ಕಳೆದ ಐವತ್ತು ವರ್ಷಗಳಿಂದ ಈ ಪಕ್ಷವನ್ನು ಎಂ.ಕರುಣಾನಿಧಿ ಮತ್ತು ಅವರ ಮಗ ಸ್ಟ್ಯಾಲಿನ್ ನಿಯಂತ್ರಿಸುತ್ತ ಬಂದಿದ್ದಾರೆ. ಮುಖ್ಯಮಂತ್ರಿ ಗದ್ದುಗೆಯೂ ತಂದೆ ಮಗನ ಪಾಲಾಗಿದೆ. ಇದೀಗ ಸ್ಟ್ಯಾಲಿನ ತಮ್ಮ ಮಗನನ್ನು ವಾರಸುದಾರನೆಂದು ಗುರುತಿಸಿ ‘ಪಟ್ಟಾಭಿಷೇಕ’ ಮಾಡಿದ್ದಾರೆ. ಈ ದಾರಿ ಡಿ.ಎಂ.ಕೆ.ಯ ಪಾಲಿನ ಇಳಿಜಾರಿನ ದಾರಿ, ಅವನತಿಯ ಆರಂಭ ಎಂದೇ ಹೇಳಬೇಕಿದೆ.
ತಮಿಳುನಾಡಿನ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಉದಯನಿಧಿ ಸ್ಟ್ಯಾಲಿನ್ ಭಾರತದ ಕುಟುಂಬ ರಾಜಕಾರಣದ ಮತ್ತೊಂದು ಕುಡಿ. ಅವರ ತಂದೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್. ತಾತ ಮುತ್ತುವೇಲ್ ಕರುಣಾನಿಧಿ. ಉದಯನಿಧಿ ಅವರು ಕಳೆದ ಆರೇ ವರ್ಷಗಳಲ್ಲಿ ಏರಿರುವ ಎತ್ತರ ಬೆಕ್ಕಸ ಬೆರಗಿನದು. 2018ರಲ್ಲಿ ಮೊದಲ ಬಾರಿಗೆ ರಾಜಕಾರಣವನ್ನು ಪ್ರವೇಶಿಸಿದವರು ಇಂದು ಉಪಮುಖ್ಯಮಂತ್ರಿ. ತಮಿಳುನಾಡಿನ ಸಚಿವ ಸಂಪುಟದ ಹಿರಿತನದಲ್ಲಿ ಮೂರನೆಯವರು. ಮುಖ್ಯಮಂತ್ರಿಯ ನಂತರದ ಸ್ಥಾನದಲ್ಲಿ ಎಂ.ಕರುಣಾನಿಧಿಯವರ ಸಮಕಾಲೀನರಾಗಿದ್ದ ಹಿರಿಯ ಮಂತ್ರಿ ದುರೈ ಮುರುಗನ್ ಮುಂದುವರೆದಿರುವುದೇ ಒಂದು ಪವಾಡ. ಅವರ ನಂತರದ ಸ್ಥಾನವನ್ನು ಉದಯನಿಧಿಗೆ ನೀಡಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಡಿ.ಎಂ.ಕೆ.ಯ ಸ್ಟಾರ್ ಪ್ರಚಾರಕರಾಗಿದ್ದರು. ಅದೇ ವರ್ಷ ಪಕ್ಷದ ಯುವವಿಭಾಗದ ಕಾರ್ಯದರ್ಶಿಯಾದರು. 2021ರ ವಿಧಾನಸಭೆ ಚುನಾವಣೆಗೆ ಟಿಕೆಟ್ ಪಡೆದು ಆರಿಸಿ ಬಂದರು. ಅಲ್ಲಿಂದ ಒಂದೂವರೆ ವರ್ಷದಲ್ಲಿ ತಂದೆಯ ಸಚಿವ ಸಂಪುಟದಲ್ಲಿ ಜಾಗ ಪಡೆದರು. ಇದೀಗ ಉಪಮುಖ್ಯಮಂತ್ರಿ. ಸಾಮಾನ್ಯ ಡಿ.ಎಂ.ಕೆ. ಕಾರ್ಯಕರ್ತನೊಬ್ಬ ಅದೆಷ್ಟೇ ಶ್ರಮಿಸಿದರೂ ಇಷ್ಟು ಅನತಿ ಕಾಲದಲ್ಲಿ ಉಪಮುಖ್ಯಮಂತ್ರಿ ಆಗುವುದು ಅಸಾಧ್ಯ.
