- ಭಾಷೆ ಹೆಸರು ಹೇಳಿ ಮತ ಕೇಳುತ್ತಿರುವುದು ಅಸಾಂವಿಧಾನಿಕ
- ಸಿ ವಿ ರಾಮನ್ ನಗರ ಸರ್ವಧರ್ಮೀಯರ ಶಾಂತಿಯ ಪ್ರದೇಶ
“ಸಿ.ವಿ ರಾಮನ್ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಕುಮಾರ್ ತಮಿಳು ಭಾಷೆಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ‘ನಾನು ತಮಿಳಿಗ, ನನಗೆ ವೋಟ ನೀಡಿ, ತಮಿಳಿಗರು ಯಾರು ವಿಧಾನಸಭೆಯನ್ನು ಪ್ರವೇಶಿಸಿಲ್ಲ, ನನ್ನನ್ನು ಗೆಲ್ಲಿಸಿ’ ಎಂದು ಮತ ಕೇಳುತ್ತಿರುವುದು ಅಸಾಂವಿಧಾನಿಕ ಹಾಗೂ ಭಾಷಾ ಭಾತೃತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಕ್ಷೇತ್ರದ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಮೋಹನ್ ದಾಸರಿ ಆರೋಪಿಸಿದರು.
ಎಎಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮೋಹನ್ ದಾಸರಿ, “ಆನಂದ್ ಕುಮಾರ್ ಅವರಿಗೆ ತಾಕತ್ತಿದ್ದರೆ ತಾವು ಇದುವರೆಗೂ ಮರ್ಫಿ ಟೌನ್ ವಾರ್ಡ್‌ನಲ್ಲಿ ಮಾಡಿರುವಂತಹ ಸ್ಕೂಲ್, ಆಸ್ಪತ್ರೆಗಳು, ರಸ್ತೆಗಳು, ಒಳಚರಂಡಿಗಳ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ಈ ರೀತಿಯ ಭಾಷಾ ರಾಜಕಾರಣಕ್ಕೆ ಇಳಿದಿರುವುದು ಅವರು ಖಂಡಿತ ಸೋಲುತ್ತಾರೆಂಬ ಭೀತಿಯ ಹೊರತು ಮತ್ತೇನಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಹಾಗೂ ಮೈಸೂರಿನ ಹಲವೆಡೆ ಐಟಿ ದಾಳಿ: ₹15 ಕೋಟಿ ವಶ
“ಸಿ.ವಿ ರಾಮನ್ ನಗರ ಕ್ಷೇತ್ರ ಸರ್ವ ಭಾಷೆಗರ ಸರ್ವಧರ್ಮೀಯರ ಶಾಂತಿಯ ಪ್ರದೇಶ. ಕಾವೇರಿ ಗಲಾಟೆಯನ್ನು ಸೇರಿಸಿದಂತೆ ಯಾವುದೇ ರೀತಿಯ ತಮಿಳು ಮತ್ತು ಕನ್ನಡಿಗರ ಭಾತೃತ್ವಕ್ಕೆ ಧಕ್ಕೆಯಾಗದಂತೆ ಯಾವುದೇ ರೀತಿಯ ಸಣ್ಣ ಗಲಭೆಗಳು ಸಹ ಈ ಕ್ಷೇತ್ರದಲ್ಲಿ ಆಗಿಲ್ಲ. ಆನಂದ್ ಕುಮಾರ್ ಅವರ ತಮಿಳು ಭಾಷಾ ಪ್ರಚಾರದ ವೈಖರಿ ನಿಜಕ್ಕೂ ಅಸಹ್ಯ ತರಿಸುವಂತಿದೆ” ಎಂದರು.