ರಾಯಚೂರು ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿಯವರಿಗೆ ಮುತ್ತಿಗೆ ಹಾಕಲು, ಒಳಮೀಸಲಾತಿ ಜಾರಿಗೆ ಹೋರಾಟ ಮಾಡುವುದಾಗಿ ಹೇಳಿದ್ದರಿಂದ ಹಿರಿಯ ಹೋರಾಟಗಾರ ಎಸ್.ಮಾರೆಪ್ಪನವರನ್ನು ಪೊಲೀಸರು ಗೃಹ ಬಂಧನದಲ್ಲಿರಿಸಿದ್ದರು. ಇದು ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರೆ ಅಪರಾಧವೇ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ ಪ್ರಶ್ನಿಸಿದ್ದಾರೆ.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಸಾಥ್ ಮೈಲ್ ಕ್ರಾಸ್ ಬಳಿ ಮನವಿ ನೀಡಲಾಗಿದೆ. ಆದರೆ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಹೇಳಿರುವುದು ಖಂಡನಾರ್ಹ. ಈಗಾಗಲೇ ಸಚಿವ ಸಂಪುಟದಲ್ಲಿ ಚರ್ಚಿಸಿಯೇ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗಿತ್ತು ಹಾಗೂ ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೆ ಎಂದು ಬಿಡುಗಡೆ ಮಾಡಿದ್ದರು. ಮತ್ತೆ ಸಂಪುಟದಲ್ಲಿ ಚರ್ಚಿಸಬೇಕು. ಆದರೆ ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಿತಿ ರಚಿಸಿ ಜಾರಿಯಾಗದಂತೆ ನಿರ್ಬಂಧಿಸಿದ್ದಾರೆಯೇ ಎಂಬುದನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಒಳಮೀಸಲಾತಿ ಕುರಿತಂತೆ ರಾಜ್ಯದ ಮುಖ್ಯಮಂತ್ರಿಗಳು ಸಮುದಾಯದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಕೂಡಲೇ ಜಾರಿಗೆ ಅಡ್ಡಿಯಾಗಿರುವ ಕಾರಣ ಬಹಿರಂಗಪಡಿಸಬೇಕು. ಇಲ್ಲ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.
ಚುನಾವಣೆಗೆ ಮುನ್ನ ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೊಳಿಸುವುದು ನಾವೇ ಎಂದು ಹೇಳಿದ್ದರು. ಜನರು ಅಧಿಕಾರ ನೀಡಿ ಸುಪ್ರಿಂಕೋರ್ಟ ಆದೇಶ ನೀಡಿದ್ದರೂ ಜಾರಿಗೆ ಮುಂದಾಗುತ್ತಿಲ್ಲ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.ಮುಂದೆ ನಡೆಯಲಿರುವ ಉಪ ಚುನಾವಣೆ ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ಸೇರಿ ಸಮುದಾಯ ಜನರು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೋರಾಟ ಸಮಿತಿ ರಾಜ್ಯ ಗೌರವಾಧ್ಯಕ್ಷ ಎಸ್.ಮಾರೆಪ್ಪ ಮಾತನಾಡಿ, ಒಳಮೀಸಲು ಕುರಿತಂತೆ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ನಾಯಕರು ಮಾತನಾಡಬೇಕು. ಸುಪ್ರೀಂ ಕೋರ್ಟ್ ತೀಪು ನೀಡಿ ರಾಜ್ಯಗಳಿಗೆ ಅಧಿಕಾರ ನೀಡಿದೆ. ರಾಜ್ಯದಲ್ಲಿ ಶೋಷಿತ ಸಮೂದಾಯಗಳ ದತ್ತಾಂಶ ರಾಜ್ಯದ ಸರ್ಕಾರದ ಬಳಿಯಿದೆ. ಆದರೂ ಕಾಂಗ್ರೆಸ್ ಕರ್ನಾಟಕ ಮತ್ತು ತೆಲಂಗಾಣ ರಾಜ್ಯದಲ್ಲಿ ಜಾರಿಗೆ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಸಮಿತಿಗಾಗಿ ಕಾದು ಕುಳಿತಿದೆ. ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಹೇಳುವ ಬದಲು ಪಕ್ಷದ ವರಿಷ್ಠರ ಸೂಚನೆ ಬಹಿರಂಗಪಡಿಸಬೇಕು ಎಂದರು.
ದೇಶದ 20 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಅಲ್ಲಿ ಜಾರಿ ಕುರಿತು ಬಿಜೆಪಿ ನಾಯಕರು ಮಾತನಾಡಬೇಕು. ಎರಡು ರಾಷ್ಟ್ರೀಯ ಪಕ್ಷಗಳಿಗೆ ಬುದ್ದಿ ಕಲಿಸಲು ಮಾದಿಗ ಸಮಾಜದ ಸ್ವತಂತ್ರ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಕಣಕ್ಕಿಸಲು ಮುಂದಾಗಬೇಕಾಗುತ್ತದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಕೊಪ್ಪಳ | ಶಿಷ್ಟಾಚಾರ ಉಲ್ಲಂಘನೆ: ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಮಕ್ಕೆ ಶೈಲಜಾ ಹಿರೇಮಠ್ ಒತ್ತಾಯ
ಪೊಲೀಸರು ಹೋರಾಟಕ್ಕೆ ಮುನ್ನವೇ ಗೃಹ ಬಂಧನದಲ್ಲಿರಿಸಿರುವುದು ಪ್ರಜಾಪ್ರಭುತ್ವ, ಹೋರಾಟ ವಿರೋಧಿ ನಡೆಯಾಗಿದೆ. ಜಿಲ್ಲೆ ಎಲ್ಲ ಸಂಘಟನೆಗಳು ಹೋರಾಟಗಾರರನ್ನು ಬಂಧಿಸುವ ಪೊಲೀಸ್ ನಡೆಯನ್ನು ಖಂಡಿಸಬೇಕಿದೆ. ಇಲ್ಲದೇ ಹೋದಲ್ಲಿ ಇಂದು ನನಗಾದ ಅನುಭವ ನಾಳೆ ನಿಮಗೂ ಆಗುವ ದಿನಗಳು ಬರುತ್ತವೆ. ಪೊಲೀಸರು ಸರ್ಕಾರ ಮತ್ತು ಹೋರಾಟಗಳ ಮಧ್ಯೆ ಕೊಂಡಿಯಂತೆ ಕಾರ್ಯನಿರ್ವಹಿಸಬೇಕೇ ಹೊರತು ಹೋರಾಟ ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ಸಮಿತಿ ಹೇಮರಾಜ ಅಸ್ಕಿಹಾಳ, ಶ್ರೀನಿವಾಸ ಕಲವಲದೊಡ್ಡಿ , ಶ್ರೀನಿವಾಸ ಕೊಪ್ಪರ ಉಪಸ್ಥಿತರಿದ್ದರು.