ಪ್ರಗತಿಪರ ದ್ರಾವಿಡ ಸಿದ್ಧಾಂತದ ವಾರಸುದಾರ ಪಕ್ಷವಾಗಿದ್ದ ಡಿ.ಎಂ.ಕೆ. ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತ ಬಂದಿರುವ ಪಕ್ಷ. ಕುಟುಂಬ ರಾಜಕಾರಣ ಈ ಪಕ್ಷದ ಜಾಯಮಾನಕ್ಕೆ ಒಗ್ಗುವಂತಹುದಲ್ಲ. ಕಳೆದ ಐವತ್ತು ವರ್ಷಗಳಿಂದ ಈ ಪಕ್ಷವನ್ನು ಎಂ.ಕರುಣಾನಿಧಿ ಮತ್ತು ಅವರ ಮಗ ಸ್ಟ್ಯಾಲಿನ್ ನಿಯಂತ್ರಿಸುತ್ತ ಬಂದಿದ್ದಾರೆ. ಮುಖ್ಯಮಂತ್ರಿ ಗದ್ದುಗೆಯೂ ತಂದೆ ಮಗನ ಪಾಲಾಗಿದೆ. ಇದೀಗ ಸ್ಟ್ಯಾಲಿನ ತಮ್ಮ ಮಗನನ್ನು ವಾರಸುದಾರನೆಂದು ಗುರುತಿಸಿ ‘ಪಟ್ಟಾಭಿಷೇಕ’ ಮಾಡಿದ್ದಾರೆ. ಈ ದಾರಿ ಡಿ.ಎಂ.ಕೆ.ಯ ಪಾಲಿನ ಇಳಿಜಾರಿನ ದಾರಿ, ಅವನತಿಯ ಆರಂಭ ಎಂದೇ ಹೇಳಬೇಕಿದೆ.
ಮುತ್ತುವೇಲ್ ಕರುಣಾನಿಧಿ ತಮ್ಮ ಇಬ್ಬರು ಪುತ್ರರಾದ ಸ್ಟ್ಯಾಲಿನ್ ಮತ್ತು ಅಳಗಿರಿ ಹಾಗೂ ಪುತ್ರಿ ಕನ್ನಿಮೋಳಿ ಅವರನ್ನು ಅಧಿಕಾರ ರಾಜಕಾರಣದಲ್ಲಿ ಪ್ರತಿಷ್ಠಾಪಿಸಿದರು. ಹಾಗೆ ನೋಡಿದರೆ ಸ್ಟ್ಯಾಲಿನ್ ಮುಖ್ಯಮಂತ್ರಿ ಗದ್ದುಗೆಗೆ ಬಹುಕಾಲ ಬೆವರು ಹರಿಸಬೇಕಾಗಿತ್ತು. ಚೆನ್ನೈ ನಗರದ ಮೇಯರ್ ಆಗಿದ್ದರು. ತಮ್ಮ ತಂದೆಯ ಸಂಪುಟದಲ್ಲಿ ನಂಬರ್ ಟೂ ಎನಿಸಿಕೊಳ್ಳುವ ಹೊತ್ತಿಗೆ ನಾಲ್ಕು ವಿಧಾನಸಭಾ ಚುನಾವಣೆಗಳನ್ನು ಗೆದ್ದಿದ್ದರು. ಸ್ಟ್ಯಾಲಿನ್ ಗೆ ಹೋಲಿಸಿದರೆ ರಾಜಕಾರಣದಲ್ಲಿ ಉದಯನಿಧಿ ಅವರದು ಧೂಮಕೇತುವಿನ ವೇಗ. ಈ ಮುನ್ನ ಹತ್ತು ವರ್ಷಗಳಕಾಲ ತಮಿಳು ಸಿನೆಮಾ ರಂಗದಲ್ಲಿ ನಾಯಕರಾಗಿ ನಿರ್ಮಾಪಕರಾಗಿ ತಳ ಊರಿದ್ದರು. ‘ಮಾಮನ್ನನ್’ ಎಂಬ ಪ್ರಗತಿಪರ ಸಿನೆಮಾ ನಂತರ ಅವರು ಚಿತ್ರರಂಗದ ಕೊಂಡಿಯನ್ನು ಕಡಿದುಕೊಂಡು ರಾಜಕಾರಣದ ಕೊಂಡಿಯನ್ನು ಬೆಸೆದುಕೊಂಡರು.

