“ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿರುವ ಇರಾನ್‌ನ ಪರಮಾಣು ಕೇಂದ್ರಕ್ಕೆ ಮೊದಲು ದಾಳಿ ನಡೆಸಬೇಕು” ಎಂದು ಇಸ್ರೇಲ್‌ಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರ ಕ್ರೌರ್ಯ ಮೆರೆಯುತ್ತಿದ್ದ ಇಸ್ರೇಲ್ ಮೇಲೆ ಮಂಗಳವಾರ ರಾತ್ರಿ ಇರಾನ್ ಕ್ಷಿಪಣಿ ದಾಳಿ ಮಾಡಿದೆ.
ಈ ಬಗ್ಗೆ ಉತ್ತರ ಕೆರೊಲಿನಾದಲ್ಲಿ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್ ಇರಾನ್‌ನ ಪರಮಾಣು ಕೇಂದ್ರಗಳನ್ನು ಇಸ್ರೇಲ್ ಗುರಿಯಾಗಿಸುವ ಸಾಧ್ಯತೆಯ ಬಗ್ಗೆ ಈ ವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಕೇಳಿದ ಪ್ರಶ್ನೆಯನ್ನು ಉಲ್ಲೇಖಿಸಿದ್ದಾರೆ.
ಬೈಡನ್ ಅವರಿಗೆ ನೀವು ಇರಾನ್ ಬಗ್ಗೆ ಏನು ಯೋಚಿಸುತ್ತೀರಿ? ಇರಾನ್ ಮೇಲೆ ದಾಳಿ ಪರಮಾಣು ದಾಳಿಯನ್ನು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದಾಗ ಅವರು “ಇಲ್ಲ ಎಂದಿದ್ದರು.
ಇದನ್ನು ಇದ್ದೀದಿರಾ? ಇಸ್ರೇಲಿ ನರಮೇಧಕ್ಕೆ ಪ್ರತೀಕಾರವಾಗಿ ಮಿಸೈಲ್ ದಾಳಿ ಮಾಡಿದ ಇರಾನ್
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಟ್ರಂಪ್, “ಅವರು (ಬೈಡನ್) ಅದನ್ನು ತಪ್ಪಾಗಿ ಗ್ರಹಿಸಿದ್ದಾರೆಂದು ನಾನು ಭಾವಿಸುತ್ತೇನೆ. ನಿಜವಾಗಿ ಪರಮಾಣು ಕೇಂದ್ರದ ಮೇಲೆಯೇ ದಾಳಿ ನಡೆಸಬೇಕಾಲ್ಲವೇ? ಯಾಕೆಂದರೆ ಪರಮಾಣು ಶಸ್ತ್ರಾಸ್ತ್ರಗಳು ನಮಗಿರುವ ದೊಡ್ಡ ಅಪಾಯ ಅಲ್ಲವೇ” ಎಂದು ಪ್ರಶ್ನಿಸಿದ್ದಾರೆ.
“ಬೈಡನ್ ಅವರಿಗೆ ಆ ಪ್ರಶ್ನೆಯನ್ನು ಕೇಳಿದಾಗ, ಉತ್ತರ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಬೇಕು ಮತ್ತು ಉಳಿದವುಗಳ ಬಗ್ಗೆ ಬಳಿಕ ಚಿಂತಿಸಬೇಕು ಎಂಬುದು ಅವರ ಉತ್ತರ ಆಗಿರಬೇಕಿತ್ತು” ಎಂದು ಟ್ರಂಪ್ ಅಭಿಪ್ರಾಯಿಸಿದ್ದಾರೆ.
ಲೆಬನಾನ್‌ನಲ್ಲಿ ಹೆಜ್ಬೊಲ್ಲ ನಾಯಕ ಸೆಯ್ಯದ್ ಹಸನ್ ನಸ್ರಲ್ಲಾಹ್ ಮತ್ತು ಇರಾನಿ ಮಿಲಿಟರಿ ಅಧಿಕಾರಿಗಳನ್ನು ಇಸ್ರೇಲ್ ಹತ್ಯೆಗೈದ ಬಳಿಕ, ಪ್ರತಿಕಾರವಾಗಿ ಇರಾನ್, ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಇಸ್ರೇಲ್ ಕಡೆಗೆ ಸುಮಾರು 200 ಇರಾನ್ ಕ್ಷಿಪಣಿಗಳನ್ನು ಹಾರಿಸಿದೆ. ಈ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸುವುದಕ್ಕೆ ಬುಧವಾರ ಬೈಡನ್ ವಿರೋಧ ವ್ಯಕ್ತಪಡಿಸಿದ್ದರು.
