ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕಸಿದುಕೊಂಡರೂ, ರಾಜ್ಯತ್ವವನ್ನು ಕಿತ್ತುಕೊಂಡರೂ, ರಾಜ್ಯವನ್ನು ಇಬ್ಬಾಗ ಮಾಡಿ ಎರಡು ಕೇಂದ್ರಾಡಳಿತ ಪ್ರವೇಶಗಳಾಗಿ ವಿಭಜಿಸಿದರೂ ಬಿಜೆಪಿ ತನ್ನ ಸ್ಥಾನಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಅದಾಗ್ಯೂ, 'ಭಾರತ' ಬಣಕ್ಕೆ ಈ ಗೆಲುವು ನಿರ್ಣಾಯಕವಾಗಿದೆ.
ಜಮ್ಮು-ಕಾಶ್ಮೀರದಲ್ಲಿ 10 ವರ್ಷಗಳ ಬಳಿಕ ವಿಧಾನಸಭಾ ಚುನಾವಣೆ ನಡೆದಿದೆ. ಚುನಾವಣಾ ಫಲಿತಾಂಶವೂ ಹೊರಬಿದ್ದಿದೆ. ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಸಿಪಿಐಎಂನ ‘ಇಂಡಿಯಾ’ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಿದೆ. ಒಮರ್ ಅಬ್ದುಲ್ಲಾ ಮುಂದಿನ ಮುಖ್ಯಮಂತ್ರಿ ಎಂದು ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಘೋಷಿಸಿದ್ದಾರೆ. ಜಮ್ಮು-ಕಾಶ್ಮೀರದ ಚುಕ್ಕಾಣಿ ‘ಇಂಡಿಯಾ’ ಕೈಸೇರಿದೆ.
ಕಣಿವೆ ರಾಜ್ಯದಲ್ಲಿ ‘ಇಂಡಿಯಾ’ ಗೆದ್ದಿದೆ. ಎನ್‌ಸಿ 42 ಸ್ಥಾನಗಳನ್ನೂ, ಕಾಂಗ್ರೆಸ್ 6, ಸಿಪಿಐ(ಎಂ) 1 ಕ್ಷೇತ್ರಗಳನ್ನೂ ಹಾಗೂ ಬಿಜೆಪಿ 29 ಸ್ಥಾನಗಳನ್ನು ಗೆದ್ದಿವೆ. ಪಿಡಿಪಿ ಮತ್ತು ಇತರರು 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಅಂಕಿಅಂಶವು ಏನು ಹೇಳುತ್ತದೆ? ಇದು ಬಿಜೆಪಿಯ ಸೋಲೇ ಅಥವಾ ‘ಇಂಡಿಯಾ’ದ ಗೆಲುವೇ?
ಇದು, ಖಂಡಿತವಾಗಿಯೂ ‘ಇಂಡಿಯಾ’ದ ಗೆಲುವು. ಆದರೆ, ಬಿಜೆಪಿಯ ಸೋಲಲ್ಲ. 2014ರಲ್ಲಿ 15 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಎನ್‌ಸಿ, ಈಗ ಬರೋಬ್ಬರಿ 42 ಸ್ಥಾನಗಳಿಗೆ ಏರಿಕೆ ಕಂಡಿದೆ. ಇದು, ಎನ್‌ಸಿಯ ಭಾರೀ ದೊಡ್ಡ ಗೆಲುವು. ಆದರೆ, ಮೆಹಬೂಬಾ ಮುಫ್ತಿ ಅವರ ಪಿಡಿಪಿ 2014ರಲ್ಲಿ 28 ಸ್ಥಾನ ಗಳಿಸಿತ್ತು. ಈಗ ಕೇವಲ 3 ಸ್ಥಾನಗಳಿಗೆ ಕುಸಿದಿದೆ. ಇನ್ನು, ಕಾಂಗ್ರೆಸ್ 17ರಿಂದ ಈಗ 6ಕ್ಕೆ ಇಳಿದಿದೆ. ಆದರೆ, ಬಿಜೆಪಿ ತನ್ನ ಸ್ಥಾನಗಳನ್ನು ಕಳೆದುಕೊಂಡಿಲ್ಲ. ಕಳೆದ ಬಾರಿ 25 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈಗ 28 ಸ್ಥಾನಗಳನ್ನು ಪಡೆದುಕೊಂಡಿದೆ. ಮೂರು ಸ್ಥಾನಗಳನ್ನು ವೃದ್ಧಿಸಿಕೊಂಡಿದೆ.