ತಮಿಳುನಾಡಿನಂತಹ ರಾಜ್ಯಕ್ಕೆ ಉಪಮುಖ್ಯಮಂತ್ರಿಯಾಗುವ ಪ್ರಬುದ್ಧತೆ ಅವರಿಗೆ ಇದೆಯೇ ಎಂದು ಯಾರೂ ತಲೆಕೆಡಿಸಿಕೊಂಡಿಲ್ಲ. ಕರುಣಾನಿಧಿ ಮನೆತನದ ಕುಡಿ ಎಂಬುದಷ್ಟೇ ಅವರ ಸದ್ಯದ ಅರ್ಹತೆ.
ಕುಟುಂಬ ರಾಜಕಾರಣ ಎಂಬುದು ಭಾರತದ ಜನತಂತ್ರದ ಕುತ್ತಿಗೆಗೆ ಕಟ್ಟಿದ ಒರಳುಕಲ್ಲು. ಕಾಂಗ್ರೆಸ್ ಪಕ್ಷದ ನಂತರ ದೇಶದ ಬಹುತೇಕ ಪ್ರಾದೇಶಿಕ ಪಕ್ಷಗಳು ಕುಟುಂಬ ರಾಜಕಾರಣದ ಒರಳುಕಲ್ಲನ್ನು ಜನತಂತ್ರದ ಕುತ್ತಿಗೆಗೆ ಬಿಗಿದಿವೆ. ಬಿಹಾರದಲ್ಲಿ ತೇಜಸ್ವಿ ಯಾದವ್ ಮತ್ತು ಚಿರಾಗ್ ಪಾಸ್ವಾನ್, ಪಶ್ಚಿಮ ಬಂಗಾಳದಲ್ಲಿ ಅಭಿಷೇಕ್ ಬ್ಯಾನರ್ಜಿ, ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಮತ್ತು ಆಕಾಶ್ ಆನಂದ್, ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ, ಮಹಾರಾಷ್ಟ್ರದಲ್ಲಿ ಆದಿತ್ಯ ಠಾಕ್ರೆ ಈ ಮಾತಿಗೆ ಉದಾಹರಣೆಗಳು. ಕಾಂಗ್ರೆಸ್ ಕುಸಿತದ ನಂತರ ತಲೆಯೆತ್ತಿದ ಪ್ರಾದೇಶಿಕ ಪಕ್ಷಗಳು ರಾಜಕಾರಣಕ್ಕೆ ಹೊಸ ಕಾಳಜಿಗಳನ್ನು, ಹೊಸ ವಿಷಯಗಳನ್ನು ನವಚೈತನ್ಯವನ್ನು ರಾಷ್ಟ್ರ ರಾಜಕಾರಣದ ಭೂಮಿಕೆಗೆ ಹೊತ್ತು ತಂದವು. ಆದರೆ ಅವುಗಳ ಪಾದಗಳು ಕುಟುಂಬ ರಾಜಕಾರಣದ ಕೆಸರಿನಲ್ಲಿ ಹೂತು ಹೋಗಿದೆ. ಈ ಕುಟುಂಬಗಳ ಪಾಲಿಗೆ ರಾಜಕಾರಣ ಎಂಬುದು ಅಪ್ಪನಿಂದ ಮಗನಿಗೆ, ಮಗನಿಂದ ಮೊಮ್ಮಗನ ಕೈಗೆ ಸಾಗುವ ‘ಫ್ಯಾಮಿಲಿ ಬಿಸಿನೆಸ್’ ಆಗಿ ಹೋಗಿದೆ.
