ್ಬರೂ ಅವಕಾಶಗಳನ್ನು ನೀಡದೆ ತಿರಸ್ಕರಿಸಿದರು. ಜೊತೆಗೆ ಇವರಿಗೆ ಕಪ್ಪು ಮೈಬಣ್ಣವು ಸಿನಿಮಾ ಪಯಣಕ್ಕೆ ದಾರಿ ಕಂಡುಕೊಳ್ಳಲು ಅಡ್ಡಿಯಾಗಿತ್ತು. ಹಲವು ದಿನಗಳ ಕಾಲ ಊಟವಿಲ್ಲದೆ, ಪಾದಚಾರಿ ರಸ್ತೆಯಲ್ಲಿ ಮಲಗಿದ್ದಾರೆ. ಸಂಕಷ್ಟಗಳನ್ನು ದೂಡುತ್ತಿರುವ ಸಂದರ್ಭದಲ್ಲಿ ಮಿಥುನ್ ಅವರ ಪ್ರತಿಭೆಯನ್ನು ಗುರುತಿಸಿದ್ದು ಖ್ಯಾತ ನಿರ್ದೇಶಕ ಮೃಣಾಲ್ ಸೇನ್.
ಮೊದಲ ಚಿತ್ರದಲ್ಲಿಯೇ ರಾಷ್ಟ್ರ ಪ್ರಶಸ್ತಿ
ನಟನೆಯ ಅವಕಾಶಕ್ಕಾಗಿ ಹಲವು ನಿರ್ದೇಶಕರನ್ನು ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಮಿಥುನ್ ಚಕ್ರವರ್ತಿ ಅವರು ಬಂಗಾಳಿ ಹಾಗೂ ಹಿಂದಿಯ ಪ್ರಸಿದ್ಧ ನಿರ್ದೇಶಕ ಮೃಣಾಲ್ ಸೇನ್ ಅವರ ಕಣ್ಣಿಗೆ ಬಿದ್ದರು. 1976ರಲ್ಲಿ ಒಡಿಯಾ ಭಾಷೆಯ ಸಣ್ಣಕತೆಯೊಂದನ್ನು ಆಧರಿಸಿದ ‘ಮೃಗಯಾ’ ಹಿಂದಿ ಸಿನಿಮಾವನ್ನು ಮೃಣಾಲ್ ಸೇನ್ ನಿರ್ದೇಶಿಸಿದ್ದರು. ಅದರಿಂದ ಮಿಥುನ್ ಚಿತ್ರಬದುಕಿಗೂ ಈ ಸಿನಿಮಾ ಮೊದಲ ತಿರುವು ನೀಡಿತು. ಮೊದಲ ಚಿತ್ರದಲ್ಲಿಯೇ ಮಿಥುನ್ ಚಕ್ರವರ್ತಿ ತಮ್ಮ ಅದ್ಭುತ ನಟನೆಗಾಗಿ ಪ್ರೇಕ್ಷಕರ ಮೆಚ್ಚುಗೆಗಳಿಸಿದರು. ‘ಮೃಗಯಾ’ ಚಿತ್ರದ ನಟನೆಗಾಗಿ ಮಿಥುನ್‌ಗೆ ರಾಷ್ಟ್ರ ಪ್ರಶಸ್ತಿ ಜೊತೆ ಬಂಗಾಳಿ ರಾಜ್ಯ ಪ್ರಶಸ್ತಿಯು ಒಲಿದುಬಂದು. ಅನಂತರದಲ್ಲಿ ನಟನೆಯಲ್ಲಿ ಕಾಲಿಟ್ಟ ಎಲ್ಲ ಚಿತ್ರಗಳಲ್ಲಿ ಯಶಸ್ಸು ಲಭಿಸಿತು. ‘ಮೃಗಯಾ’ ತೆರೆಕಂಡ ವರ್ಷವೇ ಅಮಿತಾಭ್ ಬಚ್ಚನ್, ರೇಖಾ ಮುಖ್ಯ ಪಾತ್ರದಲ್ಲಿ ಜೋಡಿಯಾಗಿದ್ದ ‘ದೋ ಅಂಜಾನೆ’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸಿ ಮೆಚ್ಚುಗೆ ಗಳಿಸಿದರು. ನಂತರದ ಒಂದೆರೆಡು ವರ್ಷ ನಾಲ್ಕೈದು ಹಿಂದಿ ಚಿತ್ರಗಳಲ್ಲಿ ಚಿತ್ರಗಳಲ್ಲಿ ಸ್ಟಾರ್ ನಟರ ಜೊತೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾದರು. 1978ರಲ್ಲಿ ‘ನದಿ ಥೇಕೆ ಸಾಗರೆ’ ಚಿತ್ರದ ಮೂಲಕ ತಮ್ಮ ಮಾತೃ ಭಾಷೆ ಬಂಗಾಳಿ ಚಿತ್ರರಂಗಕ್ಕೂ ಕಾಲಿಟ್ಟರು.
