ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಸತತವಾಗಿ ತೀರಾ ಕಳಪೆ ಸಾಧನೆಯನ್ನು ತೋರಿಸುತ್ತಿದೆ. ಹೀಗಾಗಿ, ಈ ಭಾಗದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ಶಿಫಾರಸು ಮಾಡಲು ರಾಜ್ಯ ಸರ್ಕಾರವು ತಜ್ಞರ ಸಮಿತಿ ರಚಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಡಿಯಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿಯ ನೇತೃತ್ವವನ್ನು ಶಿಕ್ಷಣ ತಜ್ಞ ಎಂದು ಗುರುತಿಸಿಕೊಂಡಿರುವ ಗುರುರಾಜ ಕರಜಗಿ ಅವರಿಗೆ ನೀಡಲಾಗಿದೆ.
ಕರಜಗಿ ಅವರಿಗೆ ಸಮಿತಿಯ ನೇತೃತ್ವ ನೀಡಿರುವುದಕ್ಕೆ ಸಾಕಷ್ಟು ಟೀಕೆ, ವಿರೋಧಗಳು ವ್ಯಕ್ತವಾಗುತ್ತಿವೆ. ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತವನ್ನು ಪ್ರತಿಪಾದಿಸುವ ಕರಜಗಿ ಅವರ ಆಯ್ಕೆಯು ರಾಜ್ಯ ಕಾಂಗ್ರೆಸ್ ಸರ್ಕಾರದ ಸೈದ್ಧಾಂತಿಕ ದಿವಾಳಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಅಂದಹಾಗೆ, ಕರಜಗಿ ಅವರು ಮೂಲತಃ ಇದೇ ಕಲ್ಯಾಣ ಕರ್ನಾಟಕ ಭಾಗದ ಬಾಗಕೋಟೆ ಜಿಲ್ಲೆಯ ಬೀಳಗಿ ತಾಲೂಕಿನವರು. ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ ಮಾಡಿರುವ ಕರಜಗಿ, ರಸಾಯನಶಾಸ್ತ್ರಕ್ಕಿಂತ ಹೆಚ್ಚಾಗಿ ತತ್ವಶಾಸ್ತ್ರದ ಬಗ್ಗೆಯೇ ಮಾತನಾಡುವವರು. ಆರ್‌ಎಸ್‌ಎಸ್-ಬಿಜೆಪಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅವರ ಸನಾತನ ಧರ್ಮ, ಹಿಂದುತ್ವ, ಹಿಂದೂಸ್ತಾನವನ್ನು ಒಪ್ಪಿಕೊಂಡವರು. ಭಕ್ತರಂತೆಯೇ ಮೋದಿಯನ್ನು ಆರಾಧಿಸುವವರು. ಆರಾಧಿಸಲಿ, ಅದು ಅವರ ಆಯ್ಕೆ, ತಪ್ಪಲ್ಲ. ಆದರೆ ಅದನ್ನೇ ಸಾರ್ವಜನಿಕ ಭಾಷಣಗಳಲ್ಲೂ ಬಿತ್ತುವುದು ಎಷ್ಟು ಸರಿ? ಕಾಲೇಜುಗಳಲ್ಲಿ ಆಯೋಜಿಸುವ ಸೆಮಿನಾರ್‌ಗಳಲ್ಲಿಯೂ ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ವಿದ್ಯಾರ್ಥಿಗಳ ತಲೆಗೆ ತುಂಬುವವರನ್ನು ಶಿಕ್ಷಣತಜ್ಞರೆನ್ನಲು ಸಾಧ್ಯವೇ?
