ಬಿಜೆಪಿಯ ವಿರುದ್ಧ ಕಿಡಿ ಕಾರಿದ ಮಮತಾ ಬ್ಯಾನರ್ಜಿ
ಬಿಜೆಪಿಗರು ʼಬಂಗಾಳ ಫೈಲ್ಸ್ʼ ತಯಾರಿಯಲ್ಲಿದ್ದಾರೆಂದ ʼದೀದಿʼ
ವಿವಾದಾತ್ಮಕ ಕಥಾಹಂದರವುಳ್ಳ ʼದಿ ಕೇರಳ ಸ್ಟೋರಿʼ ಚಿತ್ರದ ಪ್ರದರ್ಶನಗಳು ತಮಿಳುನಾಡಿನಲ್ಲಿ ರದ್ದಗೊಂಡ ಬೆನ್ನಲ್ಲೇ ಪಶ್ಚಿಮ ಬಂಗಾಳ ಸರ್ಕಾರ ತನ್ನ ರಾಜ್ಯದಲ್ಲಿಯೂ ಚಿತ್ರದ ಪ್ರದರ್ಶನವನ್ನು ನಿಷೇಧಿಸಿದೆ.
ʼದಿ ಕೇರಳ ಸ್ಟೋರಿʼ ಚಿತ್ರವನ್ನು ನಿಷೇಧಿಸಿರುವ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ” ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ನಿಷೇಧಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ. ರಾಜ್ಯದಲ್ಲಿ ದ್ವೇಷ ಹರಡುವುದನ್ನು ತಡೆಯಲು ಮತ್ತು ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ, ಶಾಂತಿಯನ್ನು ಕಾಪಾಡಲು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ” ಎಂದಿದ್ದಾರೆ.
ಈ ಹಿಂದೆ ತೆರೆಕಂಡು ವಿವಾದ ಸೃಷ್ಟಿಸಿದ್ದ ʼದಿ ಕಾಶ್ಮೀರ್ ಫೈಲ್ಸ್ʼ ಮತ್ತು ಸದ್ಯ ವಿವಾದಕ್ಕೆ ಕಾರಣವಾಗಿರುವ ʼದಿ ಕೇರಳ ಸ್ಟೋರಿʼ ಎರಡೂ ಚಿತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, “ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರ ಒಂದು ವರ್ಗವನ್ನು ಅವಮಾನಿಸಿದರೆ, ತಿರುಚಿದ ಕಥೆಯನ್ನು ಹೊಂದಿರುವ ʼದಿ ಕೇರಳ ಸ್ಟೋರಿʼ ಚಿತ್ರದ ಮೂಲಕ ಕೇರಳದ ಘನತೆಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಇಂತಹ ಚಿತ್ರಗಳನ್ನು ತಯಾರಿಸುವ ಸಲುವಾಗಿ ಬಿಜೆಪಿ, ಕೆಲವು ಸ್ಟಾರ್ ಕಲಾವಿದರಿಗೆ ಹಣ ಸಂದಾಯ ಮಾಡಿದೆ. ಹಣ ಪಡೆದಿರುವ ಕಲಾವಿದರು ಈಗಾಗಲೇ ಪಶ್ಚಿಮ ಬಂಗಾಳಕ್ಕೂ ಬಂದು ಹೋಗಿದ್ದಾರೆ. ತಿರುಚಿದ ಕಥೆಯನ್ನಿಟ್ಟುಕೊಂಡು ʼಬಂಗಾಳ ಫೈಲ್ಸ್ʼ ಸಿನಿಮಾ ಮಾಡಲು ಹೊರಟಿದ್ದಾರೆ” ಈ ಬಗ್ಗೆ ನಾನು ಮಾಹಿತಿ ಪಡೆದುಕೊಂಡಿದ್ದೇನೆ” ಎಂದು ಬಿಜೆಪಿ ಮತ್ತು ʼದಿ ಕೇರಳ ಸ್ಟೋರಿʼ ಚಿತ್ರತಂಡದ ವಿರುದ್ಧ ಕಿಡಿ ಕಾರಿದ್ದಾರೆ.
ಕೇರಳದ ಯುವತಿಯರನ್ನು ಬಲವಂತವಾಗಿ ಮತಾಂತರಿಸಿ ಭಯೋತ್ಪಾದಕ ಸಂಘಟನೆ ʼಐಸಿಸ್ʼಗೆ ಸೇರ್ಪಡೆ ಮಾಡಲಾಗಿದೆ ಎಂಬ ಎಳೆಯ ಸುತ್ತ ʼದಿ ಕೇರಳ ಸ್ಟೋರಿʼ ಚಿತ್ರದ ಕಥೆ ಮೂಡಿಬಂದಿದೆ. ಆದರೆ, 32 ಸಾವಿರ ಯುವತಿಯರು ಮತಾಂತರಕ್ಕೊಳಗಾಗಿ ಭಯೋತ್ಪಾದನೆಗೆ ಬಲವಂತವಾಗಿ ತಳ್ಳಲ್ಪಟ್ಟಿದ್ದಾರೆ ಎಂದು ತಿರುಚಿದ ಕಥೆಯನ್ನು ಟೀಸರ್‌ನಲ್ಲಿ ತೋರಿಸಲಾಗಿತ್ತು. ಟೀಸರ್ ವಿವಾದಕ್ಕೆ ಸಿಲುಕಿಕೊಂಡು, ಸಿನಿಮಾ ನಿಷೇಧಿಸುವಂತೆ ಜನ ಕೋರ್ಟ್ ಮೆಟ್ಟಿಲೇರುತ್ತಲೇ ವರಸೆ ಬದಲಿಸಿದ್ದ ಚಿತ್ರತಂಡ, ಮತಾಂತರಕ್ಕೊಳಗಾಗಿದ್ದ ಮೂರು ಜನ ಮಹಿಳೆಯರʼ ಕಥೆ ಇದು ಎಂದು ಹೇಳಿಕೊಂಡಿತ್ತು.
ಈ ಸುದ್ದಿ ಓದಿದ್ದೀರಾ? ತಮಿಳುನಾಡು | ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರದರ್ಶನ ರದ್ದು
ವಿವಾದದ ನಡುವೆಯೂ ತೆರೆಕಂಡಿರುವ ಈ ಚಿತ್ರಕ್ಕೆ ದೇಶದ ವಿವಿದೆಡೆಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ತಮಿಳುನಾಡಿನ ಸ್ಥಳೀಯ ಚಿತ್ರಮಂದರಿಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸ್ವಯಂ ಪ್ರೇರಿತವಾಗಿ ಚಿತ್ರದ ಪ್ರದರ್ಶನವನ್ನು ರದ್ದು ಪಡಿಸಲಾಗಿದೆ. ಕೇರಳದಲ್ಲೂ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ಯವಾಗುತ್ತಿದ್ದು, ತಿರುಚಿದ ಕಥೆಯನ್ನು ಹೊಂದಿರುವ ಚಿತ್ರದ ಮೂಲಕ ಸಾಮಾಜದಲ್ಲಿ ದ್ವೇಷ ಹರಡಲಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.