“ಜನವರಿ 30, 1948ರಂದು ಗೋಡ್ಸೆ ಗಾಂಧಿಯನ್ನು ಹತ್ಯೆ ಮಾಡಿದ್ದು ನಿಜ. ಆದರೆ ಗಾಂಧಿ ಯಾರಿಂದಲೂ ಕೊಲ್ಲಲಾಗದ ಮನುಷ್ಯ. ಗಾಂಧೀಜಿ ಸಾಯೋದೂ ಇಲ್ಲ, ಅವರು ಸತ್ತಿಲ್ಲ. ಆದರೆ ದಿನದಿಂದ ದಿನಕ್ಕೆ ಬಸವಳಿಯುತ್ತಿದ್ದಾರೆ, ಕೃಶರಾಗುತ್ತಿದ್ದಾರೆ, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬಂಟಿಯಾಗುತ್ತಿದ್ದಾರೆ. ಅದೇ ವೇಳೆಗೆ ನವೆಂಬರ್ 15, 1949ರಂದು ಅಂಬಾಲ ಜೈಲಿನಲ್ಲಿ ಗಾಂಧಿ ಹತ್ಯೆಯ ಆರೋಪ ಹೊತ್ತು ಗಲ್ಲಿಗೇರಿದ ಗೋಡ್ಸೆ ಇನ್ನೂ ಬದುಕಿ ಉಳಿದಿದ್ದಾನೆ, ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದ್ದಾನೆ” ಎಂದು ಪ್ರೊ ಎ ನಾರಾಯಣ ಹೇಳಿದರು.
ಬುಧವಾರ ಜಾಗೃತ ಕರ್ನಾಟಕ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಹೊರತಂದಿರುವ ಧೀರೇಂದ್ರ ಕೆ. ಝಾ ಅವರ Gandhis Assassin ಕೃತಿಯ ಕನ್ನಡಾನುವಾದ ಗಾಂಧಿ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ ಪುಸ್ತಕ (ಕನ್ನಡ ಅನುವಾದ ಪ್ರೊ ಎ ನಾರಾಯಣ ಮತ್ತು ಮನೋಜ್‌ಕುಮಾರ್ ಗುದ್ದಿ) ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಗೋಡ್ಸೆಯ ಸಂತತಿ ದೇಶದಲ್ಲಿ ಹೆಚ್ಚುತ್ತಿದೆ. ಗೋಡ್ಸೆಗಳ ಸಂಖ್ಯೆ, ಗೋಡ್ಸೆಯನ್ನು ಒಪ್ಪುವವರ ಸಂಖ್ಯೆ ಗೋಡ್ಸೆವಾದವನ್ನು ಅಂಗೀಕರಿಸುವವರ ಸಂಖ್ಯೆ ಬೆಳೆಯುತ್ತಿದೆ. ಇದು ನಮಗೆಲ್ಲ ದಿಗಿಲು ಹುಟ್ಟಿಸಬೇಕಾದ ವಿಚಾರ. ಈ ಕಾಲಕ್ಕೆ ಗೋಡ್ಸೆಯನ್ನು ಗೋಡ್ಸೆಯಾಗಿ ರೂಪಿಸಿದ, ಕೊಲೆಗಾರನನ್ನಾಗಿಸಿದ್ದ ಶಕ್ತಿಗಳು ಯಾವುವು ಮತ್ತು ಗಾಂಧಿಯನ್ನು ಈ ದೇಶದಲ್ಲಿ ಅಂದು ಇಲ್ಲವಾಗಿಸಿ ಇಂದು ಗಾಂಧಿಯನ್ನು ಖಳನಾಯಕನನ್ನಾಗಿ ಚಿತ್ರಿಸುತ್ತಿರುವ ಮನಸ್ಥಿತಿ ಯಾಕೆ ಬಂತು ಎಂಬುದರ ಬಗ್ಗೆ ನಾವೆಲ್ಲ ಸತ್ಯಾಗ್ರಹಿಗಳಾಗಬೇಕಿದೆ” ಎಂದರು.
