ಭೂಮಿ ಕಾದಂಬರಿಯಲ್ಲಿ ಭೂಮಿಯ ಜತೆಗಿನ ವಸ್ತು ನಮಗೆ ಸ್ಥಳೀಯ ಅನ್ನಿಸುತ್ತದೆ ಎಂದು ನಿವೃತ್ತ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಗಳು ಹಾಗೂ ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯವರು ಅಭಿಪ್ರಾಯಪಟ್ಟರು.
ಮೈಸೂರು ರಂಗಾಯಣದಲ್ಲಿ ಸೃಷ್ಟಿ ಪಬ್ಲಿಕೇಷನ್, ಬೆಂಗಳೂರು ಹಸಿರು ಆರ್ಗ್ಯಾನಿಕ್ಸ್ ಪ್ರಕಟಿಸಿರುವ ಬಂಜಗೆರೆ ಜಯಪ್ರಕಾಶ್ ಅವರ ʼಭೂಮಿʼ ಪುಸ್ತಕದ ಲೋಕಾರ್ಪಣೆ ವೇಳೆ ಮಾತನಾಡಿದರು.
“ಗಾಂಧೀಜಿ ಹೇಳಿದಂತೆ ಭಾರತ ಮೂಲಭೂತವಾಗಿ ಹಳ್ಳಿಗಳ ಮತ್ತು ರೈತರ ದೇಶ. ಯವ್ಯಾವ ದೇಶಗಳಲ್ಲಿ ಕೃಷಿಯನ್ನು ಪ್ರಾಥಮಿಕ ಉದ್ಯೋಗ(ಪ್ರೈಮರಿ ಆಕ್ಯುಪೇಷನ್)ವನ್ನಾಗಿ ಮಾಡಿಕೊಂಡಿರುತ್ತಾರೆ, ಅಲ್ಲಿಯವರಿಗೆ ಇಂತಹ ಕಾದಂಬರಿಗಳು ಬಹಳ ಬೇಗ ಅವರ ಹೃದಯಕ್ಕೆ ತಟ್ಟುತ್ತವೆ” ಎಂದು ಮನ ಮಿಡಿದರು.
“ಕೃತಿಗಳು ಅನುವಾದಗೊಳ್ಳುವ ಪ್ರಕ್ರಿಯೆಯೊಳಗೆ ಯಾವ್ಯಾವ ರೀತಿಯ ಸ್ವರೂಪವನ್ನು ತಾಳುತ್ತವೆಂಬುದನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ಎಷ್ಟೇ ಸುಲಭವಾದ ಅಥವಾ ಕಠಿಣವಾದ ಪದವಾಗಿರಲಿ, ಇಲ್ಲವೇ ನೂರು ಪೇಜಿನ ಪುಸ್ತವಾಗಿರಲಿ, 1000 ಪುಟಗಳ ಪುಸ್ತಕವಾಗಿದ್ದರೂ ಅನುವಾದಕ್ಕೆಂದು ತೆಗೆದುಕೊಂಡಾಗ ಸಾಂಸ್ಥಿಕ ಅನುವಾದಗಳ ಅಗತ್ಯವಿದೆ. ಆದರೆ ಅಲ್ಲಿ ಒಂದು ಕೃತಿ ಹತ್ತರಿಂದ ಇಪ್ಪತ್ತು ವರ್ಷಗಳವರೆಗೆ ಅನುವಾದವೇ ಆಗುವುದಿಲ್ಲ” ಎಂದರು.
“ಸೃಷ್ಟಿ ನಾಗೇಶ್ ಅವರು ತಮ್ಮ ಪ್ರಕಟಣಾ ಪ್ರಕಾಶನಗಳನ್ನು ಶುರುಮಾಡಿ ಕೆಲವೇ ವರ್ಷಗಳಾಗಿರಬಹುದು. ಆ ಪ್ರಕಟಣೆ ಸಂಸ್ಥಯಲ್ಲಿ ಈಗಾಗಲೇ ನೂರಕ್ಕಿಂತ ಹೆಚ್ಚು ಅನುವಾದದ ಪುಸ್ತಕಗಳು ಬಂದಿವೆ. ಅದು ಯಾವ ಸಾಂಸ್ಥಿಕ ಸಂಸ್ಥೆಯಲ್ಲ. ಒಂದು ಪ್ರಕಟಣಾ ಮಂದಿರ. ಅವರು ವಿಶೇಷವಾಗಿ ಅನುವಾದಗಳನ್ನೇ ಪ್ರಕಟ ಮಾಡುತ್ತಿರುವುದು ಸಂತೋಷದ ವಿಚಾರ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಏಳೆಂಟು ತಿಂಗಳ ಬಾಕಿ ವೇತನ ಪಾವತಿಸುವಂತೆ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಒತ್ತಾಯ
“ಇನ್ನು ʼಭೂಮಿʼ ಎಂಬ ಕಾದಂಬರಿಯನ್ನು ನಾನು ಓದಿದಾಗ ನನಗೆ ಯಾಕೆ ಇಷ್ಟ ಆಯಿತೆಂದರೆ, ಈ ಕಾದಂಬರಿಯಲ್ಲಿ ಸುಮಾರು ನೂರು ಮಂದಿ ಪಾತ್ರಧಾರಿಗಳು ಬರುತ್ತಾರೆ. ಹಾಗೆಯೇ ಈ ಪಾತ್ರದಾರಿಗಳಿಗೆ ಕನ್ನಡದವರ ಹೆಸರನ್ನು ಹಾಕಿದರೆ ನಿಜವಾಗಿಯೂ ಒಂದು ಅಪ್ಪಟ ದೇಶೀಯ ಕೃತಿಯಾಗುತ್ತದೆ. ಇದರಲ್ಲಿರುವ ಭೂಮಿಯ ಜತೆಗಿನ ವಸ್ತು ತುಂಬಾ ಆಪ್ತವೆನಿಸುತ್ತೆ” ಎಂದರು.
ಈ ವೇಳೆ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ, ಸತೀಶ್ ತಿಪಟೂರು, ಸ್ವಾಮಿ ಆನಂದ್, ರೇಣುಕಾರಾಧ್ಯ ಇದ್ದರು.