ಪ್ರತಿಭೆಗೆ ತಕ್ಕ ಅವಕಾಶ ಸಿಕ್ಕರೆ ಸಾಧನೆ ಕಠಿಣವಲ್ಲ ಎನ್ನುವುದಕ್ಕೆ ಹಿಮಾಚಲ ಪ್ರದೇಶದ ಯುವತಿಯೊಬ್ಬರು ಮಾದರಿಯಾಗಿದ್ದಾರೆ.
ಬಾಲ್ಯದಲ್ಲಿ ಪೋಷಕರೊಂದಿಗೆ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಪಿಂಕಿ ಹರ್ಯಾಣ್ ಎನ್ನುವ ಯುವತಿ ಚೀನಾದಲ್ಲಿ ವೈದ್ಯಕೀಯ ಪದವಿ ಪಡೆದು ಈಗ ಭಾರತದಲ್ಲಿ ವೈದ್ಯಕೀಯ ವೃತ್ತಿ ಅಭ್ಯಾಸ ಮಾಡುತ್ತಿದ್ದಾಳೆ.
2004ರಲ್ಲಿ, ಟಿಬೆಟಿಯನ್ ನಿರಾಶ್ರಿತರ ಸನ್ಯಾಸಿ ಮತ್ತು ಧರ್ಮ ಶಾಲಾ ಮೂಲದ ಚಾರಿಟಬಲ್ ಟ್ರಸ್ಟ್‌ನ ನಿರ್ದೇಶಕ ಲೋಬ್ಸಾಂಗ್ ಜಮ್ಯಾಂಗ್ ಅವರು, ಪಿಂಕಿ ತಂದೆ ತಾಯಿಯೊಂದಿಗೆ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದ್ದರು. ಹಲವು ದಿನಗಳ ಬಳಿಕ ಚರಣ್ ಖುದ್ನಲ್ಲಿರುವ ಸ್ಲಂ ಪ್ರದೇಶಕ್ಕೆ ಭೇಟಿ ನೀಡಿ ಪಿಂಕಿಯನ್ನು ಭೇಟಿ ಮಾಡಿ ಭಿಕ್ಷಾಟನೆ ಬಿಟ್ಟು ಓದಿನತ್ತ ಬರುವಂತೆ ಮಾಡಿದ್ದರು.
ಆದರೆ ಮೊದಲಿಗೆ ಪಿಂಕಿ ಹರ್ಯಾಣ್ ಅವರ ತಂದೆ ಕಾಶ್ಮೀರಿ ಲಾಲ್‌ರ ಮನವೊಲಿಸುವುದು ಸುಲಭವಾಗಿರಲಿಲ್ಲ. ಹಲವಾರು ಗಂಟೆಗಳ ಪ್ರಯತ್ನದ ಬಳಿಕ ಕೊನೆಗೂ ಆಕೆಗೆ ಶಿಕ್ಷಣ ಕೊಡಿಸಲು ಕಾಶ್ಮೀರಿ ಲಾಲ್ ಒಪ್ಪಿಕೊಂಡರು.
