ಜನರ ಅನುಕೂಲಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಬಿಬಿಎಂಪಿ, ಅವರ ತಲೆ ಮೇಲೆ ಸಾಲದ ಹೊರೆ ಹೊರಿಸಲು ಹೊರಟಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಬ್ರ್ಯಾಂಡ್ ಬೆಂಗಳೂರು ಜಪ ಮಾಡುತ್ತಿದೆ.
‘ಮೊದಲ ಹಂತದಲ್ಲಿ ಸುಮಾರು 65 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲು ಚಿಂತನೆ ನಡೆಸಲಾಗಿದೆ. ನಿರ್ಮಾಣ, ನಿರ್ವಹಣೆ, ವರ್ಗಾವಣೆ ಜೊತೆಗೆ ಟೋಲ್ ಆಯ್ಕೆಯನ್ನೇ ಬಹುತೇಕ ಅಂತಿಮಗೊಳಿಸುವ ಸಾಧ್ಯತೆ ಇದ್ದು, ನಾಗರಿಕರು ಸುರಂಗ ರಸ್ತೆ ಬಳಸುವಾಗ ಶುಲ್ಕ ಪಾವತಿಸಬೇಕಾಗುತ್ತದೆ’ ಎಂದಿದ್ದಾರೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್.
ಮೆಟ್ರೋ, ಎಲಿವೇಟೆಡ್ ಕಾರಿಡಾರ್‍ಗಳು, ಎಕ್ಸ್‌ಪ್ರೆಸ್‌ವೇ, ಅಂಡರ್‌ಪಾಸ್‌ಗಳು, ಸಬ್‌ಅರ್ಬನ್ ರೈಲ್ವೆ ಬಳಿಕ ಇದೀಗ ಬೆಂಗಳೂರಿನ ಸಂಚಾರ ದಟ್ಟಣೆಗೆ ಪರಿಹಾರವಾಗಿ ಸುರಂಗ ಮಾರ್ಗ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಭವಿಷ್ಯದ ದೃಷ್ಟಿಯಿಂದ ಸುರಂಗ ರಸ್ತೆಗಳ ನಿರ್ಮಾಣವೇ ಸೂಕ್ತ; ಇದಕ್ಕೆ ಭೂಸ್ವಾಧೀನದ ಅಗತ್ಯವಿರುವುದಿಲ್ಲ; ನಗರ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ ಎನ್ನುವ ತಜ್ಞರ ಮಾತುಗಳನ್ನು ಮುಂದಿಟ್ಟು ಬಿಬಿಎಂಪಿ ಮತ್ತು ನಗರ ಅಭಿವೃದ್ಧಿ ಸಚಿವರು ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಗರವಾಸಿಗಳನ್ನು, ವಾಹನ ಸವಾರರನ್ನು ನಿರ್ಲಕ್ಷಿಸಿದ್ದಾರೆ.
ಏತನ್ಮಧ್ಯೆ, ನಗರದಲ್ಲಿ ಮೂಲಸೌಕರ್ಯದ ಕೊರತೆಯನ್ನು ನೀಗಿಸಲು 59 ಸಾವಿರ ಕೋಟಿ ಅಂದಾಜು ವೆಚ್ಚದ ಯೋಜನೆಯನ್ನು ತಯಾರಿಸಿರುವ ಬಿಬಿಎಂಪಿ, ಅದಕ್ಕಾಗಿ 39 ಸಾವಿರ ಕೋಟಿ ಸಾಲ ಪಡೆಯಲು ಅನುಮತಿಗಾಗಿ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ. ಬೆಳೆಯುತ್ತಿರುವ ಬೆಂಗಳೂರಿಗೆ ಮೂಲ ಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆಗಳು ಬೇಕು, ನಿಜ. ಆದರೆ ಅದಕ್ಕಾಗಿ ಬಿಬಿಎಂಪಿ ಕೋಟ್ಯಂತರ ರೂಪಾಯಿ ಸಾಲ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ.
