ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಗೆಲುವಿನ ಹಾದಿಯಲ್ಲಿದೆ. ಕೆಲವು ಕ್ಷೇತ್ರಗಳ ಮತ ಎಣಿಕೆ ಮುಗಿದಿದ್ದು, ಬಿಜ್ಬೆಹರಾ ಕ್ಷೇತ್ರದಲ್ಲಿ ಸ್ಪರ್ಥಿಸಿದ್ದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಮಗಳು ಇಲ್ತಿಜಾ ಮುಫ್ತಿ ಸೋಲುಂಡಿದ್ದಾರೆ.
ಇಲ್ತಿಜಾ ಅವರು ನ್ಯಾಷನಲ್ ಕಾನ್ಫರೆನ್ಸ್ನ ಅಭ್ಯರ್ಥಿ ಬಶೀರ್ ಅಹ್ಮದ್ ವೀರಿ ಅವರ ವಿರುದ್ಧ 4,000 ಮತಗಳಿಂದ ಸೋಲುಂಡಿದ್ದಾರೆ.
2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದ ಸಮಯದಲ್ಲಿ ಕೇಂಧ್ರ ಸರ್ಕಾರ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿರಿಸಿತ್ತು. ಈ ವೇಳೆ, ಇಲ್ತಿಜಾ ಅವರು ರಾಜಕಾರಣದಲ್ಲಿ ಮುನ್ನೆಲೆ ಬಂದಿದ್ದರು. ತಮ್ಮ ತಾತ, ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಪ್ರತಿನಿಧಿಸಿದ್ದ ಬಿಜ್ಬೆಹರಾ ಕ್ಷೇತ್ರದಲ್ಲಿ ಈ ಬಾರಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಸೋಲುಂಡಿದ್ದಾರೆ.
ಇನ್ನು, 2019ರ ಫೆಬ್ರವರಿಯಲ್ಲಿ 44 ಯೋಧರು ಸಾವನ್ನಪ್ಪಿದ್ದ ಪ್ರದೇಶ ಪುಲ್ವಾಮಾದಲ್ಲಿ ಸ್ಪರ್ಧಿಸಿದ್ದ ಪಿಡಿಪಿ ಯುವ ಘಟಕದ ಅಧ್ಯಕ್ಷ ವಹೀದ್ ಪರ್ರಾ ಅಜೇಯ ಗೆಲುವು ಸಾಧಿಸಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ನ ಖಲೀಲ್ ಬಂದ್ ವಿರುದ್ಧ 7,000 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.