ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸೇವೆ ವಿಚಾರದಲ್ಲಿ ಹಾಸ್ಯನಟ (ಸ್ಟ್ಯಾಂಡಪ್ ಕಾಮಿಡಿಯನ್) ಕುನಾಲ್ ಕಮ್ರಾ ಜೊತೆ ‘ಓಲಾ ಇವಿ’ ಸಿಇಒ ಭವಿಶ್ ಅಗರ್ವಾಲ್ ಟ್ವೀಟ್ ವಾರ್ ನಡೆಸಿದ ಮರುದಿನವೇ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಷೇರುಗಳು ಕುಸಿತಗೊಂಡಿದೆ.
ಇಂದು ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಓಲಾ ಷೇರುಗಳು ಸುಮಾರು ಶೇಕಡ 8ರಷ್ಟು ಕುಸಿದಿದ್ದು ಓಲಾ ಹೂಡಿಕೆದಾರರಿಗೆ ಭಾರೀ ನಷ್ಟ ಉಂಟು ಮಾಡಿದೆ. ವಹಿವಾಟಿನ ಅಂತ್ಯದ ವೇಳೆ ಷೇರಿನ ಬೆಲೆ ಶೇಕಡ 8.38ರಷ್ಟು ಇಳಿದು 90.75ಕ್ಕೆ ಸ್ಥಿರವಾಗಿದೆ. ಭವಿಶ್ ಅಗರ್ವಾಲ್ ಅವರ ದುರಂಕಾರದಿಂದಾಗಿ ನಮಗೆ ನಷ್ಟವಾಗಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣೇಶನ್ ಅಯ್ಯರ್ ಎಂಬ ಹೂಡಿಕೆದಾರರು ಇಂದು ಬೆಳಿಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಭವಿಶ್ ಅಗರ್ವಾಲ್ ಅವರ ದುರಹಂಕಾರವು ಹೂಡಿಕೆದಾರನಾದ ನಾನು ಬೆಲೆ ತೆರುವಂತೆ ಮಾಡಿದೆ. ನಾನು ನನ್ನ ಓಲಾ ಷೇರುಗಳನ್ನು 40 ಸಾವಿರ ರೂಪಾಯಿ ನಷ್ಟಕ್ಕೆ ಮಾರಾಟ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕೆಟ್ಟು ನಿಲ್ಲುತ್ತಿವೆ ‘ಓಲಾ ಇವಿ’; ಓಲಾ ಸಿಇಒ ಅಗರ್ವಾಲ್ ಮತ್ತು ಕುನಾಲ್ ಕಮ್ರಾ ನಡುವೆ ಟ್ವೀಟ್ ವಾರ್
“ಈ ಕಂಪನಿಯಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇಂತಹ ವಿಷಕಾರಿ ವ್ಯಕ್ತಿ ಸಂಸ್ಥೆ ಮುನ್ನಡೆಸುವಾಗ ಸಂಸ್ಥೆಗೆ ಭವಿಷ್ಯವಿಲ್ಲ. ಕುನಾಲ್ ಕಮ್ರಾ ಅವರು ರಾಕ್ಷಸ ಮನಸ್ಥಿತಿಯ ವ್ಯಕ್ತಿಯನ್ನು ಬಯಲು ಮಾಡಿದ್ದಾರೆ. ಇತರ ಹೂಡಿಕೆದಾರರು ಕೂಡಾ ನಷ್ಟದೊಂದಿಗೆ ಓಲಾ ಷೇರಿನಿಂದ ಹೂಡಿಕೆ ಹಿಂಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
“ಓಲಾ ತನ್ನ ಹೂಡಿಕೆದಾರರ ಸಂಪತ್ತನ್ನು ಬರಿದು ಮಾಡಿದೆ. ನಿಮ್ಮ ಗ್ರಾಹಕರು, ಉದ್ಯೋಗಿಗಳು ಮತ್ತು ಹೂಡಿಕೆದಾರರ ಬಗ್ಗೆ ತುಂಬಾ ತಿರಸ್ಕಾರವಿದ್ದರೆ ನೀವು ಎಂದಿಗೂ ಸಂಪತ್ತನ್ನು ಗಳಿಸಲು ಸಾಧ್ಯವಿಲ್ಲ” ಎಂದು ಮತ್ತೋರ್ವ ಬಳಕೆದಾರರು ಹೇಳಿದ್ದಾರೆ.