ಕುಟುಂಬ ರಾಜಕಾರಣವನ್ನು ಟೀಕಿಸುವ ಬಿಜೆಪಿಗೆ ತನ್ನ ಬೆನ್ನು ಕಾಣುತ್ತಿಲ್ಲ. ಕಂಡರೂ ಕಾಣದಂತೆ ನಟಿಸುತ್ತಿದೆ. ಮುಖ್ಯಮಂತ್ರಿ ಹುದ್ದೆಗಳಲ್ಲಿ ಕುಟುಂಬ ರಾಜಕಾರಣ ಕಾಣದಾದರೂ ಈ ಪಕ್ಷದ ಮೂರನೆಯ ಒಂದು ಭಾಗದಷ್ಟು ಸಂಸದರು ಶಾಸಕರು ಕುಟುಂಬ ರಾಜಕಾರಣದ ಫಲಾನುಭವಿಗಳೇ. ಯಡಿಯೂರಪ್ಪ ಅವರ ಇಬ್ಬರು ಪುತ್ರರ ಪೈಕಿ ಒಬ್ಬರು ಸಂಸದರು ಮತ್ತೊಬ್ಬರು ರಾಜ್ಯ ಬಿಜೆಪಿ ಅಧ್ಯಕ್ಷರು. ಯಡಿಯೂರಪ್ಪ ಅವರ ಮಕ್ಕಳಾಗಿರದೆ ಹೋಗಿದ್ದರೆ ಇಷ್ಟು ಶೀಘ್ರವಾಗಿ ಅವರು ಈ ಸ್ಥಾನಗಳಿಗೆ ಏರುವುದು ಸಾಧ್ಯವಿರಲಿಲ್ಲ. ಬಿಜೆಪಿಯಲ್ಲಿನ ಕುಟುಂಬ ರಾಜಕಾರಣ ಮೋದಿಯವರ ಆಗಸದೆತ್ತರದ ನೆರಳಿನ ಕತ್ತಲಲ್ಲಿ ಮುಚ್ಚಿ ಹೋಗಿದೆ. ಆದರೆ ಅದರ ಮೇಲೆ ಇಂದಲ್ಲ ನಾಳೆ ಬೆಳಕು ಬಿದ್ದೀತು. ವಾಸ್ತವ ಚಿತ್ರವನ್ನು ಸದಾ ಕಾಲಕ್ಕೆ ಮುಚ್ಚಿಡುವುದು ಸಾಧ್ಯವಿಲ್ಲ.

ವಂಶಾಡಳಿತ ಅಥವಾ ಕುಟುಂಬ ರಾಜಕಾರಣ ಜನತಂತ್ರದ ಮೌಲ್ಯಗಳು ಮತ್ತು ಆಶಯಗಳ ಉಲ್ಲಂಘನೆ. ಜನತಂತ್ರಪೂರ್ವದ ಆಳುವ ವರ್ಗಗಳು, ಸ್ವಾತಂತ್ರ್ಯಾನಂತರ ಜನತಂತ್ರದ ವೇಷ ತೊಟ್ಟು ಅಧಿಕಾರ ನಡೆಸಿರುವುದನ್ನು ವಿಶೇಷವಾಗಿ ಉತ್ತರಪ್ರದೇಶ ಬಿಹಾರದಂತಹ ರಾಜ್ಯಗಳಲ್ಲಿ ಕಾಣಬಹುದು. ಭಾರತದ ಜನತಂತ್ರ ಹಳೆಯ ಆಳುವ ವರ್ಗಗಳನ್ನು ಚಲಾವಣೆಯಲ್ಲಿ ಇಡುವುದರ ಜೊತೆಗೆ ಹೊಸ ಆಳುವ ವರ್ಗಗಳನ್ನೂ ಹುಟ್ಟಿ ಹಾಕುತ್ತಿದೆ.
ಭಾರತದಲ್ಲಿ ವಂಶಾಡಳಿತ ಕುರಿತು ವ್ಯಾಪಕ ಅಧ್ಯಯನ ನಡೆಸಿರುವ ಪ್ರೊ.ಕಂಚನ್ ಚಂದ್ರಾ ಅವರ ಪ್ರಕಾರ ನಮ್ಮ ಶೇ.25ರಿಂದ ಶೇ.30ರಷ್ಟು ಸಂಸತ್ ಸದಸ್ಯರು ವಂಶಾಡಳಿತದ ಬಲದಿಂದ ಆರಿಸಿ ಬರುತ್ತಿರುವವರು. ಪಕ್ಷಗಳ ನಾಯಕರೊಂದಿಗೆ ಒಡನಾಡುವ ಇಲ್ಲವೇ ಪಕ್ಷವನ್ನೇ ನಿಯಂತ್ರಿಸಬಲ್ಲ ಬಲಿಷ್ಠ ಕುಟುಂಬಗಳಿಗೆ ಸೇರಿದವರು ಇವರು. ಪ್ರತಿಭೆ ಇರಲೇಬೇಕೆಂದಿಲ್ಲ, ತಕ್ಷಣವೇ ಆಡಳಿತ ಸಾಮರ್ಥ್ಯವನ್ನೂ ರುಜುವಾತು ಮಾಡಿ ತೋರಿಸಬೇಕಿಲ್ಲ. ಆಗಾಗ ಸೋಲುಗಳನ್ನೂ ಎದುರಿಸುತ್ತಾರೆ. ಚಂದ್ರಾ ಅವರು ಇವರನ್ನು ಜನತಾಂತ್ರಿಕ ಕುಟುಂಬ ರಾಜಕಾರಣಿಗಳು (ಡೆಮಾಕ್ರಟಿಕ್ ಡೈನಾಸ್ಟೀಸ್) ಎಂದು ಕರೆದಿದ್ದಾರೆ.
