ರಾಯಚೂರು ತಾಲೂಕಿನ ಮಲಿಯಾಬಾದ್ ಗ್ರಾಮದ ಮಲ್ಲಾರ ಕೆರೆ ಮತ್ತು ಸಮುದ್ರದ ಕೆರೆಗಳಿಗೆ ವಿಷಪೂರಿತ ರಾಸಾಯಿನಿಕ ಮಿಶ್ರಣ ಮಾಡಿದ್ದು, ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಹಾಗೂ ಕೆರೆಯನ್ನು ಸ್ವಚ್ಛಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಶೀರುದ್ದೀನ್ ಅವರು ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮಲಿಯಾಬಾದ್ ಗ್ರಾಮದ ಮಲ್ಲಾರ ಕೆರೆ ಮತ್ತು ಸಮುದ್ರ ಎಂಬ ಎರಡು ಕೆರೆಗಳು ರೈತರ ಜೀವನ ಹಾಗೂ ದನಕರುಗಳಿಗೆ ಕುಡಿಯಲು ಆಧಾರವಾಗಿವೆ. ಯಾರೋ ದುಷ್ಕರ್ಮಿಗಳು ವಿಷ ಪೂರಿತ ರಾಸಾಯಿನಿಕ ಕೆರೆಗೆ ಹಾಕಿರುವುದರಿಂದ ನೀರು ಅಶುದ್ದವಾಗಿದೆ ಹಾಗೂ ನೀರಿನ ಬಣ್ಣ ಸಂಪೂರ್ಣ ಹಸಿರಾಗಿದ್ದು, ಇದರಿಂದಾಗಿ ಮಲಿಯಾಬಾದ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಭಯಭೀತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆರೆಯ ನೀರು ಹಸಿರು ಬಣ್ಣಕ್ಕೆ ತಿರುಗಿರುವುದನ್ನು ನೋಡಿ ದನಕರುಗಳು ಕುಡಿದರೆ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸ್ವಚ್ಛಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕೂಡಲೇ ಜಿಲ್ಲಾಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ , ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು , ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನಹರಿಸಿ ಸ್ಥಳಕ್ಕೆ ಭೇಟಿ ನೀಡಬೇಕು. ನೀರಿನ ತಪಾಸಣೆ ಮಾಡಿ ದನಕರುಗಳಿಗೆ ಕುಡಿಯಲು ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಇದನ್ನು ಓದಿದ್ದೀರಾ? ತಮಿಳುನಾಡು | ಸದ್ಗುರು ಜಗ್ಗಿಯ ಇಶಾ ಫೌಂಡೇಶನ್‌ಗೆ 150 ಪೊಲೀಸರ ದಾಳಿ – ಪರಿಶೀಲನೆ
ಈ ಬಾರಿ ಮಳೆಗಾಲ ಹೆಚ್ಚಿನ ಪ್ರಮಾಣದಲ್ಲಿ ಆಗಿದ್ದರಿಂದ ಎರಡು ಕೆರೆಗಳು ತುಂಬಿ ತುಳುಕುತ್ತಿದೆ. ಆದರೆ ದುಷ್ಕರ್ಮಿಗಳು ನೀರಿಗೆ ವಿಷಪೂರಿತ ಕೆಮಿಕಲ್ ಸುರಿದಿರುಂತೆ ಕಂಡು ಬರುತ್ತಿದೆ. ಕೂಡಲೇ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೇ, ಕೆರೆಯ ನೀರಿನ ಮಾದರಿ(ಸ್ಯಾಂಪಲ್) ಅನ್ನು ಕೂಡ ಜಿಲ್ಲಾಧಿಕಾರಿಗಳಿಗೆ ಇದೇ ವೇಳೆ ನೀಡಲಾಯಿತು.