‘ಡಿಸ್ಕೋ ಡಾನ್ಸರ್’ ಮೂಲಕ ಸೂಪರ್ ಸ್ಟಾರ್
ಆರಂಭದ ನಾಲ್ಕೈದು ವರ್ಷಗಳಲ್ಲಿ ಪೋಷಕ ಚಿತ್ರಗಳಲ್ಲಿ ನಟಿಸಿದ್ದ ಮಿಥುನ್ ಅವರಿಗೆ ಸೂಪರ್ ಸ್ಟಾರ್ ಪಟ್ಟ ತಂದುಕೊಟ್ಟಿದ್ದು ‘ಡಿಸ್ಕೋ ಡಾನ್ಸರ್’ ಚಿತ್ರ. 1982ರ ದಶಕದಲ್ಲಿ ಬಾಲಿವುಡ್‌ನಲ್ಲಿ ರಾಜೇಶ್ ಖನ್ನಾ ರೋಮಾನ್ಸ್ ಮೂಲಕ ಸ್ಟಾರ್ ಆಗಿದ್ದರೆ, ಅಮಿತಾಭ್ ಬಚ್ಚನ್ ಅಕ್ಷನ್ ಮತ್ತು ಸಂಭಾಷಣೆಗಳ ಮೂಲಕ ಪ್ರೇಕ್ಷಕರ ಆರಾಧ್ಯ ದೈವವಾಗಿದ್ದರು. 1982ರಲ್ಲಿ ಬಬ್ಬರ್ ಸುಭಾಷ್ ನಿರ್ದೇಶನದಲ್ಲಿ ತೆರೆಕಂಡ ಮಿಥುನ್ ಚಕ್ರವರ್ತಿ ನಾಯಕನಾಗಿ ತೆರೆಕಂಡ ‘ಡಿಸ್ಕೋ ಡಾನ್ಸರ್’ ಚಿತ್ರ ಸೂಪರ್ ಸ್ಟಾರ್ ಪಟ್ಟವನ್ನು ನೀಡಿತು. ತನ್ನ ಅತ್ಯುತ್ತಮ ಅಭಿನಯ ಮತ್ತು ಡ್ಯಾನ್ಸ್‌ನಿಂದ ಡಿಸ್ಕೊ ಡ್ಯಾನ್ಸರ್ ಚಿತ್ರ ಆಗಿನ ಕಾಲಕ್ಕೆ ಪಾನ್ ವರ್ಲ್ಡ್ ಸಿನೆಮಾ ಆಗಿದ್ದು ಮಾತ್ರವಲ್ಲ 100 ಕೋಟಿ ಗಳಿಕೆಯನ್ನು ಕಂಡ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ‘ಡಿಸ್ಕೋ ಡಾನ್ಸರ್’ ಚಿತ್ರದಿಂದ ರಷ್ಯಾ, ಚೀನಾ, ಜಪಾನ್ ಸೇರಿದಂತೆ ಹಲವು ದೇಶಗಳಲ್ಲಿ ಅಭಿಮಾನಿಗಳು ಹುಟ್ಟಿಕೊಂಡರು. ಭಾರತದಲ್ಲಿ ‘ಡಿಸ್ಕೋ ಡಾನ್ಸ್’ ಟ್ರೆಂಡ್ ಕೂಡ ಶುರುವಾಯಿತು.
ಈ ಸುದ್ದಿ ಓದಿದ್ದೀರಾ? ಭೂಮಿಯತ್ತ ಧಾವಿಸುತ್ತಿರುವ ಬೃಹತ್ ಗಾತ್ರದ ಕ್ಷುದ್ರಗ್ರಹಗಳು; ಪೃಥ್ವಿಗೆ ಕಾದಿದೆಯಾ ಗಂಡಾಂತರ?
