ಸ್ವತಂತ್ರ ಅಭ್ಯರ್ಥಿ, ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಅವರು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹಿಸಾರ್ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಾಮ್ ನಿವಾಸ್ ರಾರಾ ಮತ್ತು ಹಾಲಿ ಬಿಜೆಪಿ ಶಾಸಕ ಕಮಲ್ ಗುಪ್ತಾ ಅವರನ್ನು ಸಾವಿತ್ರಿ ಜಿಂದಾಲ್ ಸೋಲಿಸಿದ್ದಾರೆ. ತನ್ನ ಗೆಲುವಿನ ನಂತರ ಸಾವಿತ್ರಿ ಜಿಂದಾಲ್ ಹಿಸಾರ್‌ನ ಜನರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಾವಿತ್ರಿ ಜಿಂದಾಲ್, “ನೀವೆಲ್ಲರೂ ಈ ಚುನಾವಣೆಯಲ್ಲಿ ಹೋರಾಡಿದ್ದೀರಿ, ಈ ಗೆಲುವು ನಿಮ್ಮದೇ ಗೆಲುವು. ಈ ವಿಜಯಕ್ಕಾಗಿ ನನ್ನ ಹಿಸಾರ್ ಕುಟುಂಬಕ್ಕೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಬರೆದಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | 40 ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ
74 ವರ್ಷದ ಸಾವಿತ್ರಿ ಜಿಂದಾಲ್ ಅವರು ಬಿಜೆಪಿಯ ಕುರುಕ್ಷೇತ್ರ ಸಂಸದ ನವೀನ್ ಜಿಂದಾಲ್ ಅವರ ತಾಯಿ ಮತ್ತು ಕೈಗಾರಿಕೋದ್ಯಮಿ ದಿವಂಗತ ಓ ಪಿ ಜಿಂದಾಲ್ ಅವರ ಪತ್ನಿಯಾಗಿದ್ದಾರೆ. ಅಫಿಡವಿಟ್ ಪ್ರಕಾರ ಸಾವಿತ್ರಿ ಜಿಂದಾಲ್ ಅವರು 80 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 270 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ.
ಫೋರ್ಬ್ಸ್ ಇಂಡಿಯಾ ಪ್ರಕಾರ, ಸಾವಿತ್ರಿ ಜಿಂದಾಲ್ ಮತ್ತು ಕುಟುಂಬದ ಒಟ್ಟು ಆಸ್ತಿ 42.2 ಬಿಲಿಯನ್ ಡಾಲರ್ ಆಗಿದೆ. ಫೋರ್ಬ್ಸ್ ಇಂಡಿಯಾ ಸಾವಿತ್ರಿ ಜಿಂದಾಲ್ ಅವರ ವೈಯಕ್ತಿಕ ನಿವ್ವಳ ಮೌಲ್ಯವನ್ನು 3.65 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಿದೆ.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ಎಂದಿಗೂ ಅತಿಯಾದ ಆತ್ಮವಿಶ್ವಾಸ ಇರಬಾರದು: ಅರವಿಂದ್ ಕೇಜ್ರಿವಾಲ್
ವರದಿಗಳ ಪ್ರಕಾರ 29.1 ಬಿಲಿಯನ್ ಡಾಲರ್ ನಿವ್ವಳ ಆದಾಯವನ್ನು ಹೊಂದಿರುವ ಸಾವಿತ್ರಿ ಜಿಂದಾಲ್ ಈ ವರ್ಷ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಸಾವಿತ್ರಿ ಜಿಂದಾಲ್ ಹಿಸಾರ್ ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2005ರಲ್ಲಿ ಹಿಸಾರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕಿಯಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಅದಾದ ಬಳಿಕ 2009ರಲ್ಲಿ ಇದೇ ಕ್ಷೇತ್ರದಲ್ಲಿ ಮರು ಆಯ್ಕೆಯಾಗಿದ್ದಾರೆ, 2013ರಲ್ಲಿ ಸಚಿವರಾದರು.
ಮಾರ್ಚ್‌ನಲ್ಲಿ ಕಾಂಗ್ರೆಸ್ ತೊರೆದಿದ್ದು, ಬಿಜೆಪಿ ಸೇರಿದ್ದರು. ಬಿಜೆಪಿಯು ಹಿಸಾರ್ ಕ್ಷೇತ್ರದಲ್ಲಿ ಟಿಕೆಟ್ ನೀಡುವ ನಿರೀಕ್ಷೆಯನ್ನು ಸಾವಿತ್ರಿ ಹೊಂದಿದ್ದರು. ಆದರೆ ಬಿಜೆಪಿ ಟಿಕೆಟ್ ಕೈ ತಪ್ಪುತ್ತಿದ್ದಂತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
यह चुनाव आप सभी ने लड़ा है, यह जीत भी आप सभी की है। इस जीत की मेरे हिसार परिवार को हार्दिक बधाई। pic.twitter.com/fH3t3wxJgy
— Savitri Jindal (@SavitriJindal) October 8, 2024
