”ಇಂದಿನ ಆಧುನಿಕ ತಂತ್ರಜ್ಞಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಮಾಲಿ ಕಾರ್ಮಿಕ ಬಡ ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜದ ಮುನ್ನೆಲೆಗೆ ಬರಬೇಕು. ಮಕ್ಕಳಿಗೆ ಮಾರ್ಗದರ್ಶನ ಮತ್ತು ಸಹಾಯವನ್ನು ಮಾಡುತ್ತಿರುವ ಬೆಂಗಳೂರಿನ ಪಿ. ಸಿಂಘ್ವಿ ಚಾರಿಟೇಬಲ್ ಟ್ರಸ್ಟ್ ಅವರ ಶಿಕ್ಷಾದೀಪ ವಿದ್ಯಾರ್ಥಿ ವೇತನ ಯೋಜನೆಯನ್ನು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಮುಖಾಂತರ ಜಾರಿ ಮಾಡಲಾಗುತ್ತಿದೆ” ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಪಿ. ಸಿಂಘ್ವಿ ಟ್ರಸ್ಟ್ ಶಿಕ್ಷಾದೀಪ ವಿದ್ಯಾರ್ಥಿವೇತನ ಫಲಾನುಭವಿ ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಪಿಯುಸಿ, ಪದವಿ, ಸ್ನಾತಕೋತ್ತರ, ಸಂಶೋಧನಾ ಮತ್ತು ತಾಂತ್ರಿಕ ಕೋರ್ಸಗಳನ್ನು ಓದುತ್ತಿರುವ ಹಮಾಲಿ ಕಾರ್ಮಿಕರಂತ ಬಡ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಅವರ ಶೇಕಡಾವಾರು ಫಲಿತಾಂಶದ ಆಧಾರದಲ್ಲಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಇದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರೆಸಲು ಹಾಗೂ ಅವರ ಶೈಕ್ಷಣಿಕ ಪ್ರಗತಿಗೆ ಅತ್ಯಂತ ಸಹಾಯಕಾರಿಯಾಗಿದೆ. ಫಲಾನುಭವಿ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಸವರಾಜ ಪೂಜಾರ ಹೇಳಿದರು.
ಶಿಕ್ಷಾದೀಪ ಯೋಜನೆಯ ರಾಜ್ಯ ಸಂಯೋಜಕ ಈರಪ್ಪ ನಾಯಕ ಮಾತನಾಡಿ, “ವಿದ್ಯಾರ್ಥಿಗಳು ಹಾಗೂ ಪಾಲಕರೊಂದಿಗೆ ಸಂವಹನ, ಶಿಕ್ಷಾದೀಪ ವಿದ್ಯಾರ್ಥಿ ವೇತನದ ಮಾಹಿತಿ, ಶಿಕ್ಷಣದ ಪ್ರಾಮುಖ್ಯತೆ, ವೃತ್ತಿ ಯೋಜನೆ ಮತ್ತು ಶಿಕ್ಷಣ ಪೂರೈಸಿದ ಮಕ್ಕಳಿಗೆ ಉದ್ಯೋಗದ ಮಾರ್ಗದರ್ಶನವನ್ನು ಶಿಕ್ಷಾದೀಪ ಹನ್ನೊಂದು ವರ್ಷಗಳಿಂದ ನಿರಂತರವಾಗಿ ಬಂದಿದೆ. ಪ್ರತಿ ವರ್ಷ ರಾಜ್ಯದಾದ್ಯಂತ 40 ರಿಂದ 50 ಲಕ್ಷ ರೂಪಾಯಿಗಳನ್ನು ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತ ಬಂದಿದ್ದೇವೆ. ಈ ವರ್ಷ ಹಾವೇರಿ ಜಿಲ್ಲೆಯ ಏಳು ಹಮಾಲಿ ಕಾರ್ಮಿಕರ ಮಕ್ಕಳಿಗೆ ಸೇರಿದಂತೆ ರಾಜ್ಯಾದ್ಯಂತ 484 ವಿದ್ಯಾರ್ಥಿಗಳಿಗೆ ಸುಮಾರು ನಲವತ್ತು ಲಕ್ಷಕ್ಕೂ ಹೆಚ್ಚಿನ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಮನರೇಗಾ ಕೂಲಿ ಕೆಲಸಕ್ಕಾಗಿ ಕಾರ್ಮಿಕರ ಆಗ್ರಹ
ಸಭೆಯಲ್ಲಿ ಫಲಾನುಭವಿ ವಿದ್ಯಾರ್ಥಿಗಳಾದ ವಿಶಾಲಾ ಮುಳಗುಂದ, ಸಾನಿಯಾ ಮೆಳ್ಳಾಗಟ್ಟಿ, ಪೋಷಕರಾದ ರಾಜೇಶ್ವರಿ ಪ. ಕಹಾರ, ಸಾಯಬ್ಬಿ ಎಸ್. ಮೆಳ್ಳಾಗಟ್ಟಿ ಹಾಗೂ ಚನ್ನವ್ವ ಬ. ಮುಳಗುಂದ ಉಪಸ್ಥಿತರಿದ್ದರು