ಇಸ್ರೇಲ್-ಪಾಲೆಸ್ತೀನ್ ಸಂಘರ್ಷದ ವಿಚಾರದಲ್ಲಿ ಪ್ಯಾಲೆಸ್ತೀನ್‌ಗೆ ಭಾರತ ಬೆಂಬಲ ನೀಡಿದೆ. ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧೀಜಿಯಂತಹ ಧೀಮಂತ ನಾಯಕರು ಭಾರತದ ಸ್ವಾತಂತ್ರ್ಯದ ಹೋರಾಟದ ಸಮಯದಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದಾರೆ. ಇಸ್ರೇಲ್ ವಿರುದ್ಧ ಸೆಟೆದುನಿಂತ ಸಂಘಟನೆಗಳು ಮತ್ತು ಗುಂಪುಗಳನ್ನು ಭಯೋತ್ಪಾದಕರು, ಉಗ್ರರು ಎಂದು ಬಿಂಬಿಸಲಾಗುತ್ತಿದೆ. ಬಲಪಂಥೀಯ ಮನಸ್ಥಿತಿಯ ಮಾಧ್ಯಮಗಳು ಹಿಜ್ಬುಲ್ಲಾ-ಹಮಾಸ್ ಸಂಘಟನೆಗಳನ್ನು ಭಯೋತ್ಪಾದಕರು-ಉಗ್ರರು ಎಂಬ ಹಣೆಪಟ್ಟಿ ಕಟ್ಟಿ ವ್ಯವಸ್ಥಿತವಾಗಿ ಪ್ರಪಂಚಕ್ಕೆ ಹಂಚುತ್ತಿವೆ.
ಇಸ್ರೇಲ್ – ಪ್ಯಾಲೆಸ್ತೀನ್ ಯುದ್ಧ ಆರಂಭವಾಗಿ ಇಂದಿಗೆ ಒಂದು ವರ್ಷವಾಗಿದೆ. ಕಳೆದ ವರ್ಷ ಇದೇ ದಿನ (ಅಕ್ಟೋಬರ್ 7) ಪ್ಯಾಲೆಸ್ತೀನ್‌ನ ರಾಷ್ಟ್ರೀಯತಾವಾದಿ ಸುನ್ನಿ ಇಸ್ಲಾಮಿಸ್ಟ್ ರಾಜಕೀಯ ಗುಂಪು ಹಮಾಸ್‌ನ ಮಿಲಿಟರಿ ವಿಭಾಗ ಇಸ್ರೇಲ್ ಮೇಲೆ ದಾಳಿ ನಡೆಸಿತು. ಈ ದಾಳಿಯಿಂದಾಗಿ 1,200 ಇಸ್ರೇಲಿಗಳು ಸಾವನ್ನಪ್ಪಿದ್ದು ಅಂದಿನಿಂದ ಇಸ್ರೇಲ್-ಹಮಾಸ್ ಯುದ್ಧ ಆರಂಭವಾಯಿತು.
ಇಸ್ರೇಲ್‌ನ ವಿಸ್ತರಣಾವಾದಿ ನಿಲುವಿನ ಪ್ರತಿರೋಧವಾಗಿ ಹುಟ್ಟಿಕೊಂಡ ಸಂಘಟನೆಯೇ ಹಮಾಸ್. ವೆಸ್ಟ್ ಬ್ಯಾಂಕ್, ಪೂರ್ವ ಜೆರುಸಲೆಮ್, ಗಾಜಾವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಇಸ್ರೇಲ್, ಈ ಪ್ರದೇಶಗಳಲ್ಲಿ ಕ್ರೂರವಾದ ಆಡಳಿತವನ್ನು ನಡೆಸುತ್ತಿದೆ. ಇದರ ಪ್ರತಿರೋಧವಾಗಿಯೇ ಸ್ಥಳೀಯವಾಗಿ ಸಂಘಟನೆಗಳು ಹುಟ್ಟಿಕೊಂಡು ಇಸ್ರೇಲ್ ವಿರುದ್ಧ ಯುದ್ಧವನ್ನು ಆರಂಭಿಸಿವೆ.
