ಮರಳು ಮಾಫಿಯಾದ ವಿರುದ್ದ ಧ್ವನಿ ಎತ್ತಿದ್ದ ಮಂಗಳೂರು ಪ್ರದೇಶದ ಕ್ಯಾಥೊಲಿಕ್ ಸಭೆಯ ಅಧ್ಯಕ್ಷರಾಗಿರುವ ಆಲ್ವಿನ್ ಡಿಸೋಜಾ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು ಎಂದು ಉಡುಪಿ ಪ್ರದೇಶದ ಕ್ಯಾಥೊಲಿಕ್ ಸಭೆ ಆಗ್ರಹಿಸಿದೆ.
ಉಡುಪಿ ಪ್ರದೇಶದ ಕ್ಯಾಥೊಲಿಕ್ ಸಭೆಯಿಂದ ಪತ್ರಿಕೆ ಪ್ರಕಟಣೆ ಹೊರಡಿಸಿದ್ದು, “ಆಲ್ವಿನ್ ಡಿಸೋಜಾ ಹಲ್ಲೆಕೋರನನ್ನು ಈವರೆಗೆ ಬಂಧಿಸದೇ ಇರುವ ದಕ್ಷಿಣ ಕನ್ನಡ ಪೊಲೀಸರ ನಡೆ ನಿಜಕ್ಕೂ ಸಂಶಯಗಳಿಗೆ ಕಾರಣವಾಗಿದೆ. ಯಾವುದೇ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಡದೆ ಪೊಲೀಸ್ ಇಲಾಖೆ ಕೂಡಲೇ ಆರೋಪಿಗಳನ್ನು ಬಂಧಿಸಬೇಕು” ಎಂದು ಒತ್ತಾಯಿಸಿದೆ.
“ಆಲ್ವಿನ್ ಅವರು ಸಾಮಾಜಿಕ ಸಂಘಟನೆಯ ಅಧ್ಯಕ್ಷರಾಗಿದ್ದು, ಉಳಿಯ ಪಾವೂರು, ರಾಣಿಪುರ, ಉಳ್ಳಾಲ ಹೊಯ್ಗೆ, 62ನೇ ತೋಕೂರು ಕೆಂಜಾರು ಈ ಪ್ರದೇಶಗಳ ದ್ವೀಪಗಳನ್ನು ಉಳಿಸುವ ಉದ್ದೇಶದಿಂದ ಸಾರ್ವಜನಿಕರೊಂದಿಗೆ ಸೇರಿಕೊಂಡು ಅಕ್ರಮ ಮರಳುಗಾರಿಕೆಯ ವಿರುದ್ದ ಧ್ವನಿ ಎತ್ತಿದ್ದರು. ಇದನ್ನು ಸಹಿಸದ ದುಷ್ಕರ್ಮಿಗಳು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ” ಎಂದರು.
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದು, ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇವಲ ಹೇಳಿಕೆಗೆ ಸೀಮಿತವಾಗಿದೆ. ಈ ಪ್ರಕೃತಿಯನ್ನು ನಾಶಗೊಳಿಸುವವರ ವಿರುದ್ದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಪರೋಕ್ಷವಾಗಿ ಕೈಜೋಡಿಸಿದಂತೆ ಕಾಣಿಸುತ್ತಿದೆ. ಘಟನೆ ನಡೆದು ಮೂರ್ನಾಲ್ಕು ದಿನಗಳು ಕಳೆದರೂ ಕೂಡ ದುಷ್ಕರ್ಮಿಗಳನ್ನು ಬಂಧಿಸದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಭತ್ತ ಕಟಾವು ಯಂತ್ರದ ಮಾಲೀಕರಿಂದ ರೈತರ ಸುಲಿಗೆ: ರೈತ ಸಂಘ ಆರೋಪ
“ಅಲ್ಪಸಂಖ್ಯಾತರ ಹಿತ ಕಾಯುವ ಆಶ್ವಾಶನೆ ನೀಡುವ ಸರ್ಕಾರಗಳು ಕೇವಲ ಕಣ್ಣೊರೆಸುವ ತಂತ್ರದಲ್ಲಿಯೇ ತೊಡಗಿರುವುದನ್ನು ಬಿಟ್ಟರೆ ಯಾವುದೇ ಪ್ರಯೋಜನಗಳಾಗುತ್ತಿಲ್ಲ. ಅನ್ಯಾಯದ ವಿರುದ್ದ ದನಿಯೆತ್ತಿದವರನ್ನು ಹಲ್ಲೆಗಳ ಮೂಲಕ ದಮನಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ. ಆಲ್ವಿನ್ ಅವರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಕೂಡಲೇ ಜಿಲ್ಲಾಡಳಿತದಿಂದ ಬಂಧಿಸುವ ಕೆಲಸವಾಗಬೇಕು. ಇಲ್ಲದಿದ್ದಲ್ಲಿ ಕ್ಯಾಥೊಲಿಕ್ ಸಭಾ ಸಂಘಟನೆ ಎರಡು ಜಿಲ್ಲೆಯ ಜನರನ್ನು ಸೇರಿಸಿಕೊಂಡು ಪ್ರತಿಭಟಿನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
“ಈ ಪ್ರಕೃತಿಯನ್ನು ನಾಶಗೊಳಿಸುವವರ ವಿರುದ್ದ ಹೋರಾಟ ನಡೆಸುವ ನಮ್ಮ ಮೇಲೆ ಇನ್ನಷ್ಟು ಹಲ್ಲೆ ನಡೆಸಿದರೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ” ಎಂದು ಕಥೊಲಿಕ್ ಸಭಾ ಉಡುಪಿ ಪ್ರದೇಶದ ಪದಾಧಿಕಾರಿಗಳು ತಿಳಿಸಿದ್ದಾರೆ.
