ಮದುವೆಗೆ ಹೊರಟಿದ್ದ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು, 30 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ನಡೆದಿದೆ. ಬಸ್‌ನಲ್ಲಿದ್ದವರ ಪೈಕಿ, 20-25 ಮಂದಿ ಬದುಕುಳಿದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶುಕ್ರವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಪೌರಿ ಜಿಲ್ಲೆಯ ಬಿರೋನ್‌ಖಾಲ್‌ನಲ್ಲಿ ಮದುವೆ ಕಾರ್ಯಕ್ರಮವಿತ್ತು. ಮದುವೆಗಾಗಿ ವರದ ಕಡೆಯವರು ಹರಿದ್ವಾರ ಜಿಲ್ಲೆಯ ಲಾಲ್ಧಾಂಗ್‌ನಿಂದ ಬಿರೋನ್‌ಖಾಲ್‌ಗೆ ಬಸ್ ತೆರಳುತ್ತಿತ್ತು. ಬಸ್‌ನಲ್ಲಿ 50-55 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ, 200 ಅಡಿ ಆಳದ ಕಂದಕಕ್ಕೆ ಬಸ್ ಉರುಳಿ ಬಿದ್ದಿದೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ದೌಡಾಯಿಸಿದ್ದು, ಬದುಕುಳಿದಿದ್ದ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹಗಳನ್ನು ಹೊರೆತೆಗೆಯುತ್ತಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.