ಓರ್ವ ವ್ಯಕ್ತಿಗೆ ಯಾವುದೇ ಸ್ವಾತಂತ್ರ್ಯ ನೀಡದೆ ಒಂದು ಕೋಣೆಯಲ್ಲಿ ಕೂಡಿಟ್ಟು ಚಿತ್ರಹಿಂಸೆ ನೀಡಿದರೆ ಆತ ಒಂದಲ್ಲ ಒಂದು ದಿನ ಸಹನೆ, ತಾಳ್ಮೆಯನ್ನು ಕಳೆದುಕೊಳ್ಳುತ್ತಾನೆ, ಪ್ರತಿರೋಧ ವ್ಯಕ್ತಪಡಿಸುತ್ತಾನೆ. ಅದೇ ರೀತಿ ತಮ್ಮದೇ ನೆಲದಲ್ಲಿ ಬೇರೊಂದು ದೇಶದ ವಶದಲ್ಲಿ ಗುಲಾಮರಂತೆ ಬದುಕಿದ ಜನರ ಪ್ರತಿರೋಧವೇ ಹಿಜ್ಬುಲ್ಲಾ, ಹಮಾಸ್ ಮೊದಲಾದ ಮಿಲಿಟರಿ ಗುಂಪುಗಳು, ರಾಜಕೀಯ ಗುಂಪುಗಳ ಉಗಮಕ್ಕೆ ಕಾರಣ. ಇದೀಗ ಈ ಮಿಲಿಟರಿ ಗುಂಪುಗಳು ಇರಾನ್ ಬೆಂಬಲದೊಂದಿಗೆ ಇಸ್ರೇಲ್ ವಿರುದ್ಧ ಯುದ್ಧ ನಡೆಸುತ್ತಿವೆ.
ಹಿಜ್ಬುಲ್ಲಾ ಒಂದು ಉಗ್ರಗಾಮಿ ಸಂಘಟನೆಯಲ್ಲ, ರಾಜಕೀಯ ಪಕ್ಷ ಎಂಬ ಮಾತ್ರಕ್ಕೆ ಅದರ ದಾರಿ ಸರಿಯಾಗಿದೆಯೇ? ಖಂಡಿತವಾಗಿ ಇಲ್ಲ. ಹಿಜ್ಬುಲ್ಲಾ ಒಂದು ಪ್ರತಿಭಟನೆಯಾಗಿ ಹುಟ್ಟಿಕೊಂಡ ರಾಜಕೀಯ ಗುಂಪಾದರೂ ಕೂಡಾ ಅದರ ಹಿಂಸಾತ್ಮಕ ದಾರಿಯನ್ನು ಒಪ್ಪಲಾಗದು. ಜೊತೆಗೆ ಯುದ್ಧದಿಂದಾಗಿ ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು, ಹಿಂಜರಿತ ಉಂಟಾಗುತ್ತದೆ. ಸಾವು-ನೋವು, ಪರಿಸರಕ್ಕೆ ಹಾನಿ ಹೀಗೆ ನಷ್ಟಗಳ ಪಟ್ಟಿ ಕೊನೆಯಾಗದು.
