- ಲಂಡನ್‌ನಲ್ಲಿ ವಾಸಿಸುತ್ತಿರುವುದಾಗಿ ಸುಳ್ಳು ಹೇಳಿ ವಂಚಿಸಿದ ಮಹಿಳೆ
- ವೈಟ್ಫೀಲ್ಟ್ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ ಸಲ್ಮಾನ್
ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ 48 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯವಾದ ಮಹಿಳೆ ನಂಬಿ ಬರೋಬ್ಬರಿ ₹34 ಲಕ್ಷ ಕಳೆದುಕೊಂಡಿದ್ದಾರೆ.
ಬಾಳ ಸಂಗಾತಿಯನ್ನು ಹುಡುಕಲು ಮ್ಯಾಟ್ರಿಮೋನಿಯಲ್ ಸೈಟ್ ಸಹಾಯವಾಗುತ್ತದೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವು ವಂಚಕರು ಯುವಕರು/ಯುವತಿಯರಿಂದ ಹಣ ವಂಚಿಸುವಂತಹ ಪ್ರಕರಣಗಳು ನಡೆಯುತ್ತಿವೆ.
ಮಾರತ್ತಹಳ್ಳಿ ಸಮೀಪದ ಮುನ್ನೇಕೊಳಾಲು ನಿವಾಸಿ ಸಲ್ಮಾನ್ (ಹೆಸರು ಬದಲಿಸಲಾಗಿದೆ) ಎಂಬುವವರು ತಮ್ಮ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ತಮ್ಮ ಪ್ರೊಫೈಲ್ ಅನ್ನು ಅಪ್‌ಲೋಡ್ ಮಾಡಿದ್ದರು. ಫಾತಿಮಾ ಮುಹಮ್ಮದ್ ಎಂಬ ಪ್ರೊಫೈಲ್ ಹೆಸರಿನ ಮಹಿಳೆಯೊಬ್ಬರು ಸಲ್ಮಾನ್ ಅವರನ್ನು ಏಪ್ರಿಲ್ ಮೊದಲ ವಾರದಲ್ಲಿ ಸಂಪರ್ಕಿಸಿದ್ದಾರೆ.
ಮಹಿಳೆಯೂ ತಾನು ಲಂಡನ್‌ನಲ್ಲಿ ವಾಸಿಸುತ್ತಿದ್ದು, ಶೀಘ್ರದಲ್ಲೇ ಭಾರತಕ್ಕೆ ಹಿಂತಿರುಗುವುದಾಗಿ ಹೇಳಿ ಸಲ್ಮಾನ್ ಅವರ ಮೇಲೆ ಅವರಿಗೆ ಆಸಕ್ತಿ ಇದೆ ಎಂದು ಹೇಳಿ ಪರಿಚಯ ಮಾಡಿಕೊಂಡಿದ್ದಾಳೆ.
ಏಪ್ರಿಲ್ 11 ರಂದು ಸಲ್ಮಾನ್‌ಗೆ ಮಹಿಳೆಯೊಬ್ಬರು ಕರೆ ಮಾಡಿ ತಾನು ಕಸ್ಟಮ್ಸ್ ಅಧಿಕಾರಿ ತನ್ನ ಹೆಸರು ಮನಿಶಾ ಶರ್ಮಾ ಎಂದು ಪರಿಚಯಿಸಿಕೊಂಡಿದ್ದಾರೆ ಹಾಗೂ ಫಾತಿಮಾ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದು, ₹5 ಕೋಟಿಗೂ ಹೆಚ್ಚು ವಿದೇಶಿ ಕರೆನ್ಸಿ ತಂದಿದ್ದಾಳೆ. ಕಸ್ಟಮ್ಸ್ ಅಧಿಕಾರಿಗಳು ಹಣವನ್ನು ಅವರ ಕೆಲವು ದಾಖಲೆಗಳೊಂದಿಗೆ ವಶಪಡಿಸಿಕೊಂಡಿದ್ದಾರೆ ಎಂದು ಮನಿಷಾ ಸಲ್ಮಾನ್‌ಗೆ ತಿಳಿಸಿದ್ದಾರೆ.
ಫಾತಿಮಾಳ ಹಣ ಮತ್ತು ಕೆಲವು ಕಾಗದಗಳನ್ನು ಬಿಡುಗಡೆ ಮಾಡಲು ತನ್ನ ಪರವಾಗಿ ಕೆಲವು ಶುಲ್ಕ ಮತ್ತು ತೆರಿಗೆಗಳನ್ನು ಪಾವತಿಸುವಂತೆ ಸಲ್ಮಾನ್‌ಗೆ ಕೇಳಿದ್ದಾಳೆ.
ಶಂಕಿತರು ನೀಡಿದ ಬ್ಯಾಂಕ್ ಖಾತೆಗಳಿಗೆ ಒಟ್ಟು ₹34,40,700 ಸಲ್ಮಾನ್ ವರ್ಗಾಯಿಸಿದ್ದಾರೆ. ದುಷ್ಕರ್ಮಿಗಳು ಏಪ್ರಿಲ್ 19 ರಿಂದ ಸಲ್ಮಾನ್ ಅವರನ್ನು ಸಂಪರ್ಕಿಸುವುದನ್ನು ನಿಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಿಟಿ ಸೆಂಟರ್ ಶಾಪ್‌ವೊಂದರಲ್ಲಿ ₹5.22 ಲಕ್ಷ ಪತ್ತೆ ; ಜಪ್ತಿ
ಫಾತಿಮಾ ಅವರನ್ನು ಸಂಪರ್ಕಿಸಲು ಸಲ್ಮಾನ್ ಅವರು ಪ್ರಯತ್ನಿಸಿದ್ದಾರೆ. ಆದರೆ, ಅವರ ಯಾವುದೇ ಪ್ರಯತ್ನಗಳು ಸಫಲವಾಗಿಲ್ಲ. ಹೀಗಾಗಿ, ತಾವು ಮೋಸ ಹೋಗಿರುವುದಾಗಿ ಅರಿತ ಸಲ್ಮಾನ್ ಅವರು ವೈಟ್ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಾನಾ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.