ಮುಧೋಳ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಬದ್ಧನಾಗಿರುವೆ. ಬಾಗಲಕೋಟ ಜಿಲ್ಲೆಯ ಮುಧೋಳ ನಗರಕ್ಕೆ ಹೈಟೆಕ್ ಶೌಚಾಲಯ ನಿರ್ಮಿಸಲು ಸಚಿವ ಆರ್.ಬಿ. ತಿಮ್ಮಾಪುರ ಘೋಷಣೆ ಮಾಡಿದ್ದಾರೆ.
ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಧೋಳ ನಗರದ ವಿವಿಧ ವಾರ್ಡ್‌ಗಳಲ್ಲಿ 39 ಹೈಟೆಕ್ ಶೌಚಾಲಯಗಳನ್ನು ನಿರ್ಮಿಸುವ ಯೋಜನೆ ಮಾಡಲಾಗಿದೆ. ಸ್ಥಳ ಪರಿಶೀಲನೆ ಮಾಡಿ ಅಂದಾಜು 7 ಕೋಟಿ 31 ಲಕ್ಷ ವೆಚ್ಚದಲ್ಲಿ ನೈರ್ಮಲ್ಯ ಸೌಲಭ್ಯಗಳನ್ನು ಸುಧಾರಿಸಲು ಮತ್ತು ನಗರದ ನಿವಾಸಿಗಳಿಗೆ ಸ್ವಚ್ಛ, ಆರೋಗ್ಯಕರ ಪರಿಸರಕ್ಕೆ ಸದಾ ಬದ್ದನಾಗಿರುವೆ ಎಂದರು.
ಮಹಾತ್ಮಾ ಗಾಂಧೀಜಿಯವರ ಪರಂಪರೆ ಇಂದಿಗೂ ಭಾರತೀಯರಿಗೆ ಸ್ಫೂರ್ತಿ ನೀಡುತ್ತಿದೆ. 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯ ಶತಮಾನೋತ್ಸವದ ಆಚರಣೆಯು ಸಾಕ್ಷಿಯಾಗಿದೆ. ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಐತಿಹಾಸಿಕ ಅಧಿವೇಶನವು ಬೆಳಗಾವಿಯೊಂದಿಗಿನ ಅವರ ಸಂಪರ್ಕಕ್ಕೆ ನಾಂದಿ ಹಾಡಿತು. ಅವರ ಸ್ಮರಣೆಯನ್ನು ಗೌರವಿಸಲು, ಅಹಿಂಸಾತ್ಮಕ ಪ್ರತಿರೋಧದ ಶಕ್ತಿಯ ಬಗ್ಗೆ ಅಮೂಲ್ಯವಾದ ಪಾಠಗಳನ್ನು ಯುವ ಪೀಳಿಗೆ ಕಲಿಯಬೇಕಿದೆ.
ಇಂದಿನ ಪೀಳಿಗೆಗೆ ವಿಶೇಷವಾಗಿ ಯುವಕರ ನಡುವಿನ ಧರ್ಮ ಧರ್ಮಗಳ ಮಧ್ಯೆ, ಜಾತಿ ವಿಷಬೀಜ ಬಿತ್ತಿವ ಮೂಲಕ ದ್ವೇಷ ಮತ್ತು ಒಡಕಗಳ ನಿವಾರಣೆಗೆ ಗಾಂಧಿಯವರ ಮಾರ್ಗದರ್ಶನದ ಅವಶ್ಯಕತೆ ಇದೆ. ಗಾಂಧಿಯವರ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ನಗರದ ಅಭಿವೃದ್ಧಿಗಾಗಿ ಯಾವುದೇ ರಾಜಕೀಯ ಮಾಡದೆ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ನಗರದ ನಿವಾಸಿಗಳಿಗೆ ಯಾವುದೇ ಅಡೆತಡೆ ಆಗದಂತೆ ವ್ಯಾಪಾರಕ್ಕೆ ಸರಳಿತವಾಗಿ ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ, ನಾಲ್ಕು ದಿಕ್ಕುಗಳ ಕಡೆ ಸ್ಮಶಾನದ ವ್ಯವಸ್ಥೆಮಾಡಲು ಸ್ಥಳ ಹುಡುಕಾಟದಲ್ಲಿ ಅಧಿಕಾರಗಳಿಗೆ ಸೂಚಿಸಿದ್ದೇನೆ. ಆದಷ್ಟು ಬೇಗ ಜನತೆಗೆ ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆಯನ್ನು ಮಾಡುವುದಾಗಿ ಸಚಿವ ತಿಮ್ಮಾಪೂರ ಭರವಸೆ ನೀಡಿದರು.