ಇದನ್ನು ಓದಿದ್ದೀರಾ? ಗಾಜಾದ ಮಸೀದಿ ಮೇಲೆ ಇಸ್ರೇಲ್ ದಾಳಿ; 21 ಮಂದಿ ಸಾವು
ಕಳೆದ ಒಂದು ವರ್ಷದ ಅವಧಿಯಲ್ಲಿ ಇಸ್ರೇಲ್ ನಡೆಸಿದ ನರಮೇಧದಲ್ಲಿ ಸುಮಾರು 40 ಕಿ.ಮೀ. ವಿಸ್ತಾರ ಹೊಂದಿರುವ ಗಾಜಾ ಒಂದರಲ್ಲೇ 42 ಸಾವಿರ ಮಂದಿ ಬಲಿಯಾಗಿದ್ದಾರೆ. ಈ ಪೈಕಿ 18 ಸಾವಿರ ಮಕ್ಕಳು- ಹಸುಗೂಸುಗಳಾಗಿದ್ದಾರೆ. ಆದರೆ ಇಸ್ರೇಲ್ ವಿರುದ್ಧ ಸೆಟೆದುನಿಂತ, ಪ್ರತಿರೋಧ ತೋರಿದ ಸಂಘಟನೆಗಳು ಮತ್ತು ಗುಂಪುಗಳನ್ನು ಭಯೋತ್ಪಾದಕರು, ಉಗ್ರರು ಎಂದು ಬಿಂಬಿಸಲಾಗುತ್ತಿದೆ. ಇದರ ಹಿಂದಿರುವುದು ಅಲ್ಲಿನ ಬಲಪಂಥೀಯ ರಾಜಕೀಯ ಪಕ್ಷಗಳು. ಹಾಗಾಗಿ ಬಲಪಂಥೀಯ ಮನಸ್ಥಿತಿಯ ಮಾಧ್ಯಮಗಳು ಹಿಜ್ಬುಲ್ಲಾ-ಹಮಾಸ್ ಸಂಘಟನೆಗಳನ್ನು ಭಯೋತ್ಪಾದಕರು-ಉಗ್ರರು ಎಂಬ ಹಣೆಪಟ್ಟಿ ಕಟ್ಟಿ ವ್ಯವಸ್ಥಿತವಾಗಿ ಪ್ರಪಂಚಕ್ಕೆ ಹಂಚುತ್ತಿವೆ.
ಕ್ರಾಂತಿಕಾರಿ ಚಳವಳಿ
ಇರಾನ್ ಮತ್ತು ಲೆಬನಾನ್‌ನಲ್ಲಿ ಧಾರ್ಮಿಕ ಮೂಲಭೂತವಾದಿ ಚಳವಳಿಗಳನ್ನೇ ಕ್ರಾಂತಿಕಾರಿ ಚಳವಳಿಗಳೆಂದು ಕರೆಯಲಾಗುತ್ತದೆ. ಎರಡನೇ ವಿಶ್ವ ಯುದ್ಧದ ನಂತರ ಮಧ್ಯಪ್ರಾಚ್ಯದಾದ್ಯಂತ ಸಾಮೂಹಿಕವಾಗಿ ಸಂಘಟಿಸುವುದರಲ್ಲಿ ಕಮ್ಯುನಿಸ್ಟ್ ಪಕ್ಷಗಳು ನಿರ್ಣಾಯಕ ಪಾತ್ರವನ್ನು ವಹಿಸಿದವು. ಆದರೆ ಸೋವಿಯತ್ ಒಕ್ಕೂಟದ ಅಧಿಕೃತ ನಿಲುವುಗಳು ಕಮ್ಯುನಿಸ್ಟ್ ಪಕ್ಷಗಳಿಗೆ ಅಡ್ಡಿಯಾದವು.
ಶೀತಲ ಸಮರದ ಸಂದರ್ಭದಲ್ಲಿ ಅಲಿಪ್ತ ಚಳವಳಿ, ಇರಾಕ್‌ನಲ್ಲಿ ಬಾಥಿಸಂ, ಈಜಿಪ್ಟ್‌ನಲ್ಲಿ ನಾಸೆರಿಸಂನಂತಹ ಜನಪ್ರಿಯ ಚಳವಳಿಗಳು ಹುಟ್ಟಿದಂತೆ ನಿಲುವುಗಳು ಬದಲಾಗುತ್ತಾ ಸಾಗಿತು. 1960ರ ದಶಕದ ಅಂತ್ಯದಲ್ಲಿ ಕಮ್ಯುನಿಸ್ಟ್ ಪಕ್ಷದ ಕೆಲವೊಂದು ನಿಲುವುಗಳನ್ನು ನೋಡಿದಾಗ ಸ್ಥಳೀಯ ಚಳವಳಿಗಳಿಗಿಂತ ಹೆಚ್ಚಾಗಿ ಎಡ ಪಕ್ಷಗಳು ಸೋವಿಯತ್ ಒಕ್ಕೂಟದ ನಿರ್ಧಾರದೆಡೆ ಒಲವು ತೋರುವಂತೆ ಭಾಸವಾಗಿದೆ. ಇದರ ಪರಿಣಾಮವಾಗಿ ಎಡ ಚಳವಳಿಗಳು ಧಾರ್ಮಿಕ ಆಧಾರಿತ ಚಳವಳಿಗಳಿಂದ ದೂರ ಉಳಿದವು.