ಏಕೆಂದರೆ, ಬೆಂಗಳೂರು ನಗರದಲ್ಲಿ ಬಿಬಿಎಂಪಿಗೆ ಆದಾಯವನ್ನು ಸೃಜಿಸುವ ಹಲವು ಮಾರ್ಗಗಳಿವೆ. ಅದರ ಮುಖ್ಯ ಆದಾಯದ ಮೂಲವಾದ ಆಸ್ತಿ ತೆರಿಗೆಯಿಂದಲೇ ವರ್ಷಕ್ಕೆ 4 ಲಕ್ಷದ 47 ಸಾವಿರ ಕೋಟಿ ಸಂಗ್ರಹವಾಗುತ್ತದೆ. ಇನ್ನು ತೆರಿಗೆಯೇತರ ಆದಾಯವಾಗಿ 3 ಲಕ್ಷದ 9 ಸಾವಿರ ಕೋಟಿಯ ಹರಿವಿದೆ. ಅಸಾಧಾರಣ ಆದಾಯವಾಗಿ 72 ಸಾವಿರ ಕೋಟಿ ಸಂಗ್ರಹವಾಗುತ್ತದೆ. ಇದಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುದಾನವೂ ಹರಿದು ಬರುತ್ತದೆ. 2024-25ರ ಆಯವ್ಯಯದಲ್ಲಿ ಒಟ್ಟು ಆದಾಯ 12,36,950 ಕೋಟಿ ಎಂದು ಬಿಬಿಎಂಪಿಯೇ ಘೋಷಿಸಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹರಿಯಾಣದಲ್ಲಿ ಆಡಳಿತ ವಿರೋಧಿ ಗಾಳಿ- ಇಳಿಜಾರಿನಲ್ಲಿ ಬಿಜೆಪಿ
ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಡಿ.ಕೆ. ಶಿವಕುಮಾರ್, ದೂರದೃಷ್ಟಿಯುಳ್ಳ ರಾಜಕೀಯ ನಾಯಕ ಎಂಬ ಮಾತಿದೆ. ಜೊತೆಗೆ ನಗರದ ಅಭಿವೃದ್ಧಿ ಬಗೆಗಿನ ಅವರ ಕನಸುಗಳು, ಹೇಳಿಕೆಗಳು ಕೂಡ ಅದನ್ನೇ ಹೇಳುತ್ತವೆ. ಅದಕ್ಕೆ ಪೂರಕವಾಗಿ ಅವರು ಬೆಂಗಳೂರಿನ ನಿವಾಸಿಗಳಿಗೆ ಉತ್ಕೃಷ್ಟ ದರ್ಜೆಯ ಸೌಲಭ್ಯ ಮತ್ತು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ‘ನಾಗರಿಕರ ಧ್ವನಿ ಸರ್ಕಾರದ ಧ್ವನಿ’ ಎಂಬ ಘೋಷವಾಕ್ಯದೊಂದಿಗೆ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯ ಚಿಂತನಶೀಲ ಉಪಕ್ರಮಕ್ಕೆ ಚಾಲನೆ ನೀಡಲಾಗಿದೆ ಎನ್ನುತ್ತಾರೆ. ಬೆಂಗಳೂರಿಗೆ ಬೇಕಿರುವ ಸ್ಕೈ-ಡೆಕ್‌ನ ಬಗ್ಗೆ ಮಾತನಾಡುತ್ತಾರೆ. ಎರಡನೇ ವಿಮಾನ ನಿಲ್ದಾಣದ ಕುರಿತು ತಲೆ ಕೆಡಿಸಿಕೊಳ್ಳುತ್ತಾರೆ. ಸಿಲಿಕಾನ್ ಸಿಟಿಯನ್ನು ವಿಶ್ವಮಟ್ಟಕ್ಕೆ ಏರಿಸಿ ಬ್ರ್ಯಾಂಡ್ ಬೆಂಗಳೂರು ಮಾಡ್ತೀವಿ ಎನ್ನುತ್ತಾರೆ.
ವಿಪರ್ಯಾಸವೆಂದರೆ, 1999ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಕೂಡ, ಬೆಂಗಳೂರನ್ನು ಸಿಂಗಾಪೂರ್ ಮಾಡುತ್ತೇನೆ ಎಂದಿದ್ದರು. ಅವರ ನೀಲಿಗಣ್ಣಿನ ಹುಡುಗನಾಗಿ ಡಿ.ಕೆ. ಶಿವಕುಮಾರ್, ಅವರೊಂದಿಗೇ ಇದ್ದರು. ಅದಾಗಿ ಇಲ್ಲಿಗೆ 25 ವರ್ಷಗಳಾದವು. ಅಲ್ಲಿಂದ ಇಲ್ಲಿಯವರೆಗೆ ಐದು ಸರ್ಕಾರಗಳು ಬದಲಾದವು, ಕೋಟಿಗಳು ಕಡ್ಲೆಪುರಿಯಂತೆ ಚೆಲ್ಲಾಡಿದವು. ಬೆಂಗಳೂರು ಬದಲಾಗಿದೆಯೇ- ನಗರವಾಸಿಗಳು ಹೇಳಬೇಕು.
ಹೊರಗಿನವರಿಗೆ ಬೆಂಗಳೂರು ಎಂದರೆ ಐಟಿ-ಬಿಟಿ, ವಿಧಾನಸೌಧ, ಕೋರಮಂಗಲ, ಇಂದಿರಾನಗರ, ಎಂ.ಜಿ. ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಡಾಲರ್‍ಸ್ ಕಾಲನಿ ನೆನಪಾಗಬಹುದು. ಉತ್ತಮ ಹವಾಮಾನ, ಅತ್ಯಾಧುನಿಕ ನಗರ, ಸಹಿಷ್ಣು ಜನರಿಂದ ಅದ್ಭುತವೆನಿಸಬಹುದು. ಆದರೆ ಬೆಂಗಳೂರಿನಲ್ಲಿ ವಾಸಿಸುವ ಜನಕ್ಕೆ ಇದು ನಗರವೋ, ನರಕವೋ- ಹೇಳಲಾಗುತ್ತಿಲ್ಲ. ಅದರಲ್ಲೂ, ಕಳೆದ ಒಂದು ವರ್ಷದಿಂದ ಬೆಂಗಳೂರು, ಬೆಂಗಳೂರಾಗಿ ಉಳಿದಿಲ್ಲ. ಯುದ್ಧಪೀಡಿತ ಪ್ರದೇಶದಂತೆ ಕಂಡರೂ ಆಶ್ಚರ್ಯವಿಲ್ಲ.
ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಅವುಗಳು ಓಡಾಡಲಿಕ್ಕೆ ಸೂಕ್ತವಾದ ರಸ್ತೆಗಳೇ ಇಲ್ಲ. ಬಳಸಲು ಯೋಗ್ಯವಾಗಿದ್ದ ಟಾರ್ ರಸ್ತೆಗಳನ್ನು ವೈಟ್ ಟಾಪಿಂಗ್ ನೆಪದಲ್ಲಿ ಕಿತ್ತು ಇಡಲಾಗಿದೆ. ಉಳಿದ ರಸ್ತೆಗಳಲ್ಲಿ ಗುಂಡಿಗಳದೇ ದರ್ಬಾರು. ಆ ಗುಂಡಿ ಮುಚ್ಚಲು ಪ್ರತಿ ವರ್ಷ 30 ಕೋಟಿ ಖರ್ಚು ಮಾಡಲಾಗುತ್ತಿದೆ. ಈಜಿಪುರದ ಮೇಲ್ಸೇತುವೆ ಗ್ರೀಕ್ ಮಾನ್ಯುಮೆಂಟ್ ಆಗಿಹೋಗಿದೆ. ಜನನಿಬಿಡ ರಸ್ತೆಗಳ ಪಕ್ಕದಲ್ಲಿ ಕೇಬಲ್ ಅಳವಡಿಸಲು ಆಳುದ್ದ ಗುಂಡಿ ತೋಡಿ, ಮುಚ್ಚದೆ ಬಿಟ್ಟು ಅದೆಷ್ಟೋ ತಿಂಗಳಾಗಿದೆ. ಮಳೆ ಬಂದು ನೀರು ತುಂಬಿದರಂತೂ, ಆ ಗುಂಡಿಗೆ ಬಿದ್ದು ಸತ್ತರೂ ಗೊತ್ತಾಗುವುದಿಲ್ಲ. ರಸ್ತೆ ಬದಿಯ ಗಿಡ-ಮರಗಳ ಕೊರಳಿಗೆ ಕೇಬಲ್ ತಂತಿಗಳದೇ ಅಲಂಕಾರ. ಧಾವಂತದ ಬದುಕಿನ ನಗರವಾಸಿಗಳಿಗೆ ಅದೇ ಉರುಳಾದರೂ, ಅದಕ್ಕೆ ಕಡಿವಾಣವಿಲ್ಲ. ಬಡವರು ಕೂಡ ಬದುಕಬಹುದಾದ ನಗರದ ಬಗ್ಗೆ ಯಾರಿಗೂ ಗಮನವಿಲ್ಲ.
ಆದರೂ ಜನರ ಅನುಕೂಲಕ್ಕಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಬಿಬಿಎಂಪಿ, ಅವರ ತಲೆ ಮೇಲೆ ಸಾಲದ ಹೊರೆ ಹೊರಿಸಲು ಹೊರಟಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಬ್ರ್ಯಾಂಡ್ ಬೆಂಗಳೂರು ಜಪ ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಆಳುವ ಸರ್ಕಾರದ ವಿರುದ್ಧ ಜನ ಬೀದಿಗಿಳಿದು ಪ್ರಶ್ನಿಸುವ, ಪ್ರತಿಭಟಿಸುವ ಕೆಚ್ಚನ್ನೇ ಕಳೆದುಕೊಂಡಿದ್ದಾರೆ. ಅದಕ್ಕೆ ಅವರ ಹೊಟ್ಟೆಪಾಡು ಕಾರಣವಿರಬಹುದು. ಜೊತೆಗೆ ಅಸೀಮ ನಿರ್ಲಕ್ಷ್ಯವೂ ಸೇರಿಕೊಂಡಿರಬಹುದು. ಜನರ ಈ ಅಸಹಾಯಕತೆ ಮತ್ತು ಸಹಿಷ್ಣು ಗುಣ ಅಧಿಕಾರಿಗಳು ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸುತ್ತಿದೆ. ಅಭಿವೃದ್ಧಿ ನೆಪದಲ್ಲಿ ಅಧಿಕಾರಸ್ಥರು ‘ಕಾಮಗಾರಿ’ಗಾಗಿ ಕಾತರಿಸುವುದು; ನಗರವಾಸಿಗಳು ನರಕವಾಸಿಗಳಾಗುವುದು ಹೆಚ್ಚಾಗುತ್ತಲೇ ಇದೆ.