“ಜಾಗೃತ ಕರ್ನಾಟಕದವರು ಇನ್ನು ಮುಂದೆ ಗಾಂಧಿ ಫೋಟೋಗೆ ಹಾರ ಹಾಕಿ ಗಾಂಧಿಜಯಂತಿ ಆಚರಿಸುವುದಿಲ್ಲ ಗೋಡ್ಸೆವಾದವನ್ನು ಹಿಮ್ಮೆಟ್ಟಿಸುತ್ತಾ ಗಾಂಧಿಜಯಂತಿ ಆಚರಿಸುತ್ತೇವೆ, ಆ ಭಾಗವಾಗಿ ಪುಸ್ತಕ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ಪುಸ್ತಕ ದಿನೇಶ್ ಗುಂಡೂರಾವ್ ಅವರು ಉಸ್ತುವಾರಿ ಹೊತ್ತ ದಕ್ಷಿಣ ಕನ್ನಡದಲ್ಲಿ ಆಗಬೇಕಿತ್ತು. ಯಾಕೆಂದರೆ ನಾವು ದಕ್ಷಿಣ ಕನ್ನಡ ಭಾರತದಿಂದ ದೂರವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅದು ಈ ದೇಶದಲ್ಲಿ, ಈ ರಾಜ್ಯದಲ್ಲಿ ಇದೆಯೋ ಇಲ್ಲವೋ ಎಂದು ಯೋಚಿಸುವಷ್ಟು ಅಲ್ಲಿ ಗೋಡ್ಸೆ ಮನಸ್ಥಿತಿ ಹೆಚ್ಚುತ್ತಿದೆ. ಆ ಜಿಲ್ಲೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮಗೆಲ್ಲರಿಗೂ ಇದೆ” ಎಂದು ಹೇಳಿದರು.

ಗೋಡ್ಸೆವಾದ ಈಗ ಪಾರ್ಥೇನಿಯಂ ರೀತಿ ಬೆಳೆದಿದೆ. ಗೋಡ್ಸೆ ಹಂತಕನಾಗಲು ಆತನ ಬಾಲ್ಯದ ತೊಳಲಾಟ, ಚಿತ್ತಕ್ಷೋಭೆ, ಪರಿಸರ ಕೂಡ ಕಾರಣ ಎಂದು ಮನಶಾಸ್ತ್ರದ ಪ್ರಾಧ್ಯಾಪಕ ಪ್ರೊ ಶ್ರೀಧರ ಮೂರ್ತಿ ಹೇಳಿದರು.
ಬಾಲ್ಯದಲ್ಲಿ ಗೋಡ್ಸೆ ಸಹಜ ಆಟಪಾಠಗಳಿಂದ ವಂಚಿತನಾಗಿದ್ದ. ಆತನನ್ನು ಹೆಣ್ಣಿನ ರೀತಿ ಬೆಳೆಸಲಾಗಿತ್ತು. ದೈವತ್ವದ ಆರೋಪ ಮಾಡಿದ್ದರು. ಅಕ್ಕನ ಕಾಯಿಲೆ ಗುಣಪಡಿಸಿದ ʼಆರೋಪʼವೂ ಇತ್ತು. ಆತ ತನಗೆ ಅತೀಂದ್ರೀಯ ಶಕ್ತಿ ಇತ್ತು ಎಂದು ನಂಬಿದ್ದ. ಬಾಲ್ಯ ಕಳೆದು ಯವ್ವನ ಬರುವಾಗ ನಿರಾಶನಾಗಿದ್ದ. ಅದೇ ಸಮಯದಲ್ಲಿ ತಂದೆಯ ವರ್ಗಾವಣೆಯ ಕಾರಣಕ್ಕೆ ಚಿಕ್ಕಮ್ಮನ ಮನೆಯಿಂದ ಶಾಲೆಗೆ ಹೋಗುವಂತಾಯಿತು. ಅಲ್ಲಿ ಏಕಾಂಗಿಯಾದ. ಎಸ್ಸೆಸ್ಸೆಲ್ಸಿ ಫೇಲ್ ಆಗಿ ಕೀಳರಿಮೆ ಉಂಟಾಗಿತ್ತು. ವ್ಯವಹಾರದಲ್ಲಿ ನಷ್ಟ ಮಾಡಿಕೊಂಡಿದ್ದ. ಅದೇ ಸಮಯದಲ್ಲಿ ಸಾವರ್ಕರ್ ಭೇಟಿಯಾಗುತ್ತಾರೆ. ಅಲ್ಲಿಂದ ಹೊಸ ಐಡೆಂಟಿಟಿ ಶುರುವಾಗುತ್ತದೆ. ಮುಸ್ಲಿಂ ದ್ವೇಷ, ಹಿಂದೂ ವೈಭವೀಕರಣ, ಆಲೋಚಿಸದ ಆಲಸಿಕತೆ, ಅಸಹನೆ, ಜೀರೋ ಕೇಳಿಸಿಕೊಳ್ಳುವ ಗುಣ, ಹೆಪ್ಪುಗಟ್ಟಿದ್ದ ಬಾಲ್ಯದ ಗುಣಗಳು ಇವೆಲ್ಲದರ ಪರಿಣಾಮವಾಗಿ ಆರೆಸ್ಸೆಸ್ ಸೇರಿಕೊಳ್ಳುತ್ತಾನೆ ಎಂದು ವಿವರಿಸಿದರು.