ಇದನ್ನು ಓದಿದ್ದೀರಾ? ಇಸ್ರೇಲ್ ವಿರೋಧಿ ಪ್ರತಿಭಟನೆ: ಶ್ವೇತ ಭವನದ ಬಳಿ ಬೆಂಕಿ ಹಚ್ಚಿಕೊಂಡ ಪತ್ರಕರ್ತ
1970ರ ದಶಕದಲ್ಲಿ ಜಾತ್ಯತೀತ ರಾಷ್ಟ್ರೀಯತೆಯ ಅಧಃಪತನ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ಇರಾನ್ ಮತ್ತು ಲೆಬನಾನ್‌ನಲ್ಲಿ ರಾಜಕೀಯ ಇಸ್ಲಾಂ ಹುಟ್ಟಿಕೊಂಡಿತು. ಜನರಿಗೆ ಸಾಮಾಜಿಕ ಕ್ರಾಂತಿಗೆ ಇದುವೇ ಆಯ್ಕೆ ಎಂಬಂತೆ ಕಂಡಿತು.
ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆಯೇ? ಹೀಗೆ ಬಿಂಬಿಸುತ್ತಿರುವುದೇಕೆ?
ಹಿಜ್ಬುಲ್ಲಾ ಎಂಬುದು ಶಿಯಾ ಮುಸ್ಲಿಂ ರಾಜಕೀಯ ಸಂಘಟನೆಯಾಗಿದ್ದು, ಇದು ಮಿಲಿಟರಿ ಪಡೆಯನ್ನು ಕೂಡಾ ಹೊಂದಿದೆ. ಇದು ಭಯೋತ್ಪಾದಕ ಸಂಘಟನೆಯಲ್ಲ. ಆದರೆ ಉಗ್ರ ಸಂಘಟನೆಯೆಂದು ಇಸ್ರೇಲ್ ಬಿಂಬಿಸುತ್ತಿದೆ. ತಮ್ಮ ವಿಸ್ತರಣಾವಾದಿ ನೀತಿಗೆ ಪರೋಕ್ಷವಾಗಿ ಇತರೆ ದೇಶಗಳಿಂದ ಬೆಂಬಲ ಪಡೆಯಲು ಇಸ್ರೇಲ್ ನಡೆಸುತ್ತಿರುವ ಯೋಜಿತ ಪಿತೂರಿ ಇದಾಗಿದೆ.
ಅರೇಬಿಕ್ ಭಾಷೆಯಲ್ಲಿ ಹಿಜ್ಬುಲ್ಲಾ ಎಂದರೆ ‘ದೇವರ ಪಕ್ಷ’ ಎಂದಾಗಿದೆ. ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್‌ನ ಆಕ್ರಮಣಕ್ಕೆ ಪ್ರತಿರೋಧವಾಗಿ 1982ರಲ್ಲಿ ಹಿಜ್ಬುಲ್ಲಾ ಸ್ಥಾಪನೆಯಾಗಿದೆ. ಇಸ್ರೇಲ್‌ನ ಪ್ರಮುಖ, ಪ್ರಬಲ ವಿರೋಧಿ ಹಿಜ್ಬುಲ್ಲಾ ಆಗಿದ್ದು, ಈ ರಾಜಕೀಯ ವಿಭಾಗ ಲೆಬನಾನ್‌ನ ಒಳಗೆ ಮತ್ತು ಹೊರಗೆ ತನ್ನ ಮಿಲಿಟರಿ ನಿಯಂತ್ರಣವನ್ನು ಹೊಂದಿದೆ.
