‘ಸಬ್ ಕಾ ಮಲಿಕ್ ಏಕ್ ಹೈ’ ಅಂದರೆ, ‘ದೇವರು ಒಬ್ಬನೇ’ ಎಂದು ಪದೇಪದೆ ಹೇಳುತ್ತಿದ್ದದ್ದು ಸಾಯಿಬಾಬಾ… ಸಾಯಿಬಾಬಾ ಭಾರತೀಯ ಆಧ್ಯಾತ್ಮಿಕ ಗುರು, ಸೂಫಿ ಸಂತ, ಫಕೀರ, ಸದ್ಗುರು, ಭಗವಾನ್ ಶಿವ ಹಾಗೂ ಭಗವಾನ್ ದತ್ತಾತ್ರೇಯನ ಅವತಾರ ಎಂದು ಪರಿಗಣಿಸಲಾಗಿದೆ. ಸಾಯಿ ಬಾಬಾ ಅವರು ತಮ್ಮ ಇಡೀ ಜೀವನವನ್ನು ಫಕೀರರಾಗಿ, ಸಮಾಜ ಕಲ್ಯಾಣಕ್ಕಾಗಿ ಕಳೆದವರು. ಹಾಗೆಯೇ, ಜಾತಿ ತಾರತಮ್ಯವನ್ನು ತೀವ್ರವಾಗಿ ಖಂಡಿಸಿದವರು. ಆದರೆ, ಅವರನ್ನೂ ದೇವರನ್ನಾಗಿ ಮಾಡಲಾಗಿದೆ.
ಶಿರಡಿಯಲ್ಲಿರುವ ಸಾಯಿಬಾಬಾ ಮೂರ್ತಿಯ ದರ್ಶನ ಮಾಡಿದರೆ ತಮ್ಮೆಲ್ಲಾ ದುಃಖ, ನೋವು, ಸಂಕಟ ದೂರವಾಗುತ್ತದೆ ಎನ್ನುವುದು ಹಲವು ಭಕ್ತರ ನಂಬಿಕೆ. ಈ ಕಾರಣಕ್ಕಾಗಿಯೇ ಪ್ರತಿದಿನ ಲಕ್ಷಾಂತರ ಭಕ್ತರು ಶಿರಡಿಧಾಮಕ್ಕೆ ಹಾಗೂ ನಗರಗಳಲ್ಲಿರುವ ಬಾಬಾ ಸನ್ನಿಧಾನಕ್ಕೆ ದರ್ಶನಕ್ಕೆಂದು ತೆರಳುತ್ತಾರೆ. ಸಾಯಿಬಾಬಾರ ಭಕ್ತರು ಅವರನ್ನು ದೈವಿಕ ರೂಪವೆಂದು ಪೂಜೆ ಮಾಡುತ್ತಾರೆ. ಕೆಲವರು ಸಾಯಿಬಾಬಾರನ್ನು ಹಿಂದು ಎಂದು ಕರೆದರೆ, ಇನ್ನು ಕೆಲವರು ಅವರನ್ನು ಮುಸ್ಲಿಂ ಎಂದು ಕರೆಯುತ್ತಾರೆ. ಎಲ್ಲ ಧರ್ಮದವರೂ ಸೇರಿಯೇ ಸಾಯಿಬಾಬಾ ಅವರನ್ನು ಪೂಜಿಸುತ್ತಾರೆ, ನಂಬುತ್ತಾರೆ. ಇನ್ನೂ ಹೇಳಬೇಕು ಎಂದರೆ, ಬಾಬಾ ಅವರು ಹೆಚ್ಚಾಗಿ ಹಿಂದು ಭಕ್ತರನ್ನು ಹೊಂದಿದ್ದಾರೆ.
