ಬೆಳಗಾವಿ ಜಿಲ್ಲೆಯ ರಾಣಿ ಚೆನ್ನಮ್ಮನ ಕಿತ್ತೂರನ್ನು ಪ್ರವಾಸಿ ತಾಣವಾಗಿಸಲು 38 ಕೋಟಿ ವೆಚ್ಚದಲ್ಲಿ ವಿದ್ಯುನ್ಮಾನ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪುರಾತತ್ತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಆಶ್ರಯದಲ್ಲಿ ಕಿತ್ತೂರು ಕೋಟೆ ಆವರಣದಲ್ಲಿ ಮಂಗಳವಾರ, ಚನ್ನಮ್ಮನ ಕಿತ್ತೂರಿನ ಕೋಟೆ, ಅರಮನೆ ಸಂರಕ್ಷಣಾ ಕಾಮಗಾರಿಗಳ ಭೂಮಿಪೂಜೆ ಹಾಗೂ ಶಂಕುಸ್ಥಾಪನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕೋಟೆಯ ಮಹಾದ್ವಾರ, ಗೋಡೆಗಳು ಸೇರಿಂತೆ ವಿವಿಧ ಅವಶೇಷಗಳನ್ನು ಸಂರಕ್ಷಿಸಲು ₹12.11 ಕೋಟಿ, ಇತರ ಕಾಮಗಾರಿಗಳಿಗೆ ₹2.4 ಕೋಟಿ ಅನುದಾನ ಬಳಕೆಯಾಗಲಿದೆ. ಕಳೆದ ಒಂದು ವರ್ಷದಿಂದ ಈ ಭಾಗದ ಶಾಸಕರ ಬೇಡಿಕೆಯಿತ್ತು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಟೆ ಅಭಿವೃದ್ಧಿಗೆ ಕೂಡಲೇ ಅನುದಾನ ಮಂಜೂರು ಮಾಡಿದರು’ ಎಂದರು.
‘ಕೋಟೆಯ ಕೆಲವು ಭಾಗ ಶೀಥಿಲಗೊಂಡಿದ್ದು, ದುರಸ್ತಿ ಅವಶ್ಯಕತೆ ಇದೆ. ಕೋಟೆಯ ಕುಸಿದ ಗೋಡೆಗಳನ್ನು ನವೀಕರಿಸಿ ಕೋಟೆ ಅವಶೇಷಗಳ ಸಂರಕ್ಷಣೆಯ ಮೂಲಕ ಇತಿಹಾಸ ಉಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ. ಮೂಲ ಪದ್ಧತಿ ಅನ್ವಯ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು’ ಎಂದರು.
ಕೋಟೆ ಮರು ನಿರ್ಮಾಣಕ್ಕೆ ಈಗಾಗಲೇ ಸಾಕಷ್ಟು ಬಾರಿ ಯೋಚಿಸಲಾಗಿದೆ. ಆದರೆ ಅರಮನೆಯ ಮೂಲ ವಿನ್ಯಾಸದ ಮಾಹಿತಿಯಿಲ್ಲದ ಕಾರಣ ಮರು ನಿರ್ಮಾಣ ವಿಳಂಬವಾಗುತ್ತಿದೆ. ಸದ್ಯಕ್ಕೆ ಉಳಿದ ಅವಶೇಷಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ತ್ವರಿತವಾಗಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ₹3 ಕೋಟಿ ವೆಚ್ಚದ ರಾಣಿ ಚನ್ನಮ್ಮನ ಭವನ ನಿರ್ಮಾಣದ ಹಂತದಲ್ಲಿದೆ. ಒಟ್ಟು ₹18 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಬೆಳಗಾವಿ | ಅ. 24, 25ಕ್ಕೆ ಮೂಡಲಗಿಯಲ್ಲಿ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಈ ಸಂದರ್ಭದಲ್ಲಿ ಕಿತ್ತೂರಿನ ಶಾಸಕ ಬಾಬಾಸಾಹೇಬ ಪಾಟಿಲ್, ಕಿತ್ತೂರು ಸಂಸ್ಥಾನ ಮಠದ ರಾಜಗುರು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಮಡಿವಾಳೆಶ್ವರ ಸ್ವಾಮಿಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೋಲಿಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪ್ರಭಾವತಿ, ತಹಸಿಲ್ದಾರ್ ಹಾಗೂ ಇತರ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.