- ವಿಜಯನಗರದಲ್ಲಿ ನಡೆದ ಕೊನೆಯ ದಿನದ ಬಹಿರಂಗ ಪ್ರಚಾರ ಸಭೆಯಲ್ಲಿ ಅಭಿಮತ
- ರೈತರಿಗೆ, ಜನಸಾಮಾನ್ಯರಿಗೆ ಬಿಜೆಪಿ ಸರ್ಕಾರದಿಂದ ಏನೂ ಪ್ರಯೋಜನವಾಗಿಲ್ಲ
ಮೇ 10 ಮತದಾನದ ದಿನ. ಇದುವರೆಗಿನ ಪ್ರಚಾರದಲ್ಲಿ ಜನರ ಕಷ್ಟ ಮತ್ತು ಜನಸಾಮಾನ್ಯರು ಅನುಭವಿಸುತ್ತಿರುವ ಬವಣೆಗಳ ಬಗ್ಗೆ ಕಾಂಗ್ರೆಸ್ ಬೆಳಕು ಚೆಲ್ಲಿದೆ ಮತ್ತು ಎಂದಿಗೂ ಅವರ ಪರ ಧ್ವನಿ ಎತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ, ನೆಮ್ಮದಿಯ ಜೀವನ ಕಳೆಯಿರಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಕೊನೆಯ ದಿನದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
“ರಾಜ್ಯದ ಜನತೆಗೆ ಸತ್ಯ ಮತ್ತು ವಿಚಾರ ಗೊತ್ತಿದೆ. ಒಳ್ಳೆಯ ನಿರ್ಧಾರ ತಳೆಯುವ ಶಕ್ತಿ ನಿಮ್ಮಲ್ಲಿ ಇದೆ. ಮುಂದಿನ ಐದು ವರ್ಷಗಳ ಕಾಲ ಸುಭದ್ರ ಸರ್ಕಾರವನ್ನು ರಾಜ್ಯದಲ್ಲಿ ತರುತ್ತೀರಿ ಎಂಬ ಭರವಸೆ ಇದೆ” ಎಂದರು.
“ಎಲ್ಲ ನಮ್ಮ ತಾಯಂದಿರಿಗೆ ಗೊತ್ತಿದೆ ಬೆಲೆಯೇರಿಕೆ ಎಷ್ಟು ಕಷ್ಟ ತಂದಿದೆ ಅಂತ. ಗ್ಯಾಸ್ ಸೇರಿದಂತೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರಿಂದು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಜನರ ಕಷ್ಟಗಳನ್ನು ಅವರ ಬವಣೆಗಳನ್ನು ಅರಿತುಕೊಳ್ಳುವಲ್ಲಿ ಮತ್ತು ಬಗೆಹರಿಸುವಲ್ಲಿ ಈ ಬಿಜೆಪಿ ಸರ್ಕಾರ ವಿಫಲವಾಗಿದೆ” ಎಂದು ದೂರಿದರು.
“ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಸರ್ಕಾರ ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸಿ ಅವರಿಗೆ ಆಸೆ, ಆಮಿಷಗಳನ್ನು ಒಡ್ಡಿ ವಾಮ ಮಾರ್ಗದ ಮೂಲಕ ಸರ್ಕಾರ ರಚನೆ ಮಾಡಿರುವಂತಹದು, ಇಂದು ಈ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂದು ಹೆಸರಿದೆ. ರೈತರಿಗೆ, ಜನಸಾಮಾನ್ಯರಿಗೆ ಈ ಸರ್ಕಾರದಿಂದ ಏನೂ ಪ್ರಯೋಜನವಾಗಿಲ್ಲ. ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಇಂದು ಲಂಚ ರಿಂಗಣಿಸುತ್ತಿದೆ” ಎಂದು ಹರಿಹಾಯ್ದರು.
“ಜಿಎಸ್‌ಟಿಯಿಂದಾಗಿ ಇಂದು ಸಣ್ಣ ಉದ್ದಿಮೆದಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇಂದು ಯಾರ ಉದ್ಯಮವು ಅಭಿವೃದ್ಧಿಯಾಗಿಲ್ಲ. ಇಂದು ಜನಸಾಮಾನ್ಯನಿಂದ ಲಂಚವನ್ನು ನೇರವಾಗಿ ತೆಗೆಯದ ಪರಿಣಾಮ ಜಿಎಸ್‌ಟಿ ಮೂಲಕ ಸರ್ಕಾರ ಲಂಚ ತೆಗೆಯುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಬೆಂಗಳೂರಿನಲ್ಲಿ 30 ಜನ ರಸ್ತೆಗುಂಡಿಗಳಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 10000 ಕೋಟಿ ರೂ. ಅನುದಾನವನ್ನು ಕೊಟ್ಟಿದೆ” ಎಂದರು.
“ಇಂದು ಚುನಾವಣಾ ಪ್ರಚಾರದ ಕೊನೆಯ ದಿನ. ಬಹಳಷ್ಟು ಸಲ ನಾವು ಸರ್ಕಾರವನ್ನು, ಪ್ರಧಾನಿ, ಗೃಹ ಸಚಿವವರನ್ನು ಚರ್ಚೆ ಮಾಡೋಣ ಬನ್ನಿ ಅಂತ ಕರೆದಿದ್ದೇವು. ಆದರೆ ಅವರು ಇದುವರೆಗೂ ಬಂದಿಲ್ಲ. ಬೆಲೆಯೇರಿಕೆ, ನಿರುದ್ಯೋಗದ ಜನರ ಕಷ್ಟಗಳ ಬಗ್ಗೆ ಮಾತನಾಡದೇ, ನಿಮ್ಮ ಭಾವನೆಗಳನ್ನು ಕೆರಳಿಸುವ, ಧರ್ಮಗಳ ಬಗ್ಗೆ ಒಡಕು ಮೂಡಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಲೇ ಬಂದಿದೆ” ಎಂದು ಕಿಡಿ ಕಾರಿದರು.