ಸಾಯಿಬಾಬಾ ಅವರನ್ನು ದೇವರು ಮಾಡಿ ಹಲವು ವರ್ಷಗಳಾಗಿವೆ. ಸಾಯಿ ಬಾಬಾ ಅವರ ಮುಖ್ಯ ಸಂದೇಶ ಸಮಾನತೆ ಮತ್ತು ಜಾತ್ಯತೀತತೆಯಾಗಿತ್ತು. ಅವರು ‘ಅಲ್ಲಾ ಮಾಲಿಕ್’ ಮತ್ತು ‘ರಘುಪತಿ ರಾಘವ’ ಎಂಬುದನ್ನ ಒಟ್ಟಿಗೆ ಹೇಳುತ್ತಿದ್ದರು. ಇದು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸ್ನೇಹ ಮತ್ತು ಶಾಂತಿಗಾಗಿ ಹೇಳಿದ ಸಂದೇಶವಾಗಿತ್ತು. ಅವರು ಹಿಂದೂಗಳಿಗೂ, ಮುಸ್ಲಿಮರಿಗೂ, ಬೇರೆ ಧರ್ಮಗಳ ಅನುಯಾಯಿಗಳಿಗೂ ತತ್ವಗಳನ್ನು ಬೋಧಿಸುತ್ತಿದ್ದರು. ಯಾವುದೇ ಭೇದಭಾವ ಮಾಡದೆ ಎಲ್ಲರಿಗೂ ತಮ್ಮ ಆಶೀರ್ವಾದವನ್ನು ನೀಡುತ್ತಿದ್ದರು. ಸಾಯಿ ಬಾಬಾ ತಮ್ಮ ಜೀವನವನ್ನು ಕೇವಲ ಧಾರ್ಮಿಕ ಕಾರ್ಯಗಳಿಗೆ ಮೀಸಲಾಗಿಡದೆ, ಮಾನವ ಸೇವೆಯಲ್ಲಿಯೂ ತೊಡಗಿಕೊಂಡಿದ್ದರು. ಸಾಯಿಬಾಬಾ ಅವರ ಪವಾಡಗಳು ಮತ್ತು ಖಾಯಿಲೆಗಳನ್ನ ಗುಣಪಡಿಸಲು ಅವರ ಬಳಿ ಔಷಧಿಯ ಶಕ್ತಿಗಳಿದ್ದವು. ಬಾಬಾ ಅವರು ಅನೇಕರನ್ನು ಬೇಗ ಚೇತರಿಸಿಕೊಳ್ಳುವಂತೆ ಮಾಡಿದ್ದರು. ಅನೇಕರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆದಿದ್ದಾರೆ. ಜನರು ಸಾಯಿಬಾಬಾ ಅವರನ್ನ ಅಪಾರವಾಗಿ ನಂಬಿದ್ದರು. ಇದರಿಂದಲೇ, ಸಾಯಿ ಬಾಬಾ ಅವರ ತತ್ವಗಳು ಮತ್ತು ಬೋಧನೆಗಳು ಅವರು ಸಾವಿನ ನಂತರವೂ ಜೀವಂತವಾಗಿ ಉಳಿದಿವೆ. ಹಲವಾರು ಭಕ್ತರು ಬಾಬಾ ಅವರನ್ನು ದೇವರಾಗಿ ಒಪ್ಪಿಕೊಂಡಿದ್ದಾರೆ.
ದೇವಾಲಯಗಳಲ್ಲಿ ಸಾಯಿಬಾಬಾ ವಿಗ್ರಹ ತೆರವು ಮತ್ತು ಅಭಿಯಾನ
ಸದ್ಯ ಉತ್ತರಪ್ರದೇಶದಲ್ಲಿ ಸಾಯಿಬಾಬಾ ಪ್ರತಿಮೆಯ ವಿಚಾರ ಸುದ್ದಿಯಲ್ಲಿದೆ. ಸಾಯಿಬಾಬಾ ಅವರ ವಿಗ್ರಹಗಳನ್ನ ಹಿಂದುತ್ವ ಕೋಮುವಾದಿ ಗುಂಪುಗಳು ದೇವಾಲಯಗಳಿಂದ ತೆರುವು ಮಾಡುತ್ತಿವೆ. ಎಲ್ಲ ಧರ್ಮದವರು ಒಪ್ಪಿಕೊಂಡಿದ್ದ ದೇವರಿಗೂ ಕೂಡ ಈಗ ಕೋಮುವಾದ ಅಂಟಿದೆ. ಹೌದು, ಸನಾತನ ರಕ್ಷಕ ದಳ ಮತ್ತು ಬ್ರಾಹ್ಮಣ ಸಭಾ ಎನ್ನುವ ಸಂಘಟನೆಗಳು ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಸಾಯಿಬಾಬಾ ಅವರ ವಿಗ್ರಹಗಳನ್ನು