ಧರ್ಮಶಾಲಾದ ದಯಾನಂದ ಪಬ್ಲಿಕ್ ಶಾಲೆಯಲ್ಲಿ ಪಿಂಕಿಗೆ ಪ್ರವೇಶ ದೊರಕಿತ್ತು. ದತ್ತಿ ಸಂಸ್ಥೆಯು 2004ರಲ್ಲಿ ಸ್ಥಾಪಿಸಿದ ದಿಕ್ಕಿಲ್ಲದ ಮಕ್ಕಳ ಹಾಸ್ಟೆಲ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳಲ್ಲಿ ಒಬ್ಬಳಾದಳು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತಲ್ಲಿ ಅಭಿವೃದ್ಧಿ, ಮಾಧ್ಯಮಗಳಲ್ಲಿ ಬ್ರ್ಯಾಂಡ್ ಬೆಂಗಳೂರು
ಸೀನಿಯರ್ ಸೆಕೆಂಡರಿ ಪರೀಕ್ಷೆ ಹಾಗೂ ನೀಟ್ (ಪದವಿ) ಪರೀಕ್ಷೆಗಳಲ್ಲಿ ಉತ್ತೀರ್ಣಳಾದ ಪಿಂಕಿಗೆ, ದುಬಾರಿ ಶುಲ್ಕದ ಕಾರಣದಿಂದ ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರವೇಶ ಕನಸಿನ ಮಾತಾಗಿತ್ತು. ಈ ವೇಳೆ ಆಕೆಯ ನೆರವಿಗೆ ಧಾವಿಸಿದ್ದು ಯುನೈಟೆಡ್ ಕಿಂಗ್‌ಡಮ್‌ನ ಟಾಂಗ್ ಲೆನ್ ಚಾರಿಟೇಬಲ್ ಟ್ರಸ್ಟ್. 2018ರಲ್ಲಿ ಆಕೆಗೆ ಚೀನಾದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರಕಿತ್ತು. ಆಕೆ ಎಂಬಿಬಿಎಸ್ ಪದವಿ ಪಡೆದು ಇತ್ತೀಚೆಗೆ ಧರ್ಮಶಾಲಾಗೆ ಮರಳಿದ್ದಾಳೆ.
“ಬಡತನವು ಬಾಲ್ಯದಿಂದಲೂ ದೊಡ್ಡ ಸವಾಲಾಗಿತ್ತು. ನನ್ನ ಕುಟುಂಬ ಸಂಕಷ್ಟದಲ್ಲಿ ಇರುವುದನ್ನು ನೋಡುವುದೇ ನೋವಿನ ಸಂಗತಿ. ನಾನು ಶಾಲೆಗೆ ಸೇರಿದಾಗ, ಬದುಕಿನಲ್ಲಿ ಯಶಸ್ಸು ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆ ಮೂಡಿತ್ತು.”ಮಗುವಾಗಿದ್ದಾಗ ನಾನು ಸ್ಲಂನಲ್ಲಿ ಬದುಕಿದ್ದೆ. ಹೀಗಾಗಿ ನನ್ನ ಹಿನ್ನೆಲೆಯೇ ಅತಿ ದೊಡ್ಡ ಪ್ರೇರಣೆ. ನನಗೆ ಒಳ್ಳೆಯ ಹಾಗೂ ಆರ್ಥಿಕ ಸುಸ್ಥಿತಿಯ ಜೀವನ ಬೇಕೆಂದು ಬಯಸಿದ್ದೆ” ಎಂದು ಪಿಂಕಿ ತಿಳಿಸಿದ್ದಾಳೆ.
“ಜಮ್ಯಾಂಗ್ ಅವರು ಅನಾಥ ಮತ್ತು ಬಡ ಮಕ್ಕಳಿಗೆ ಸಹಾಯ ಮಾಡುವ ಮನೋಭಾವ ಹೊಂದಿದ್ದಾರೆ. ನಾನು ಶಾಲೆ ಸೇರಿದಾಗ ಅವರೇ ನನಗೆ ಅತಿ ದೊಡ್ಡ ಬೆಂಬಲವಾಗಿದ್ದರು. ನನ್ನ ಮೇಲಿದ್ದ ಅವರ ನಂಬಿಕೆ, ಒಳ್ಳೆಯ ಸಾಧನೆ ಮಾಡುವಂತೆ ನನಗೆ ಸ್ಫೂರ್ತಿ ನೀಡಿತು. ಟ್ರಸ್ಟ್‌ನ ನೆರವಿನೊಂದಿಗೆ ನನ್ನಂತೆಯೇ ಅನೇಕ ಮಕ್ಕಳು ಜೀವನದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ” ಎಂದು ಪಿಂಕಿ ಹೇಳಿದ್ದಾಳೆ.