1992ರಿಂದ ಹಸನ್ ನಸ್ರಲ್ಲಾ ಹಿಜ್ಬುಲ್ಲಾವನ್ನು ಮುನ್ನಡೆಸುತ್ತಾ ಬಂದಿದ್ದು, ಇತ್ತೀಚೆಗೆ ಇಸ್ರೇಲ್ ನಸ್ರಲ್ಲಾರನ್ನು ಹತ್ಯೆ ಮಾಡಿದೆ. ನಸ್ರಲ್ಲಾ ನಾಯಕತ್ವದಲ್ಲಿ ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಹಿಜ್ಬುಲ್ಲಾ ಇಸ್ರೇಲ್‌ಗೆ ದುಃಸ್ವಪ್ನವಾಗಿರುವ ರಾಜಕೀಯ ಶಕ್ತಿಯಾಗಿ ಬೆಳೆದು ನಿಂತಿದೆ.

1985ರ ತನ್ನ ಪ್ರಣಾಳಿಕೆಯಲ್ಲಿ ಹಿಜ್ಬುಲ್ಲಾ ತನ್ನ ಸಿದ್ಧಾಂತವನ್ನು ವಿವರಿಸಿದೆ. ಮಧ್ಯಪ್ರಾಚ್ಯದಿಂದ ಪಾಶ್ಚಿಮಾತ್ಯ ಪ್ರಭಾವದ ವಿರುದ್ಧವಾಗಿ ಮತ್ತು ಇಸ್ರೇಲ್‌ನ ನಾಶಕ್ಕೆ ಕರೆ ನೀಡುತ್ತದೆ. ಈ ನಿಟ್ಟಿನಲ್ಲಿ ಹಿಜ್ಬುಲ್ಲಾ ಇರಾನ್‌ನ ನಾಯಕತ್ವದೊಂದಿಗೆ ಮೈತ್ರಿ ಮಾಡಿಕೊಂಡು ಇಸ್ರೇಲ್ ವಿರುದ್ಧ ದಾಳಿಯನ್ನು ನಡೆಸುತ್ತಿದೆ.
ಇದನ್ನು ಓದಿದ್ದೀರಾ? ಲೆಬನಾನ್ ಮೇಲೆ ಮುಂದುವರೆದ ಇಸ್ರೇಲ್ ಕ್ರೌರ್ಯ; 37 ಮಂದಿ ಸಾವು
ಹಿಜ್ಬುಲ್ಲಾ ಯೆಮೆನ್‌ನಲ್ಲಿನ ಹೌತಿಗಳಂತಹ ಇತರ ಸಂಘಟನೆಗಳೊಂದಿಗೂ ಸಂಪರ್ಕ ಹೊಂದಿದೆ. ಹಾಗೆಯೇ ಇರಾನ್‌ನ ಇಸ್ಲಾಮಿಕ್ ಆಡಳಿತ ಮಾದರಿಯಿಂದ ಪ್ರಭಾವಿತವಾಗಿದೆ. ಏನೇ ಆದರೂ ಯಹೂದಿಗಳು, ಕ್ರೈಸ್ತರು, ಮುಸ್ಲಿಮರು ಜೊತೆಯಾಗಿ ಜೀವಿಸಬೇಕು ಎಂಬುದು ಹಿಜ್ಬುಲ್ಲಾ ಅಭಿಪ್ರಾಯವಾಗಿದೆ.