ತೆರುವುಗೊಳಿಸುತ್ತಿದೆ. ಈ ಅಭಿಯಾನ ಆರಂಭವಾದಾಗಿನಿಂದ ವಾರಣಾಸಿಯೊಂದರಲ್ಲೇ 14 ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆಗೆಯಲಾಗಿದೆ. ಇದು ಕೇವಲ ಸಣ್ಣ ದೇವಾಲಯಗಳಲ್ಲದೇ, 2013ರಲ್ಲಿ ಸಾಯಿಬಾಬಾ ಅವರ ವಿಗ್ರಹವನ್ನು ಸ್ಥಾಪಿಸಿದ ಲಖನೌನ ಪ್ರಸಿದ್ಧ ಬಡಾ ಗಣೇಶ್ ಮಂದಿರದಂತಹ ದೊಡ್ಡ ದೇವಾಲಯಗಳಲ್ಲಿಯೂ ಸಾಯಿಬಾಬಾ ವಿಗ್ರಹಗಳನ್ನ ತೆರವು ಮಾಡಲಾಗಿದೆ. ಇನ್ನೂ 50 ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವುಗೊಳಿಸಲಾಗುವುದು ಎಂದು ಸನಾತನ ರಕ್ಷಣಾ ದಳದ ಮುಖ್ಯಸ್ಥ ಅಜಯ್ ಶರ್ಮ ಹೇಳಿದ್ದಾರೆ. ಭೂತೇಶ್ವರ ದೇವಾಲಯ ಮತ್ತು ಅಗಸ್ತ್ಯ ಕುಂಡ ದೇವಾಲಯದಂತಹ ಇತರ ದೇವಾಲಯಗಳು ಹಿಂದುತ್ವವಾದಿಗಳ ಹಿಟ್ ಲಿಸ್ಟ್‌ನಲ್ಲಿ ನಂತರದ ಸ್ಥಾನದಲ್ಲಿವೆ.

ಸನಾತನ ರಕ್ಷಕ ದಳ ಮತ್ತು ಬ್ರಾಹ್ಮಣ ಸಭಾ ಎನ್ನುವ ಸಂಘಟನೆಗಳು ಸೇರಿದಂತೆ ಕೇಸರಿ ಪಡೆಯ ಕೆಲ ಮುಖಂಡರು ಹಾಗೂ ಹಿಂದೂ ಧಾರ್ಮಿಕ ಮುಖಂಡರು ದೇವಾಲಯಗಳಲ್ಲಿ ಸಾಯಿಬಾಬಾ ಪೂಜೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೆ, ಸನಾತನ ರಕ್ಷಕ ದಳ ಎಂಬ ಸಂಘಟನೆ ಸಾಯಿಬಾಬಾ ಮೂರ್ತಿ ತೆರವು ಅಭಿಯಾನ ನಡೆಸಿದೆ. ಹಿಂದುತ್ವದ ಹೆಸರೇಳಿಕೊಂಡು, ಕೇಸರಿ ಉಡುಪು ತೊಟ್ಟ ಕೆಲವರು ಏಕಾಏಕಿ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿ ದೇಗುಲದಲ್ಲಿರುವ ಮೂರ್ತಿಗೆ ಬಟ್ಟೆ ಕಟ್ಟಿ ಮೂರ್ತಿಯನ್ನ ದೇವಸ್ಥಾನದಿಂದ ಹೊರಗೆ ತಂದಿಡುತ್ತಿದ್ದಾರೆ. ಇದು ಭಕ್ತರ ನಂಬಿಕೆಗಳನ್ನು ಘಾಸಿಗೊಳಿಸುವುದು ಹಾಗೂ ಸಾಯಿಬಾಬಾ ಅವರನ್ನು ನಂಬಿ ಪೂಜೆ ಮಾಡುತ್ತಿದ್ದವರಿಗೆ ಭಾವನಾತ್ಮಕವಾಗಿ ನೋವುಂಟ ಮಾಡಿದ ಕ್ರಿಯೆಯಾಗಿದೆ. ದೇಶದಾದ್ಯಂತ ಕೋಟ್ಯಾಂತರ ಜನರು ಸಾಕ್ಷಾತ್ ದೇವರೆಂದು ನಂಬಿಕೊಂಡು ಬಂದಿರುವ ಸಾಯಿಬಾಬಾರ ವಿಗ್ರಹವನ್ನು ತೆರವುಗೊಳಿಸಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಈ ನಡೆ ಭಯಾನಕವಾಗಿದೆ.
