ವರುಣಾ ಕ್ಷೇತ್ರದಲ್ಲಿ ಗೆದ್ದರೆ ದೊಡ್ಡ ಸ್ಥಾನ ಕೊಡುತ್ತೇವೆ ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಸಚಿವ ವಿ ಸೋಮಣ್ಣ ಹೇಳಿದ್ದಾರೆ.
ಮೈಸೂರಿನ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, “ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಅನ್ನೋದು ಕನಸು. ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲ್ಲ. ಸಿದ್ದರಾಮಯ್ಯ ಓಲೈಕೆಗಾಗಿ ಎಂ ಬಿ ಪಾಟೀಲ್ ಹೇಳಿಕೆ ನೀಡುತ್ತಿದ್ದಾರೆ” ಎಂದರು.
“ದುಷ್ಟ ಶಕ್ತಿಯ ನಿಗ್ರಹಕ್ಕೆ ಎಲ್ಲಾ ಶಕ್ತಿಗಳು ಒಂದಾಗುತ್ತವೆ. ಸೋಮಣ್ಣ ಗೆಲ್ಲಿಸಿ ದೊಡ್ಡ ಸ್ಥಾನ ಕೊಡುತ್ತೇವೆ ಎಂದು ಸ್ವತಃ ಅಮಿತ್ ಶಾ ಹೇಳಿದ್ದಾರೆ. ನಾನು ಹರಕೆಯ ಕುರಿಯಲ್ಲ” ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಪಾಳಯದಲ್ಲಿ ಟಿಕೆಟ್ ಘೋಷಣೆಗೂ ಮುನ್ನ ವಿ ಸೋಮಣ್ಣ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿಚಾರವಾಗಿ ಅಸಮಾಧಾನಗೊಂಡಿದ್ದರು. ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಅವರೂ ಕೂಡಾ ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ತಮ್ಮ ಕೋಪ ತೋಡಿಕೊಂಡಿದ್ದರು.
ಇದಾದ ಬಳಿಕ ವಿ ಸೋಮಣ್ಣ ಜೊತೆಗೆ ಮಾತುಕತೆ ನಡೆಸುವುದಾಗಿ ಯಡಿಯೂರಪ್ಪ ತಿಳಿಸಿದರೂ ಮಾತುಕತೆ ನಡೆಸಿರಲಿಲ್ಲ. ಇದರ ಮೂಲಕ ಇಬ್ಬರ ನಡುವಿನ ಮುನಿಸು ದೊಡ್ಡ ರಾಜಕೀಯ ಚರ್ಚೆಗೂ ಕಾರಣವಾಗಿತ್ತು. ಬಳಿಕ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ವಿ ಸೋಮಣ್ಣ ಭೇಟಿ ಮಾಡಿದ್ದರು.