ಇಸ್ರೇಲ್‌ನತ್ತ ವಾಲಿದ ಮೋದಿ ಸರ್ಕಾರ
ಭಾರತದ ಇತಿಹಾಸವನ್ನು ನಾವು ನೋಡಿದಾಗ ಇಸ್ರೇಲ್ ಪಾಲೆಸ್ತೀನ್ ಸಂಘರ್ಷದ ವಿಚಾರದಲ್ಲಿ ಪ್ಯಾಲೆಸ್ತೀನ್‌ಗೆ ಭಾರತ ಬೆಂಬಲ ನೀಡಿದೆ. ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಹೋರಾಟದ ಭಾಗವಾಗಿ ಭಾರತ ಪ್ಯಾಲೆಸ್ತೀನ್ ಅನ್ನು ಬೆಂಬಲಿಸಿದೆ. ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯಂತಹ ಧೀಮಂತ ನಾಯಕರು ಭಾರತದ ಸ್ವಾತಂತ್ರ್ಯದ ಹೋರಾಟದ ಸಮಯದಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲ ಸೂಚಿಸಿದ್ದಾರೆ.
“ಇಂಗ್ಲೆಂಡ್ ಇಂಗ್ಲಿಷರಿಗೆ, ಫ್ರಾನ್ಸ್ ಫ್ರೆಂಚರಿಗೆ ಸೇರಿದ್ದಾದರೆ, ಪ್ಯಾಲೆಸ್ತೀನ್ ಅರಬ್ಬರಿಗೆ ಸೇರಿದ್ದು” ಎಂದು ಗಾಂಧೀಜಿ ಹೇಳಿದ್ದರು. “ಪ್ಯಾಲೆಸ್ತೀನ್ ಮೂಲಭೂತವಾಗಿ ಅರಬ್ ದೇಶವಾಗಿದೆ. ಅದು ಹಾಗೆಯೇ ಉಳಿಯಬೇಕು” ಎಂದು ನೆಹರೂ ಹೇಳಿದ್ದರು.
ಇದನ್ನು ಓದಿದ್ದೀರಾ? ಇಸ್ರೇಲ್ – ಇರಾನ್ ಯುದ್ಧ ಛಾಯೆ ಬಾಪುವಿನ ನಾಡಿನಿಂದ ಕಾಣುವುದು ಹೀಗೆ…
1950ರಲ್ಲಿ ಇಸ್ರೇಲ್‌ನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೂ ಶೀತಲ ಸಮರದ ಸಮಯದಲ್ಲಿ ಭಾರತವು ತನ್ನ ಅರಬ್ ಮಿತ್ರರಾಷ್ಟ್ರಗಳ ಕಡೆಗೆ ವಾಲಿತು. 1956ರಲ್ಲಿ ಸೂಯೆಜ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಈಜಿಪ್ಟ್‌ಗೆ ಬೆಂಬಲ ನೀಡಿದೆ. 1974ರಲ್ಲಿ ಪ್ಯಾಲೆಸ್ತೇನಿಯನ್ ಲಿಬರೇಶನ್ ಆರ್ಗನೈಸೇಶನ್‌ಗೆ (ಪಿಎಲ್‌ಒ) ಬೆಂಬಲಿಸಿದೆ. ಪಿಎಲ್‌ಒಗೆ 1975ರಲ್ಲಿ ನವದೆಹಲಿಯಲ್ಲಿ ಕಚೇರಿಯನ್ನು ತೆರೆಯಲು ಸಹ ಅನುಮತಿಸಲಾಗಿದೆ.
ಆದರೆ 1991ರಿಂದ ಭಾರತದ ವಿದೇಶಾಂಗ ನೀತಿಯು ಬದಲಾಗುತ್ತಾ ಸಾಗಿದೆ. 2014ರಲ್ಲಿ ಮೋದಿ ಮತ್ತು ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇಸ್ರೇಲ್ ಮತ್ತು ಭಾರತದ ಸಂಬಂಧ ಗಟ್ಟಿಗೊಳ್ಳುತ್ತಿದೆ.