“ಈಗಾಗಲೇ ಹತ್ತು ದೇವಸ್ಥಾನಗಳಲ್ಲಿನ ಸಾಯಿಬಾಬಾ ಮೂರ್ತಿ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗಸ್ಱಕುಂಡ ಮತ್ತು ಭೂತೇಶ್ವರ ದೇವಸ್ಥಾನಗಳಲ್ಲೂ ಸಾಯಿಬಾಬಾ ಮೂರ್ತಿ ತೆರವುಗೊಳಿಸಲಾಗುವುದು. ನಾವು ಸಾಯಿಬಾಬಾ ಅವರ ವಿರೋಧಿಗಳಲ್ಲ. ಆದರೆ, ದೇಗುಲಗಳಲ್ಲಿ ಸಾಯಿಬಾಬಾ ಮೂರ್ತಿಗೆ ಜಾಗವಿಲ್ಲ. ಸಾಯಿಬಾಬಾ ಅನುಯಾಯಿಗಳು ಅವರಿಗಾಗಿಯೇ ಗುಡಿ ನಿರ್ಮಿಸಿ, ಅಲ್ಲಿಯೇ ಪೂಜಿಸಲಿ. ಸನಾತನ ಧರ್ಮದಲ್ಲಿ ಅವರ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲ. ಸನಾತನ ಧರ್ಮದ ದೇಗುಲಗಳಲ್ಲಿ ಐದು ದೇವರ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಪೂಜೆಗಷ್ಟೇ ಅವಕಾಶವಿದೆ. ಇದರಲ್ಲಿ ಸೂರ್ಯ, ವಿಷ್ಣು, ಶಿವ, ಶಕ್ತಿ ಹಾಗೂ ಗಣೇಶ ಮೂರ್ತಿಗಳ ಆರಾಧನೆಗಷ್ಟೇ ಅವಕಾಶ” ಎಂದು ಸನಾತನ ರಕ್ಷಣಾ ದಳದ ಮುಖ್ಯಸ್ಥ ಅಜಯ್ ಶರ್ಮ ಹೇಳಿದ್ದಾರೆ.
ಇದಕ್ಕೆ ಕೋರಸ್ ಎಂಬಂತೆ, ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಹಾಗೂ ಭಗೇಶ್ವರ ಧಾಮದ ಆಚಾರ್ಯ ಧೀರೇಂದ್ರ ಶಾಸ್ತ್ರಿ ಅವರು, “ಸಾಯಿಬಾಬಾ ಹಿಂದೂ ದೇವರಲ್ಲ. ಪ್ರಾಚೀನ ಪುರಾಣಗಳಲ್ಲಿ ಸಾಯಿಬಾಬಾ ಅವರ ಉಲ್ಲೇಖವಿಲ್ಲ. ಸಾಯಿಬಾಬಾ ಅವರನ್ನು ‘ಮಹಾತ್ಮ’ ಎಂದು ಕರೆಯಬಹುದೇ ಹೊರತು, ದೇವರೆಂದಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, 2014ರಲ್ಲಿ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಸಾಯಿಬಾಬಾ ಅವರ ಆರಾಧನೆಯ ವಿರುದ್ಧ ಪ್ರಮುಖ ಅಭಿಯಾನ ನಡೆಸಿದ್ದರು. ಸಾಯಿಬಾಬಾ ದೇವರಲ್ಲ, ಅವರನ್ನ ಹಿಂದೂ ದೇವಾಲಯಗಳಲ್ಲಿ ಪೂಜೆ ಮಾಡಬಾರದು ಎಂದು ವಾದಿಸಿದ್ದರು. ಆ ಸಮಯದಲ್ಲಿ, ಶಂಕರಾಚಾರ್ಯರ ಅನುಯಾಯಿಗಳು ಹಲವಾರು ದೇವಾಲಯಗಳಿಂದ ಸಾಯಿಬಾಬಾ ಅವರ ವಿಗ್ರಹಗಳನ್ನು ತೆಗೆದುಹಾಕಲು ಒತ್ತಾಯಿಸಿದರು. ಆದರೆ, ಈ ಅಭಿಯಾನ ಭಕ್ತರಿಂದ ಬಲವಾದ ಪ್ರತಿರೋಧವನ್ನು ಎದುರಿಸಿತ್ತು. ಇದು ಆ ಸಮಯದಲ್ಲಿ ವ್ಯಾಪಕ ಚರ್ಚೆಯನ್ನ ಹುಟ್ಟು ಹಾಕಿತು.