“ನಾನು ಓಲಾ ಗ್ರಾಹಕನಲ್ಲ. ಆದರೆ ಓಲಾ ಹೂಡಿಕೆದಾರನಾಗಿದ್ದೇನೆ. ಭವಿಶ್ ಅಗರ್ವಾಲ್ ಅವರು ಈ ರೀತಿ ಜಗಳವಾಡುವ ಬದಲು ಗ್ರಾಹಕ ಸೇವೆಯನ್ನು ಸುಧಾರಿಸುವತ್ತ ಗಮನ ಹರಿಸಿ ಎಂದು ವಿನಂತಿಸುತ್ತೇನೆ” ಎಂದು ತಿಳಿಸಿದರು.
ಕುನಾಲ್ ಕಮ್ರಾ- ಭವಿಶ್ ಅಗರ್ವಾಲ್ ಟ್ವೀಟ್ ವಾರ್
ಕುನಾಲ್ ಕಮ್ರಾ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಓಲಾ ಸರ್ವೀಸ್ ಸೆಂಟರ್ ಬಳಿ ನಿಲ್ಲಿಸಲಾಗಿರುವ ರಾಶಿಗಳಷ್ಟು ಓಲಾ ಸ್ಕೂಟರ್‌ಗಳ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಓಲಾ, ರ್‍ಯಾಪಿಡೋಗಳಿಂದ ಬೈಕ್ ಟ್ಯಾಕ್ಸಿ : ಆಟೋ ಚಾಲಕರಿಗೆ ಎದುರಾದ ಮತ್ತೊಂದು ಸಂಕಷ್ಟ
“ಭಾರತೀಯ ಗ್ರಾಹಕರಿಗೆ ಧ್ವನಿ ಇಲ್ಲವೇ? ದ್ವಿಚಕ್ರ ವಾಹನಗಳು ಅನೇಕ ಕೂಲಿ ಕಾರ್ಮಿಕರ ಜೀವನದ ಅವಿಭಾಜ್ಯ ಭಾಗವಾಗಿವೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಮಸ್ಯೆ ಹೆಚ್ಚುತ್ತಿದೆ. ಕಂಪನಿಯು ತೀರಾ ಕಳಪೆಮಟ್ಟದ ಸೇವೆ ಒದಗಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಮ್ಮ ಸಮಸ್ಯೆಗಳ ಬಗ್ಗೆ ಕಮೆಂಟ್ ಮಾಡಿ” ಎಂದು ಕಮ್ರಾ ಹೇಳಿದ್ದಾರೆ.
ಇದರಿಂದ ಆಕ್ರೋಶಗೊಂಡ ಭವಿಶ್ ಅಗರ್ವಾಲ್ “ಇದು ದುಡ್ಡಿಗಾಗಿ ಮಾಡಿರುವ ಟ್ವೀಟ್ (ಪೇಯ್ಡ್ ಟ್ವೀಟ್). ಕಮ್ರಾ ಅವರು ತಮ್ಮ ವಿಫಲ ಹಾಸ್ಯ ವೃತ್ತಿಯಿಂದ ಗಳಿಸುವುದಕ್ಕಿಂತ ಹೆಚ್ಚು ಹಣ ಕೊಡುತ್ತೇನೆ. ನಾವು ಸೇವಾ ನೆಟ್‌ವರ್ಕ್ ಅನ್ನು ವೇಗವಾಗಿ ವಿಸ್ತರಿಸುತ್ತಿದ್ದೇವೆ. ಎಲ್ಲ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುತ್ತೇವೆ” ಎಂದಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿದ ಕಮ್ರಾ, “ನಾನು ಟ್ವೀಟ್ ಮಾಡಲು ಹಣ ಪಡೆದಿದ್ದೇನೆ ಎಂದು ನೀವು ಸಾಬೀತುಪಡಿಸಿದರೆ, ಈ ಟ್ವೀಟ್ ಮತ್ತು ಈ ಹಿಂದೆ ಖಾಸಗಿ ಕಂಪನಿಗಳ ವಿರುದ್ಧ ಹಾಕಿರುವ ಎಲ್ಲ ಪೋಸ್ಟ್‌ಗಳನ್ನು ಅಳಿಸಿ ಹಾಕುತ್ತೇನೆ” ಎಂದು ಹೇಳಿದ್ದರು. ಇಬ್ಬರ ನಡುವೆ ಟ್ವೀಟ್ ವಾರ್ ನಡೆದಿದೆ.
Bhavish Aggarwal’s arrogance has cost me as an investor. I sold off my Ola Shares at a loss of 40k. Can’t expect much from this company. No future with such a toxic person leading it. @kunalkamra88 has exposed the devil. I hope other investors also exit with a haircut. https://t.co/Kv3BxK4XK7
— Ganeshan (@ganeshan_iyer) October 7, 2024