ತಮ್ಮ ಭಾಷಣಗಳಲ್ಲಿ ನಾನಾ ಬಣ್ಣಗಳನ್ನು ತುಂಬುವ ಕರಜಗಿ ಅವರು ಸುಳ್ಳು ಭಾಷಣಕಾರ, ಹಿಂದುತ್ವವಾದಿ ಚಕ್ರವರ್ತಿ ಸೂಲಿಬೆಲೆಯನ್ನೂ ಮೀರಿಸುವವರು. ಸೂಲಿಬೆಲೆಯಂತೆಯೇ ಮೋದಿಯನ್ನು ಅಟ್ಟಕ್ಕೇರಿಸಿ, ಧರೆಗಿಳಿದ ದೈವ ಎಂಬಂತೆ ನಂಬಿರುವವರು. ಪ್ರಧಾನಿಯಾಗಿ ಮೋದಿ ಮಾಡಿರುವ ಕೆಲಸಗಳನ್ನು ಇನ್ನಾವುದೇ ಮನುಷ್ಯ ಮಾಡಲು ಸಾಧ್ಯವೇ ಇಲ್ಲವೆಂದು ಬಣ್ಣಿಸುವವರು.
ಹಿಂದುತ್ವ ಮತ್ತು ಕೋಮುದ್ವೇಷವನ್ನು ಬಿತ್ತರಿಸುವ ವಿಕ್ರಮ, ಸಂವಾದ ಸೋಷಿಯಲ್ ಮೀಡಿಯಾಗಳೊಂದಿಗೆ ಕರಜಗಿ ಗುರುತಿಸಿಕೊಂಡವರು. ಆಗಾಗ ಟಿ.ವಿ ವಿಕ್ರಮದಲ್ಲಿ ಕುಳಿತು ಸನಾತನ ಧರ್ಮ, ಹಿಂದುತ್ವದ ಪ್ರವಚನವನ್ನೂ ನೀಡುವವರು. ಜೊತೆಗೆ, ತೇಜಸ್ವಿ ಸೂರ್ಯರಂತಹ ಹಿಂದುತ್ವವಾದಿಗಳೊಂದಿಗೆ ಕುಳಿತು ಆರ್‌ಎಸ್‌ಎಸ್ ಸಿದ್ಧಾಂತಗಳನ್ನು ಪ್ರಚಾರ ಮಾಡುವವರು.
ಅವರನ್ನು ಶಿಕ್ಷಣ ತಜ್ಞರ ಸಮಿತಿಗೆ ಆಯ್ಕೆ ಮಾಡಲಾಗಿದೆ. ಸಮಿತಿಯ ನೇತೃತ್ವವನ್ನೂ ಕರಜಗಿ ಅವರಿಗೆ ಕೊಡಲಾಗಿದೆ. ಹೀಗಾಗಿ, ಅವರು ಮಕ್ಕಳ ಶೈಕ್ಷಣಿಕ ಸುಧಾರಣೆಗಾಗಿ ಕೆಲಸ ಮಾಡುವ ನೆಪದಲ್ಲಿ, ಮಕ್ಕಳ ಓದು, ಆಧ್ಯಯನದಲ್ಲಿ ಆರ್‌ಎಸ್‌ಎಸ್‌ನ ಮನುವಾದಿ, ಕೋಮುವಾದಿ ಸಿದ್ಧಾಂತಗಳನ್ನು ತುಂಬಲು ಕಾಂಗ್ರೆಸ್ ಸರ್ಕಾರವೇ ಅವಕಾಶ ನೀಡುತ್ತಿದೆ ಎಂಬ ಆರೋಪಗಳಿವೆ.