ಶಾಂತಿ, ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಇದೀಗ, ಸನಾತನ ರಕ್ಷಣಾ ದಳದ ಮುಖ್ಯಸ್ಥ ಅಜಯ್ ಶರ್ಮ ಅವರನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ ಮತ್ತು ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಗೌರವ್ ಬನ್ಸ್ವಾಲ್ ಹೇಳಿದ್ದಾರೆ.

ಅಲ್ಲದೇ, ದೇವಸ್ಥಾನಗಳಿಂದ ಸಾಯಿಬಾಬಾ ಮೂರ್ತಿಗಳನ್ನು ತೆರವುಗೊಳಿಸುವ ಅಜಯ್ ಶರ್ಮ ನಡೆಯನ್ನು ಭಕ್ತರು ವಿರೋಧಿಸಿದ್ದಾರೆ. ಅಲ್ಲದೇ, ದೇವಸ್ಥಾನಗಳ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಸಾಯಿಬಾಬಾ ಮಂದಿರಗಳ ವ್ಯವಸ್ಥಾಪಕರು ತೀರ್ಮಾನಿಸಿದ್ದಾರೆ.
ಎನಿವೇ, ಸನಾತನ ರಕ್ಷಣಾ ದಳ ಹೇಳುವಂತೆ ಕೇವಲ ಐದು ದೇವರುಗಳನ್ನು ಮಾತ್ರ ಪೂಜಿಸಬೇಕು ಎಂಬ ವಾದ ಮುನ್ನೆಲೆಗೆ ಬಂದಿದೆ. ಹಾಗಾದರೆ, ಮುಕ್ಕೋಟಿ ದೇವರುಗಳಿವೆ ಎಂದು ನಂಬುವ ದೇಶದಲ್ಲಿ ಉಳಿದ ದೇವರುಗಳಿಗೆ ಪೂಜೆ ಯಾರು ಮಾಡಬೇಕು. ಅಲ್ಲದೆ, ಹಿಂದುಳಿದ, ತಳಸಮುದಾಯಗಳು ಪೂಜಿಸುವ ಮಾರಮ್ಮ, ಮಾಸ್ತಮ್ಮ ಸೇರಿದಂತೆ ಆಯಾ ಪ್ರದೇಶದಲ್ಲಿ ಪೂಜಿಸುವ ಜನಸಮುದಾಯದ ದೇವರುಗಳಿಗೆ ಗೌರವಿಲ್ಲವೇ ಎಂಬ ಪ್ರಶ್ನೆಗಳು ಭುಗಿಲೆದ್ದಿವೆ.
ಸಾಯಿಬಾಬಾ ವಿಗ್ರಹ ತೆರವು ವಿರುದ್ಧ ಆಕ್ರೋಶ
ಇನ್ನು ಸಾಯಿಬಾಬಾ ವಿಗ್ರಹ ವಿವಾದ ರಾಜಕೀಯ ಬಿಕ್ಕಟ್ಟನ್ನೂ ಹುಟ್ಟುಹಾಕಿದೆ. ಬಿಜೆಪಿಯು ಧರ್ಮವನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ಆರೋಪಿಸಿದೆ. ಎಸ್‌ಪಿ ನಾಯಕ ಅಶುತೋಷ್ ಸಿನ್ಹಾ ಅವರು ಇಡೀ ಪ್ರಕರಣವನ್ನು ‘ರಾಜಕೀಯ ಸ್ಟಂಟ್’ ಎಂದು ಕರೆದ್ದಾರೆ. ಅಲ್ಲದೇ, ಇದು ಮತದಾರರ ನಡುವೆ ವಿಭಜನೆ ಸೃಷ್ಟಿಸಲು ಈ ವಿವಾದ ಹುಟ್ಟುಹಾಕಲಾಗಿದೆ ಎಂಬ ಮಾತೂ ಇದೆ.