ಗಮನಾರ್ಹವಾಗಿ, 2014ರಲ್ಲಿ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಪಿಡಿಪಿ ಸಂಪೂರ್ಣವಾಗಿ ಜಮ್ಮು-ಕಾಶ್ಮೀರದಲ್ಲಿ ನೆಲಕಚ್ಚಿದೆ. 2014ರಲ್ಲಿ ಬಿಜೆಪಿ ಜೊತೆ ಪಿಡಿಪಿ ಮೈತ್ರಿ ಮಾಡಿಕೊಂಡರೂ, 2018ರಲ್ಲಿ ಮೈತ್ರಿ ಮುರಿದುಕೊಂಡಿತ್ತು. ಆದರೂ, ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರ ರಚಿಸಲು ಪಿಡಿಪಿಯೇ ಕಾರಣವಾಯಿತು. ಇದನ್ನೇ ಎನ್‌ಸಿ ಚುನಾವಣಾ ಪ್ರಚಾರದಲ್ಲಿ ಮತ್ತೆ-ಮತ್ತೆ ಒತ್ತಿ ಹೇಳಿತು. ‘ಇಂಡಿಯಾ’ ಮೈತ್ರಿಕೂಟದ ನಾಯಕರು ಬಿಜೆಪಿಗಿಂತಲೂ ಹೆಚ್ಚಾಗಿ ‘ಪಿಡಿಪಿ’ಯನ್ನೇ ಗುರಿಯಾಗಿಸಿಕೊಂಡಿದ್ದರು. ಪರಿಣಾಮ, ಪಿಡಿಪಿ ನೆಲಕಚ್ಚಿದರೂ, ಬಿಜೆಪಿ ತನ್ನ ಸ್ಥಾನಗಳನ್ನು ವೃದ್ಧಿಸಿಕೊಂಡಿದೆ.
ಈ ವರದಿ ಓದಿದ್ದೀರಾ?: ಹರಿಯಾಣ ಚುನಾವಣೆ | ಬಿಜೆಪಿ ಗೆಲುವು – ಕಾಂಗ್ರೆಸ್ ಸೋಲಿಗಿವೆ ನಾನಾ ಕಾರಣಗಳು
ಇನ್ನು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ರಾಜ್ಯತ್ವವನ್ನು ಕಸಿದುಕೊಂಡ ಬಿಜೆಪಿ ವಿರುದ್ಧ ಇಡೀ ಜಮ್ಮು-ಕಾಶ್ಮೀರವೇ ಸಿಟ್ಟಾಗಿದೆ. ಆದರೂ, ಹಿಂದು ಮತಗಳನ್ನು ತನ್ನ ತೆಕ್ಕೆಯಲ್ಲಿಯೇ ಬಿಜೆಪಿ ಹಿಡಿದಿಟ್ಟುಕೊಂಡಿದೆ. ಜಮ್ಮು ಪ್ರಾಂತ್ಯದ ಹಿಂದು ಮತಗಳು ಬಿಜೆಪಿ ಪರವಾಗಿ ಚಲಾವಣೆಯಾಗಿವೆ. ಜಮ್ಮು ಪ್ರದೇಶದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ನೆಲೆ ಉಳಿಸಿಕೊಂಡಿದೆ. ಈಗ ಬಿಜೆಪಿ ಗೆದ್ದಿರುವ ಹಲವು ಕ್ಷೇತ್ರಗಳೂ ಜಮ್ಮು ಪ್ರದೇಶದಲ್ಲಿವೆ. ಕಾಶ್ಮೀರ ಮತ್ತು ಲಡಾಖ್ ಭಾಗದ ಜನರು ಬಿಜೆಪಿ-ಪಿಡಿಪಿ ವಿರುದ್ಧ ಮತ ಚಲಾಯಿಸಿದ್ದಾರೆ. ಆ ಮತಗಳನ್ನು ಎನ್‌ಸಿ ಪಡೆದುಕೊಂಡಿದೆ.
ಇದರರ್ಥ, ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟವು ಬಿಜೆಪಿಯ ಯಾವುದೇ ಮತಗಳನ್ನು ತಮ್ಮತ್ತ ತಿರುಗಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಕಸಿದುಕೊಂಡರೂ, ರಾಜ್ಯತ್ವವನ್ನು ಕಿತ್ತುಕೊಂಡರೂ, ರಾಜ್ಯವನ್ನು ಇಬ್ಬಾಗ ಮಾಡಿ ಎರಡು ಕೇಂದ್ರಾಡಳಿತ ಪ್ರವೇಶಗಳಾಗಿ ವಿಭಜಿಸಿದರೂ ಬಿಜೆಪಿ ತನ್ನ ಸ್ಥಾನಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಅದಾಗ್ಯೂ, ‘ಭಾರತ’ ಬಣಕ್ಕೆ ಈ ಗೆಲುವು ನಿರ್ಣಾಯಕವಾಗಿದೆ.