ಈ ವರದಿ ಓದಿದ್ದೀರಾ?: ಇಸ್ರೇಲ್-ಇರಾನ್ ಸಂಘರ್ಷ | ಅಮೆರಿಕಾ ಕುತಂತ್ರಕ್ಕೆ ಇಸ್ರೇಲ್ ದಾಳ
”ಗುರುರಾಜ ಕರಜಗಿ ಒಬ್ಬ ಶಿಕ್ಷಣತಜ್ಞ ಎನ್ನುವವರು ಮುಠ್ಠಾಳರು. ಅವರೊಬ್ಬ ಮೌಢ್ಯ ಪ್ರತಿಪಾದಕ ಮತ್ತು ಸನಾತನಿ. ಅಂತಹ ವ್ಯಕ್ತಿಯನ್ನ ಮಕ್ಕಳ ಬೌದ್ಧಿಕತೆ ಮತ್ತು ಭವಿಷ್ಯ ರೂಪಿಸುವ ಶೈಕ್ಷಣಿಕ ಸುಧಾರಣಾ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಿಸಿರುವುದು ಸರ್ಕಾರದ ಆತ್ಮಹತ್ಯಾಕಾರಿ ಕೆಲಸ. ಕರಜಗಿಯಂತಹ ಅವಕಾಶವಾದಿಗಳಿಗೆ ಮಾನ್ಯತೆ ನೀಡುವ ಅಧಿಕಾರಿಗಳಿಗೆ ತಲೆಯಲ್ಲಿ ಬುದ್ದಿಯಂತೂ ಇಲ್ಲ. ಶಿಕ್ಷಣವನ್ನು ಕುಲಗೆಡಿಸುವ ಕೆಲಸ ಬರೀ ಬಿಜೆಪಿ ಸರ್ಕಾರದಲ್ಲಿ ನಡೆದಿದ್ದಲ್ಲ ಈಗಲೂ ಮುಂದುವರೆದಿರುವುದು ದುರದೃಷ್ಟಕರ” ಎಂದು ಆಕ್ರೋಶವೂ ವ್ಯಕ್ತವಾಗುತ್ತಿದೆ.
ಕರಜಗಿ ನೇತೃತ್ವದ ಸಮಿತಿಯನ್ನು ರದ್ದು ಮಾಡಿ, ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತೊಡಗಿಸಿಕೊಂಡು, ಶೈಕ್ಷಣಿಕ ಅಭಿವೃದ್ಧಿ, ಸುಧಾರಣೆಗಾಗಿ ಕೆಲಸ ಮಾಡುತ್ತಿರುವ ಪ್ರೊ. ನಿರಂಜನಾರಾಧ್ಯರಂತಹ ಶಿಕ್ಷಣ ತಜ್ಞರಿರುವ ಸಮಿತಿಯನ್ನು ರಚಿಸಬೇಕೆಂಬ ಒತ್ತಾಯಗಳು ವ್ಯಕ್ತವಾಗುತ್ತಿವೆ.
ಗುರು ರಾಜ ಕರಜಗಿಯವರು ತತ್ವ ಶಾಸ್ತ್ರ ದ ಬಗ್ಗೆ ಮಾತನಾಡುತ್ತಾರೆ ಅಂದರೆ ಆ ಮೂಲಕ ಅವರನ್ನು ಒಬ್ಬ ತತ್ವ ಜ್ಞಾನಿಯ ಮಟ್ಟಕ್ಕೆ ಏರಿಸಿದಂತಾಗುತ್ತದೆ. ಹಾಗಾಗಿ ಅವರು ಮುಸುಕಿನೊಳಗಿನ ಕೋಮುವಾದದ ಪ್ರಚಾರ ಮಾಡುತ್ತಾರೆ
ಅನ್ನುವುದು ಸರಿ.
ಮೋದಿಯವರನ್ನ ಆರಾಧಿಸಲಿ. ಅದು ಅವರ ಆಯ್ಕೆ. ಅಷ್ಟು ಹೇಳಿದರೆ ಸಾಕು. ಅದನ್ನು ‘ ತಪ್ಪಲ್ಲ’ ಅಂತ ನಾವು ಯಾಕೆ ಹೇಳಬೇಕು? ಅದು ತಪ್ಪೇ, ನಮ್ಮ ಪ್ರಕಾರ. ಅವರಿಗೆ ಅದು ಸರಿ ಅನ್ನಿಸ ಬಹುದು.