”ಸಾಯಿಬಾಬಾ ಅವರ ಮೂರ್ತಿ ತೆರವು ಬಿಜೆಪಿಯ ರಾಜಕೀಯ ತಂತ್ರದ ಭಾಗವಾಗಿದೆ. ಮಹಾರಾಷ್ಟ್ರದಲ್ಲಿ ಸಾಯಿಬಾಬಾ ಅವರನ್ನು ವ್ಯಾಪಕವಾಗಿ ಪೂಜಿಸಲಾಗುತ್ತದೆ. ಹಿಂದೂ ಧರ್ಮ ಎಂದರೆ ಎಲ್ಲವನ್ನೂ ಒಳಗೊಳ್ಳುವ ಗುಣ ಹೊಂದಿದೆ. ಶತಮಾನಗಳಿಂದ ಬಹಳಷ್ಟು ನಂಬಿಕೆಗಳನ್ನು ಇದು ಒಳಗೊಂಡಿದೆ” ಎಂದು ಸಿನ್ಹಾ ಹೇಳಿದ್ದಾರೆ.
ಸದ್ಯ, ಲಖನೌನ ಪ್ರಸಿದ್ಧ ಬಡಾ ಗಣೇಶ ದೇವಸ್ಥಾನದಲ್ಲಿ ಸಾಯಿಬಾಬಾ ಮೂರ್ತಿಯನ್ನು ತೆಗೆದು ದೇವಸ್ಥಾನದ ಹೊರಗಿನ ಆವರಣದಲ್ಲಿ ಇಡಲಾಗಿದೆ. ಇನ್ನು, ವಾರಾಣಸಿಯ ಸಂತ ರಘುವರ್ ದಾಸ್ ನಗರದ ಸಾಯಿ ಮಂದಿರದ ಅರ್ಚಕ ಸಮರ್ ಘೋಷ್, ”ಇಂದು ಸನಾತನಿ ಎಂದು ಹೇಳುವವರೇ ದೇವಸ್ಥಾನಗಳಲ್ಲಿ ಸಾಯಿಬಾಬಾ ಮೂರ್ತಿಗಳನ್ನು ಸ್ಥಾಪಿಸಿದವರು. ಅವರೇ, ಈಗ ಮೂರ್ತಿಗಳನ್ನು ತೆರವುಗೊಳಿಸುತ್ತಿದ್ದಾರೆ. ಎಲ್ಲ ದೇವರೂ ಒಂದೇ, ದೇವರು ಯಾವ ರೂಪದಲ್ಲೂ ಇರಬಹುದು, ಇಂಥ ನಡೆ ಭಕ್ತರ ನಂಬಿಕೆಗಳನ್ನು ಘಾಸಿಗೊಳಿಸುತ್ತದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸದ್ಯ ಸಾಯಿಬಾಬಾ ವಿಗ್ರಹಗಳನ್ನ ತೆರುವು ಮಾಡುತ್ತಿರುವುದನ್ನ ಎಲ್ಲರೂ ಒಪ್ಪುವುದಿಲ್ಲ. ಸಾಯಿಬಾಬಾ ಅನುಯಾಯಿ ವಿವೇಕ್ ಶ್ರೀವಾಸ್ತವ ಅವರು ಈ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ”ಈ ಘಟನೆಯು ಲಕ್ಷಾಂತರ ಸಾಯಿ ಭಕ್ತರ ನಂಬಿಕೆಯನ್ನು ಘಾಸಿಗೊಳಿಸಿದೆ. ಎಲ್ಲ ದೇವರುಗಳು ಒಂದೇ. ಪ್ರತಿಯೊಬ್ಬರಿಗೂ ತಾವು ನಂಬುವ ಯಾವುದೇ ರೂಪದಲ್ಲಿ ದೇವರನ್ನು ಪೂಜಿಸುವ ಹಕ್ಕಿದೆ. ನಂಬಿಕೆ ಎಂದರೆ ನಂಬಿಕೆ. ಅದು ಸಂತ ಅಥವಾ ದೇವತೆಯಿರಲಿ. ಸಾಯಿಬಾಬಾ ಹಿಂದೂ ಅಥವಾ ಮುಸ್ಲಿಮ ಅಲ್ಲ. ಈ ಧರ್ಮಗಳನ್ನು ರಚಿಸುವವರು ನಾವೇ. ದೇವರು ಮನುಷ್ಯರ ನಡುವೆ ಭೇದವನ್ನು ಮಾಡುವುದಿಲ್ಲ” ಎಂದಿದ್ದಾರೆ.