ಸಾಮಾನ್ಯ ಹಿನ್ನೆಲೆಯಿಂದ ಕಷ್ಟಪಟ್ಟು ಮೇಲೆದ್ದು ಚುನಾವಣೆ ಪ್ರಕ್ರಿಯೆಯ ಮೂಲಕ ಅಧಿಕಾರದ ಏಣಿಯನ್ನು ಏರಿದವರು, ತಮ್ಮ ಕುಟುಂಬದ ಸದಸ್ಯರನ್ನು ಮುಂದೆ ತಂದು ಗೆಲ್ಲಿಸಿ ತಮ್ಮದೇ ರಾಜಕೀಯ ಮನೆತನವನ್ನು ಹುಟ್ಟಿ ಹಾಕಿರುವ ಉದಾಹರಣೆಗಳು ಅನೇಕ.
ಇದನ್ನೂ ಓದಿ ಮಹಾರಾಷ್ಟ್ರ ಚುನಾವಣೆ | ಟಿಕೆಟ್ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಸಂದರ್ಶನ; ಪಾಸಾದವರಿಗೆ ‘ಬಿ ಫಾರ್ಮ್’
ಮುಲಾಯಂ ಸಿಂಗ್ ಮತ್ತು ಎಚ್.ಡಿ.ದೇವೇಗೌಡ ಇಬ್ಬರೂ ಮೊದಲ ತಲೆಮಾರಿನ ರಾಜಕಾರಣಿಗಳಾಗಿದ್ದರು. ಇಬ್ಬರೂ ಬಡ ರೈತಾಪಿ ಕುಟುಂಬಗಳಿಂದ ಬಂದವರು. ಇಟ್ಟಿಗೆಯ ಮೇಲೆ ಇಟ್ಟಿಗೆ ಇರಿಸಿ ಕಷ್ಟಪಟ್ಟು ತಮ್ಮ ರಾಜಕಾರಣವನ್ನು ಕಟ್ಟಿ ಬೆಳೆಸಿಕೊಂಡವರು. ದಶಕಗಳ ನಂತರ ಇಬ್ಬರೂ ತಮ್ಮದೇ ಪಕ್ಷಗಳನ್ನು ಹುಟ್ಟಿ ಹಾಕಿ ಅವುಗಳ ಚುಕ್ಕಾಣಿ ಹಿಡಿದವರು. ಮುಲಾಯಂ ಮಂತ್ರಿ ಮುಖ್ಯಮಂತ್ರಿ, ಕೇಂದ್ರಮಂತ್ರಿಯಾದರೆ ದೇವೇಗೌಡರು ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಹುದ್ದೆಗೂ ಏರಿದವರು. ಮುಲಾಯಂ ತಮ್ಮ ಸೋದರ, ಮಗ, ಕುಟುಂಬ ವರ್ಗವನ್ನು ರಾಜಕಾರಣದಲ್ಲಿ ನೆಲೆಯೂರಿಸಿದರು. ದೇವೇಗೌಡರು ಪುತ್ರರಾದ ಎಚ್.ಡಿ.ರೇವಣ್ಣ, ಎಚ್.ಡಿ.ಕುಮಾರಸ್ವಾಮಿ ಅವರ ನಂತರ ಮೂರನೆಯ ತಲೆಮಾರಿನ ಮೊಮ್ಮಕ್ಕಳನ್ನೂ ಗೆಲ್ಲಿಸಿ ಅಧಿಕಾರದಲ್ಲಿ ಕುಳ್ಳಿರಿಸಿದವರು.
ಈ ಪ್ರವೃತ್ತಿಗೆ ತಡೆ ಬೀಳದೆ ಹೋದರೆ ಜನತಂತ್ರಕ್ಕೆ ಅರ್ಥವೇ ಉಳಿಯದು. ಯುವಜನರು, ಹೊಸ ಪ್ರತಿಭೆಗಳು ಹಿನ್ನೆಲೆಯಲ್ಲೇ ಕಾಯುತ್ತಲೇ ಕೊಳೆತು ಹೋಗುತ್ತವೆ. ರಾಜಕಾರಣ ನಿಂತ ನೀರಾಗಿ ಹೋಗುವುದು ನಿಶ್ಚಿತ.