‘ಡಿಸ್ಕೋ ಡಾನ್ಸರ್’ ನಂತರ ತರಾನಾ, ಉನ್ನೀಸ್ ಬೀಸ್, ಸುರಕ್ಷಾ, ಪತಿತಾ, ಹಮ್ ಪಾಂಚ್, ಘರ್ ಏಕ್ ಮಂದಿರ್, ಅಂಧಿ, ತೂಫಾನ್, ಜಾಗ್ ಉಠಾ ಇನ್ಸಾನ್, ಪ್ಯಾರ್ ಜುಕ್ತಾ ನಹೀಂ ಸೇರಿದಂತೆ ಹಲವು ಚಿತ್ರಗಳು ಸೂಪರ್ ಹಿಟ್ ಆದವು. ಬೇರೆ ಸ್ಟಾರ್ ನಟರ ರೀತಿಯಲ್ಲಿ ಕೇವಲ ಒಂದೇ ರೀತಿಯ ಪಾತ್ರಕ್ಕೆ ಸೀಮಿತವಾಗದೆ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತ ಬಂದವರು ಮಿಥುನ್. ಸಿನೆಮಾ ಗೆಲ್ಲಬಹುದು ಇಲ್ಲವೇ ಸೋಲಬಹುದು. ಆದರೆ ಸಿನಿಮಾದ ಕಥೆ ಮತ್ತು ಪಾತ್ರಗಳು ಸೋಲಬಾರದು ಎನ್ನುವುದು ಅವರ ನಿಲುವಾಗಿತ್ತು. 1989ರ ಒಂದೇ ವರ್ಷದಲ್ಲಿ ಮಿಥುನ್ ನಾಯಕನಾಗಿ ಅಭಿನಯಿಸಿದ 19 ಚಿತ್ರಗಳು ಬಿಡುಗಡೆಯಾಗಿದ್ದ ದಾಖಲೆ ಬಾಲಿವುಡ್‌ನಲ್ಲಿ ಇನ್ನೂ ಹಾಗೆಯೇ ಇದೆ. ಹಲವು ಚಿತ್ರಗಳು ಸೋತರೂ ಮಿಥುನ್ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಲಿಲ್ಲ. ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು.
ಮೂರು ರಾಷ್ಟ್ರ ಪ್ರಶಸ್ತಿ
ಹಿಂದಿ, ಬಂಗಾಳಿ ಮಾತ್ರವಲ್ಲದೆ ತೆಲುಗು, ತಮಿಳು, ಒಡಿಯಾ, ಪಂಜಾಬಿ ಸೇರಿದಂತೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಥುನ್ ಅಭಿನಯಿಸಿದ್ದಾರೆ. 1976 ರಲ್ಲಿ ತೆರೆಕಂಡ ಮೃಗಯಾ, 1993ರ ಬಂಗಾಳದ ‘ತಹದೇಶ್ ಕಥಾ’ ಹಾಗೂ 1996ರಲ್ಲಿ ಕನ್ನಡದ ನಿರ್ದೇಶಕರಾದ ಜಿ.ವಿ. ಅಯ್ಯರ್ ನಿರ್ದೇಶಿಸಿದ ‘ಸ್ವಾಮಿ ವಿವೇಕಾನಂದ’ ಹಿಂದಿ ಚಿತ್ರದ ‘ರಾಮಕೃಷ್ಣ ಪರಮಹಂಸ’ ಪಾತ್ರಕ್ಕೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇದಲ್ಲದೆ ಹಲವು ರಾಜ್ಯ, ಫಿಲ್ಮ್ ಫೇರ್ ಪ್ರಶಸ್ತಿಗಳು ಸಂದಿವೆ. ಬೆಂಗಾಳಿಯಲ್ಲಿ ಹಲವು ವರ್ಷ ಜನಪ್ರಿಯ ಟಿವಿ ಶೋ ಬಿಗ್‌ಬಾಸ್ ಅವರು ನಡೆಸಿಕೊಟ್ಟಿದ್ದಾರೆ. ಮಿಥುನ್ ಅವರು ನಿರ್ದೇಶಿಸಿ, ತೀರ್ಪುಗಾರರಾಗಿದ್ದ ಬಂಗಾಳಿಯ ‘ಡಾನ್ಸ್ ಇಂಡಿಯಾ’ ಅತ್ಯಂತ ದೀರ್ಘ ಅವಧಿಗೆ ಪ್ರದರ್ಶನ ಕಂಡು ಲಿಮ್ಕಾ ಹಾಗೂ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿವೆ. ಮಿಥುನ್ ಚಕ್ರವರ್ತಿ ಜನಪ್ರಿಯತೆಯಲ್ಲಿರುವ ಸಂದರ್ಭದಲ್ಲಿ ದಿಲೀಪ್ ಕುಮಾರ್ ಹಾಗೂ ಸುನಿಲ್ ದತ್ ಜೊತೆಗೂಡಿ ‘ಸಿನಿಮಾ ಹಾಗೂ ಟಿವಿ ಕಲಾವಿದರ ಸಂಘ’ ಎಂಬ ಟ್ರಸ್ಟ್ ಸ್ಥಾಪಿಸಿ ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಿದ್ದರು.