ಕಾಂಗ್ರೆಸ್ ವಕ್ತಾರ ಮನೀಶ್ ಹಿಂದ್ವಿ ಅವರು, “ಬಿಜೆಪಿಯು ಧರ್ಮವನ್ನು ರಾಜಕೀಯಕ್ಕಾಗಿ ಕುಸ್ತಿ ಅಖಾಡವಾಗಿ (‘ಅಖಾರಾ’) ಮಾಡಿಕೊಂಡಿರುವುದು ದುರದೃಷ್ಟಕರ” ಎಂದು ಹೇಳಿದ್ದಾರೆ. ಸಾಯಿಬಾಬಾ ಅವರ ಏಕತೆ ಮತ್ತು ಪ್ರೀತಿಯ ಸಂದೇಶವು ರಾಜಕೀಯ ಹಗ್ಗ ಜಗ್ಗಾಟದಲ್ಲಿ ಸಿಕ್ಕಿಹಾಕಿಕೊಳ್ಳುವ ರೀತಿ ತೋರುತ್ತಿದೆ. ಇದು ಶೀಘ್ರದಲ್ಲೇ ಮುಗಿಯುವ ಹಾಗೇ ಕಾಣಿಸುತ್ತಿಲ್ಲ.

ಸಾಯಿಬಾಬಾ ಎಲ್ಲರ ಪ್ರೀತಿಯ ಸಂತನಾಗಿದ್ದಾರೆ. ಪ್ರೀತಿ ಮತ್ತು ಐಕ್ಯತೆಯನ್ನು ಬೋಧಿಸಿದ ವ್ಯಕ್ತಿಗೆ ಸನಾತನಿಗಳು ದೇವಾಲಯಗಳಿಂದ ಅವರ ವಿಗ್ರಹಗಳನ್ನು ತೆಗೆದುಹಾಕುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಸಾಯಿಬಾಬಾ ಮುಸ್ಲಿಂ ಫಕೀರ ಎಂದು ಕೆಲವು ಹಿಂದು ಗುಂಪುಗಳು ವಾದಿಸುತ್ತಿವೆ. ಸತ್ತ ವ್ಯಕ್ತಿಯ ವಿಗ್ರಹವನ್ನ ಸ್ಥಾಪನೆ ಮಾಡುವುದು ಹಿಂದು ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಹಾಗಾಗಿ, ಬಾಬಾನನ್ನು ಹಿಂದು ದೇವಾಲಯಗಳಲ್ಲಿ ಪೂಜೆ ಮಾಡುವಂತಿಲ್ಲ ಎಂದು ಕೋಮುವಾದದ ಕಿಡಿ ಹಚ್ಚುತ್ತಿವೆ. ಆದರೆ, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿ ಹೇಳಿದ್ದ ನಾರಾಯಣ ಗುರು ಅವರ ದೇವಾಸ್ಥಾನ ಇದೆ. ಇನ್ನು ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಪವಿತ್ರ ಬೃಂದಾವನ (ಸಮಾಧಿ) ತೀರ್ಥ ಸ್ಥಳವಾಗಿದೆ. ಈ ಕ್ಷೇತ್ರಕ್ಕೆ ದೇಶದಾದ್ಯಂತ ಭಕ್ತರು ಭೇಟಿ ನೀಡುತ್ತಾರೆ.