ಪುಸ್ತಕದ ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಮಾತನಾಡಿ, “ಗಾಂಧಿ ಹೇಗೆ ಕಾಲಾತೀತವೋ ಹಾಗೇ ಗಾಂಧಿ ಹತ್ಯೆಯೂ ಕಾಲಾತೀತ ಸತ್ಯ. ಗೋಡ್ಸೆ ಗುಂಡು ಹಾರಿಸಿದ್ದಷ್ಟೇ. ಇದು ಯೋಜಿತ ಸಂಚು, ಹಲವಾರು ಜನರ ಸಂಘಟಿತ ಭಯೋತ್ಪಾದಕ ಕೃತ್ಯ. ಗುಂಡು, ರಿವಾಲ್ವರ್ ಪೂರೈಸಿದವರು, ಪ್ರೇರೇಪಿಸಿದವರು ಹಲವರು. ಅವರ ಗುರಿ ಗಾಂಧಿ ಆಗಿರಲಿಲ್ಲ. ಗಟ್ಟಿಯಾಗಿ ಬೇರೂರುತ್ತಿರುವ ಚಾತುರ್ವರ್ಣಕ್ಕೆ ಗಾಂಧಿ ಒಳಗಿದ್ದುಕೊಂಡೇ ಕವಣೆ ಕಲ್ಲು ಹೊಡೆಯುತ್ತಿದ್ದರಲ್ವಾ ಅದರ ಬಗ್ಗೆ ಅವರಿಗೆ ಭಯ ಇತ್ತು. ಹಾಗಾಗಿ ಗಾಂಧಿ ಹತ್ಯೆ ಮಾಡಿ ಅದನ್ನು ನಿವಾರಿಸಬಹುದು ಎಂದುಕೊಂಡಿದ್ದರು. ಆದರೆ ಆ ಪ್ರಯತ್ನದಲ್ಲಿ ಅವರು ಸಫಲವಾಗಲಿಲ್ಲ. ಆದರೆ ಆ ಹತ್ಯೆಯ ಕಳಂಕ ಅವರಿಗೆ ಅಂಟಿದೆ. ಅದು ಎಂದೂ ಕಳೆಯಲು ಸಾಧ್ಯವಿಲ್ಲ. ಗಾಂಧಿ ಬದುಕಿದ್ದಾಗಲೂ, ಸತ್ತ ನಂತರವೂ ದೇಶವಾಸಿಗಳನ್ನು ಕಾಪಾಡಿದ್ದಾರೆ. ಹಾಗಾಗಿ ಈ ಪುಸ್ತಕ ಪ್ರಕಟಿಸುವ ನಿರ್ಧಾರ ಮಾಡಿದೆವು” ಎಂದು ಹೇಳಿದರು.
ಜಾಗೃತ ಕರ್ನಾಟಕದ ಸೀತಾಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಪುರದ ಸಾಮಾಜಿಕ ಕಾರ್ಯಕರ್ತ ಶ್ರೀನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಗಂಗಾಧರ ಮುಳುಗುಂದ್ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಅನುವಾದಕರಲ್ಲಿ ಒಬ್ಬರಾದ ಪತ್ರಕರ್ತ ಮನೋಜ್ ಕುಮಾರ್ ಗುದ್ದಿ ಉಪಸ್ಥಿತರಿದ್ದರು. ಆರಂಭದಲ್ಲಿ ಜಾಗೃತ ಕರ್ನಾಟಕದ ಸಂಚಾಲಕ ಡಾ ಬಿ ಸಿ ಬಸವರಾಜು ಭಾವಗೀತೆ ಹಾಡಿದರು.