ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಹಾರಾಷ್ಟ್ರ- ಕರ್ನಾಟಕ ಗಡಿ ಅಂಚಿನಲ್ಲಿರುವ ಉಜಳಂಬ ಗ್ರಾಮದ ವ್ಯಾಪ್ತಿಯ ಹೊಲವೊಂದರಲ್ಲಿ ಅಕ್ರಮವಾಗಿ ಬೆಳೆದ 2 ಕ್ವಿಂಟಾಲ್ ಗಾಂಜಾ ಗಿಡಗಳನ್ನು ಭಾನುವಾರ ಪೊಲೀಸರು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ.
ಜಮೀನಿನಲ್ಲಿ 6 ಅಡಿಯ ಸುಮಾರು 700 ಗಿಡಗಳನ್ನು ಬೆಳೆದಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ರೈತ ಬಸವಂತ ಮಹಾರಾಷ್ಟ್ರ ಮೂಲದವರಾದರೂ ಕರ್ನಾಟಕಕ್ಕೆ ಸೇರಿದ ಸರ್ವೇ ನಂಬರ್ ಜಮೀನಿನಲ್ಲಿ ಗಾಂಜಾ ಬೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಬಸವಕಲ್ಯಾಣ ತಾಲೂಕಿನ ಮಂಠಾಳ ಠಾಣಾ ವ್ವಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಭೇಟಿ ನೀಡಿ ಗಾಂಜಾ ಗಿಡಗಳನ್ನು ಸ್ವತಃ ಕಿತ್ತು ಹಾಕಿದ್ದಾರೆ.
“ಇನ್ನೂ ಹೊಲದಲ್ಲಿ ಗಾಂಜಾ ಗಿಡಗಳಿವೆ. ಅವುಗಳನ್ನೂ ನಾಶಪಡಿಸಿದ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು” ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಅಂಗನವಾಡಿಯಲ್ಲಿ ಅವ್ಯವಸ್ಥೆ : ಇಲಾಖೆ ಉಪನಿರ್ದೇಶಕ ಅಮಾನತು
ಈ ಸಂದರ್ಭದಲ್ಲಿ ಹುಮನಾಬಾದ್ ಡಿವೈಎಸ್‌ಪಿ ಜೆ.ಎಸ್.ನ್ಯಾಮಗೌಡರ್, ಸಿಪಿಐ ಕೃಷ್ಣಕುಮಾರ ಪಾಟೀಲ, ಸಬ್ ಇನ್‍ಸ್ಪೆಕ್ಟರ್ ರೇಣುಕಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.