ಜನರ ಸಂತ ಶ್ರೀ ಕಾಶಿ ವಿಷ್ಣು ತಾತಾಚಾರ್ಯರು (ಕೈವಾರ ತಾತಯ್ಯ) ಕೈವಾರ ಎಂಬ ಊರಿನಲ್ಲಿ ಜನಿಸಿದರು. ಅವರು ವೈಷ್ಣವ ಪರಂಪರೆಯ ಅನುಯಾಯಿ, ಶ್ರೀ ವಿಷ್ಣುವಿನ ಭಕ್ತರಾಗಿ, ದಾರ್ಶನಿಕ ಶಕ್ತಿಯನ್ನು ಹೊಂದಿದ ಸನ್ಯಾಸಿಯಾಗಿದ್ದರು. ಕೈವಾರ ತಾತಯ್ಯನವರ ದೇವಸ್ಥಾನಗಳನ್ನು ನಿರ್ಮಿಸಲಾಗಿದ್ದು, ಅಧ್ಯಾತ್ಮ ಮತ್ತು ಭಕ್ತಿಯಲ್ಲಿ ಶ್ರದ್ಧಾವಂತರಿಗೆ ಶಾಂತಿ ನೀಡುವ ಪ್ರಮುಖ ತೀರ್ಥಕ್ಷೇತ್ರಗಳಾಗಿವೆ.
ಈ ಸುದ್ದಿ ಓದಿದ್ದೀರಾ? ಆರ್ಥಿಕವಾಗಿ ತತ್ತರಿಸುತ್ತಿದೆ ಪಾಕಿಸ್ತಾನ; ಯಾಕಿಷ್ಟು ಆರ್ಥಿಕ ಬಿಕ್ಕಟ್ಟು?
ಸಾಯಿಬಾಬಾರ ಅನುಯಾಯಿಗಳು ಈ ವಿವಾದವನ್ನು ಸುಮ್ಮನೆ ನೋಡುತ್ತಿದ್ದಾರೆ. ಭಾರತದಾದ್ಯಂತ, ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಸಾಯಿಬಾಬಾ ಭಕ್ತರು ಲಕ್ಷಾಂತರ ಜನರಿದ್ದಾರೆ. “ಧರ್ಮ, ಜಾತಿ ಅಥವಾ ಪಂಥ ಭೇದಗಳನ್ನು ಮೀರಿ” ಎಂದು ಶಿರಡಿಯಲ್ಲಿರುವ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಹೇಳಿದೆ.
ಈ ಅಭಿಯಾನವು ಸನಾತನ ಧರ್ಮದ ಪರಿಶುದ್ಧತೆಯನ್ನು ಕಾಪಾಡುವುದಾಗಿದೆ ಎಂದು ಹಿಂದುವಾದಿಗಳು ವಾದಿಸುತ್ತಿದ್ದರೆ, ಇತರರು ಇದನ್ನು ಹಿಂದೂ ಧರ್ಮದ ಒಳಗೊಳ್ಳುವಿಕೆಗೆ ವಿರುದ್ಧವಾಗಿ ವಿಭಜಿಸುವ ಕ್ರಮವೆಂದು ಹೇಳುತ್ತಾರೆ.
ಇನ್ನು ಈ ಹಿಂದುತ್ವವಾದಿಗಳು ಪ್ರತಿಬಾರಿಯೂ ಒಂದಿಲ್ಲೊಂದು ಪ್ರಹಸನದ ಮೂಲಕ ಕೋಮುಗಲಭೆ ಎಬ್ಬಿಸುವುದು, ಬೆಂಕಿ ಕಿಡಿ ಹಚ್ಚುವ ಕಾಯಕವನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈಗ ಸಾಯಿಬಾಬಾನಿಗೆ ಗಂಟುಬಿದ್ದಿದ್ದಾರೆ. ಸಮಾಜದ ಶಾಂತಿ-ಸುವ್ಯವಸ್ಥೆಯನ್ನ ಹಾಳು ಮಾಡುತ್ತಿದ್ದಾರೆ. ಇದನ್ನು ಜನರು ಅರಿಯಬೇಕಾಗಿದೆ.