ಮೈಸೂರು ಜಿಲ್ಲೆಯ ಎಲ್ಲ ತಾಲೂಕುಗಳ ವಿವಿಧ ಶಾಲೆಗಳಿಂದ ಸಾವಿರಕ್ಕಿಂತ ಹೆಚ್ಚು ಮಕ್ಕಳು ಸೇರಿ ಇದೇ ಮೊದಲ ಬಾರಿಗೆ ಮಕ್ಕಳ ದಸರಾ ಕಲಾಥಾನ್ ನಡೆಸಲಾಗುತ್ತಿದೆ. ಮಕ್ಕಳ ಸಾಂಸ್ಕೃತಿಕ ಅಭಿರುಚಿಯನ್ನು ಅಭಿವ್ಯಕ್ತ ಮಾಡಲಾಗುತ್ತಿದೆ. ಇದರಿಂದ ಮಕ್ಕಳು ಸಾಂಸ್ಕೃತಿಕ ನಾಯಕತ್ವ ಹಾಗೂ ಬಹುತ್ವವನ್ನು ಅರ್ಥಮಾಡಿಕೊಳ್ಳಲು ಈ ಕಾರ್ಯಕ್ರಮ ನೆರವಾಗಲಿದೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ, ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಇಂದು ಆಯೋಜಿಸಿದ್ದ ಮಕ್ಕಳ ದಸರಾ ಕಲಾಥಾನ್‌ಗೆ ಚಾಲನೆ ನೀಡಿ ಸುದ್ದಿಗಾರರೊಡನೆ ಮಾತನಾಡಿದರು.

“ದಸರಾ ಮಹೋತ್ಸವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಮೈಸೂರಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಅದಕ್ಕೆ ತಕ್ಕಂತೆ ನಗರಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೂ ಕೂಡ ಅಚ್ಚುಕಟ್ಟಾಗಿ ಜರುಗುತ್ತಿವೆ. ವಸ್ತು ಪ್ರದರ್ಶನದಲ್ಲಿ ಬಹುತೇಕ ಮಳಿಗೆಗಳು ಪೂರ್ಣಗೊಂಡಿದ್ದು, ಜಿಲ್ಲಾಡಳಿವು ವ್ಯವಸ್ಥಿತವಾಗಿ ಕ್ರಮ ಕೈಗೊಂಡಿದೆ” ಎಂದರು.

“ದಸರಾ ಆಚರಣೆಗೆ ಜನಪ್ರತಿನಿಧಿಗಳು ಒಟ್ಟಾಗಿ ಕೈಜೋಡಿಸಿ ಅಗತ್ಯ ಸಹಕಾರ ನೀಡಿದ್ದಾರೆ. ಈ ದಸರಾ ಆಚರಣೆಯ ಸಂದೇಶವನ್ನು ರಾಷ್ಟ್ರವ್ಯಾಪಿ ಪಸರಿಸಲಿದ್ದೇವೆ. ನಮ್ಮ ಸಂಸ್ಕೃತಿ, ಬಹುತ್ವ, ಆಚಾರ, ವಿಚಾರವನ್ನು ಈ ಮೂಲಕ ಸಾರಲಿದ್ದೇವೆ” ಎಂದು ಹೇಳಿದರು.

ಬಸವಣ್ಣ, ರಾಣಿ ಚೆನ್ನಮ್ಮ, ಒನಕೆ ಓಬವ್ವ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂದೀಜಿ, ಡಾ ಬಿ ಆರ್ ಅಂಬೇಡ್ಕರ್ ಸೇರಿದಂತೆ ಕರ್ನಾಟಕದ ಐತಿಹಾಸಿಕ ವ್ಯಕ್ತಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿದ್ದ ಮಕ್ಕಳು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಪೂಜಾ ಕುಣಿತ, ಡೊಳ್ಳು ಕುಣಿತ, ಜಾನಪದ ನೃತ್ಯ, ಕಂಸಾಳೆ ನೃತ್ಯ, ಗಾರುಡಿ ಗೊಂಬೆ, ಹುಲಿವೇಷ, ವೀರಗಾಸೆ, ಬ್ಯಾಂಡ್‌ಸೆಟ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಪರಿಸರ ಸಂರಕ್ಷಣೆ ವಿಷಯಗಳನ್ನೊಳಗೊಂಡ ವೈವಿಧ್ಯಮಯ ವೇಷಭೂಷಣದಲ್ಲಿ ಹಾಡುತ್ತ, ಕುಣಿಯುತ್ತ ಸಂಭ್ರಮಿಸುವ ಮೂಲಕ ಮೆರವಣಿಗೆಯಲ್ಲಿ ಸಾಗಿದರು. ಸಚಿವರೂ ಕೂಡ ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಈ ವೇಳೆ ಶಾಸಕ ಶ್ರೀವತ್ಸ ಸೇರಿದಂತೆ ಇತರು ಇದ್ದರು.