ತೆಂಗಿನ ಸಸಿ ನೆಟ್ಟರೆ ಕುಟುಂಬದ ಹತ್ತಾರು ತಲೆಮಾರಿಗೆ ಕಲ್ಪವೃಕ್ಷವಾಗುವಂತೆ ಮೇಕೆದಾಟು ಅಣೆಕಟ್ಟೆ ನಿರ್ಮಾಣವಾದರೆ ಹತ್ತಾರು ತಲೆಮಾರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ನಿರಂತರ ಹೋರಾಟದ ಸಂಕಲ್ಪ ಮಾಡುತ್ತೇವೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ತಿಳಿಸಿದರು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಹಾಗೂ ಸತ್ತೇಗಾಲ ಯೋಜನೆಯನ್ನು ಶೀಘ್ರವಾಗಿ ಮುಕ್ತಾಯ ಮಾಡುವಂತೆ ಆಗ್ರಹಿಸಿ ರಾಮನಗರದ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ನಡೆದ ಹೋರಾಟ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ, ರೈತರಿಗೆ 365 ತೆಂಗಿನ ಸಸಿಗಳನ್ನು ವಿತರಿಸಿ ಮಾತನಾಡಿದರು.
“ಮೇಕೆದಾಟು ಅಣೆಕಟ್ಟೆ ನಿರ್ಮಾಣದಿಂದ 6 ಜಿಲ್ಲೆಗಳಿಗೆ ನೀರಿನ ತೊಡಕು ಪರಿಹಾರವಾಗಲಿದೆ ಮತ್ತು ಜಲವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ. ಈ ಯೋಜನೆಗೆ ಸರ್ಕಾರದಲ್ಲಿ ಉತ್ಕಟ ಇಚ್ಚಾಶಕ್ತಿ ಕಾಣುತ್ತಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ವರ್ಷ 70 ಟಿಎಂಸಿ ನೀರು ಸಮುದ್ರದ ಪಾಲಾಗಿದೆ. ಜತೆಗೆ ಜನತೆಯ ಬೆಂಬಲದ ಕೊರತೆಯಿಂದ ಹೋರಾಟಕ್ಕೆ ತೊಡಗಲು ಸವಾಲುಗಳಿವೆ” ಎಂದು ಅಭಿಪ್ರಾಯಪಟ್ಟರು.
ರೈತ ಮುಖಂಡ ಹೊನ್ನಾಯ್ಕನಹಳ್ಳಿ ಕೃಷ್ಣಪ್ಪ ಮಾತನಾಡಿ, “ನಿರಂತರ ಹೋರಾಟ ಮಾಡುವುದು ಸುಲಭದ ಮಾತಲ್ಲ. ರಮೇಶ್‌ಗೌಡ ಕಳೆದ ಒಂದು ವರ್ಷದಿಂದ ಮೇಕೆದಾಟು ಅಣೆಕಟ್ಟೆಗಾಗಿ ಹೋರಾಟ ಮಾಡಿರುವುದು ಶ್ಲಾಘನೀಯ. ನಮ್ಮ ಹಕ್ಕಿಗಾಗಿ ಹೋರಾಟ ಮಾಡದಿದ್ದರೆ, ಅಧಿಕಾರಿಗಳು ದಬ್ಬಾಳಿಕೆ ಮುಂದುವರೆಸುತ್ತಾರೆ” ಎಂದರು.
ಡಿಎಸ್‌ಎಸ್ ಸಂಚಾಲಕ ವೆಂಕಟೇಶ್(ಸೇಟು) ಮಾತನಾಡಿ, “ಮೇಕೆದಾಟು ಅಣೆಕಟ್ಟೆ ನಿರ್ಮಾಣದ ಹೋರಾಟ ಒಂದು ವರ್ಷ ಪೂರೈಸಿದ್ದು, ಇದು ಜನಪರ ವೇದಿಕೆಯ ಮಹತ್ವದ ಹೋರಾಟವಾಗಿದೆ. ಎಲ್ಲ ಶಾಸಕರು ಮತ್ತು ಸಂಸದರು ಒಟ್ಟಾಗಿ ಈ ಯೋಜನೆಗೆ ಬೆಂಬಲ ನೀಡಬೇಕಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ʼಸೀತಾಫಲʼ ಹಣ್ಣಿಗೆ ಭಾರಿ ಬೇಡಿಕೆ; ಬೇಕಿದೆ ಸೂಕ್ತ ಮಾರುಕಟ್ಟೆ
ತಾ.ಪಂ. ಮಾಜಿ ಸದಸ್ಯ ಮತ್ತೀಕೆರೆ ಹನುಮಂತಯ್ಯ ಮಾತನಾಡಿ, “ಮೇಕೆದಾಟು ಅಣೆಕಟ್ಟೆಯಿಂದ ಕುಡಿಯುವ ನೀರಿನ ಜತೆಗೆ ಜಲವಿದ್ಯುತ್ ಉತ್ಪಾದನೆಗೂ ಸಹಕಾರಿಯಾಗಲಿದೆ. ರಮೇಶ್‌ಗೌಡ ಅವರು ಹೋರಾಟ ನಡೆಸುತ್ತಿರುವುದು ಮಹತ್ವದ್ದಾಗಿದೆ” ಎಂದು ಹೇಳಿದರು.
ವೇದಿಕೆ ರಾಜ್ಯ ಉಪಾಧ್ಯಕ್ಷ ರಂಜಿತ್‌ಗೌಡ, ನಗರಸಭಾ ಮಾಜಿ ಸದಸ್ಯ ಜೆಸಿಬಿ ಲೋಕೇಶ್, ತೋಟಗಾರಿಕಾ ಇಲಾಖೆ ನಿವೃತ್ತ ಅಧಿಕಾರಿ ಪುಟ್ಟಸ್ವಾಮಿ, ಶಿಕ್ಷಕ ಪುಟ್ಟಪ್ಪಾಜಿ, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ರೈತ ಮುಖಂಡ ಗೌಡಗೆರೆ ತಿಮ್ಮೇಗೌಡ, ರ‍್ಯಾಂಬೋ ಸೂರಿ, ಪಾನಿಪುರಿ ಚನ್ನಪ್ಪ, ರಾಜು ಹೋಟೆಲ್, ಮೆಣಸಿನಗಹಳ್ಳಿ ಮಹೇಶ್, ಭೀಮಯ್ಯ, ಬೋರ್‌ವೆಲ್ ಪುಟ್ಟು, ಉಮೇಶ್, ರಾಜಸ್ಥಾನಿ ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರು ಇದ್ದರು.