2023ರ ಅಕ್ಟೋಬರ್ 7ರಂದು ಯುದ್ಧ ಪ್ರಾರಂಭವಾದ ಮರುದಿನವೇ ಭಾರತದಲ್ಲಿ ಬಿಜೆಪಿ ಮತ್ತು ವಿರೋಧ ಪಕ್ಷಗಳು ತಮ್ಮ ನಿಲುವನ್ನು ತಿಳಿಸಿದೆ. ಬಿಜೆಪಿ ಇಸ್ರೇಲ್ ಪರವಾಗಿ ನಿಂತರೆ, ಕಾಂಗ್ರೆಸ್ ಮತ್ತು ವಿಪಕ್ಷಗಳು ಶಾಂತಿಗೆ ಕರೆ ನೀಡಿದೆ. ಆದರೆ ಒಂದು ಪಕ್ಷದ (ಬಿಜೆಪಿ) ನಿಲುವನ್ನು ಇಡೀ ದೇಶದ ನಿಲುವಿನಂತೆ ಬಿಂಬಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತದೆ?

ಹೆಜ್ಬುಲ್ಲಾ ಮತ್ತು ಭಾರತದ ಸ್ಥಳೀಯರ ದೃಷ್ಟಿಕೋನ
ಸ್ಥಳೀಯವಾಗಿ ಭಾರತೀಯರ ದೃಷ್ಟಿಕೋನವೂ ಬದಲಾಗುವ ಅಗತ್ಯವಿದೆ. ಬಲಪಂಥೀಯರ ‘ಬ್ರೈನ್ ವಾಶ್’ಗೆ ಒಳಗಾದ ಅದೆಷ್ಟೊ ಜನರು ಟೋಪಿ ಹಾಕಿದ ಗಡ್ಡದಾರಿಗಳೆಂದರೆ ಉಗ್ರರೆಂಬಂತೆ ನೋಡುತ್ತಾರೆ. ಅದೇ ದೃಷ್ಟಿಕೋನದಲ್ಲಿ ಹಿಜ್ಬುಲ್ಲಾ ಸಂಘಟನೆಯನ್ನು ನೋಡಲಾಗುತ್ತಿದೆ. ಹಿಜ್ಬುಲ್ಲಾ ಎಂಬುದು ಪ್ರತಿರೋಧದ ಸಂಘಟನೆಯೇ ಹೊರತು ಉಗ್ರ ಸಂಘಟನೆಯಲ್ಲ. ಆದರೆ ನೈಜ ಸಂಗತಿಗಳ ಪ್ರಚಾರಕ್ಕೆ ಬಲಪಂಥೀಯರು ಕಡಿವಾಣ ಹಾಕಿ, ಸುಳ್ಳು ಸುದ್ದಿಗಳನ್ನು ಹರಡುತ್ತಿರುವುದೇ ಇಷ್ಟಕ್ಕೆಲ್ಲ ಕಾರಣ.
ಯುದ್ಧಕ್ಕೆ ಅಂತ್ಯ ಅನಿವಾರ್ಯ
ಸಮಾಜದ ಅಧಃಪತನಕ್ಕೆ ಬುನಾದಿಯೇ ಯುದ್ಧ. ವಿಶ್ವದ ಯಾವುದೇ ದೇಶದಲ್ಲಿ ಯುದ್ಧ ನಡೆದರೂ ಕೂಡಾ ಅದು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಇತರೆ ದೇಶಗಳ ಮೇಲೆ ಭೀಕರವಾದ ಆರ್ಥಿಕ, ಸಾಮಾಜಿಕ ಪ್ರಭಾವವನ್ನು ಬೀರುತ್ತದೆ. ಜಾಗತಿಕವಾಗಿ ಮಾನವ ಸಂಕುಲ ಉಳಿಯಬೇಕಾದರೆ ಯುದ್ಧಕ್ಕೆ ಅಂತ್ಯ ಹಾಡುವುದು ಅನಿವಾರ್ಯ, ಅಗತ್ಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.