ಕಸದ ತೊಟ್ಟಿಯಲ್ಲಿದ್ದ ಮಗುವನ್ನು ದತ್ತು ಪಡೆದಿದ್ದ ಮಿಥುನ್
ಮಿಥುನ್ ಚಕ್ರವರ್ತಿ ತಮ್ಮ ನಟನೆ ಮಾತ್ರವಲ್ಲ ವ್ಯಕ್ತಿತ್ವದಿಂದಲೂ ಹೆಸರುವಾಸಿಯಾಗಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳು, ಒಬ್ಬಳು ಮಗಳಿದ್ದಾಳೆ. ಆದರೆ ಮಗಳು ಮಿಥುನ್ ಚಕ್ರವರ್ತಿ ಹಾಗೂ ಪತ್ನಿ ಯೋಗಿತಾ ಅವರಿಗೆ ಜನಿಸಿದ್ದಲ್ಲ. ಕಸದ ತೊಟ್ಟಿ ಬಳಿ ದೊರೆತ ಮಗುವನ್ನು ದತ್ತು ತೆಗೆದುಕೊಂಡು ಸಾಕಿದ್ದರು. ಕಸದ ತೊಟ್ಟಿಯಲ್ಲಿ ಹೆಣ್ಣು ಮಗುವೊಂದು ದೊರೆತಿರುವ ಸುದ್ದಿ ಕೆಲವು ವರ್ಷಗಳ ಹಿಂದೆ ಬಂಗಾಳದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು. ವಿಷಯ ತಿಳಿದ ಮಿಥುನ್ ಚಕ್ರವರ್ತಿ ಅವರು ಪತ್ನಿ ಯೋಗಿತಾ ಬಾಲಿಯೊಂದಿಗೆ ಮಾತನಾಡಿ ಕಾನೂನಿನ ಪ್ರಕಾರ ದತ್ತು ಪಡೆದು ದಿಶಾನಿ ಚಕ್ರವರ್ತಿ ಎಂದು ನಾಮಕರಣ ಮಾಡಿದರು. ‘ನನಗೆ ಹೆಣ್ಣು ಮಕ್ಕಳೆಂದರೆ ಬಹಳ ಇಷ್ಟ. ನಮಗೆ ಒಂದು ಹೆಣ್ಣು ಮಗು ಜನಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಅದೇ ಸಮಯಕ್ಕೆ ನಮಗೆ ಈ ಮಗು ದೊರೆತಿದೆ. ಇದು ದೇವರು ಕೊಟ್ಟ ಮಗು’ ಎಂದು ಮಿಥುನ್ ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಮಿಥುನ್ ಚಕ್ರವರ್ತಿ ಇಬ್ಬರು ಗಂಡುಮಕ್ಕಳಾದ ಮಹಾಕ್ಷಯ್ ಮತ್ತು ಉಸ್ಮೆ ಬಾಲಿವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ಮೂರು ಪಕ್ಷಗಳ ಬದಲಾವಣೆ
ಮಿಥುನ್ ಚಕ್ರವರ್ತಿ ತಮ್ಮ ಕಾಲೇಜು ದಿನಗಳಲ್ಲಿ ಸಿಪಿಐಎಂ ಪಕ್ಷದಲ್ಲಿದ್ದು ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದರು. ಸಿನಿಮಾ ಕ್ಷೇತ್ರದ ಕಡೆ ಕಾಲಿಟ್ಟ ನಂತರ ರಾಜಕೀಯದತ್ತ ವಾಲಿರಲಿಲ್ಲ. 2014 ರಿಂದ 2016ರವರೆಗೆ ಟಿಎಂಸಿಯಲ್ಲಿ ಗುರುತಿಸಿಕೊಂಡು ರಾಜ್ಯಸಭಾ ಸದಸ್ಯರಾಗಿದ್ದರು. 2021ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.