ಮಣಿಪುರ ಹಿಂಸಾಚಾರವನ್ನು ಮಾನವೀಯತೆಯ ಸಮಸ್ಯೆ ಎಂದು ಕರೆದಿರುವ ಸುಪ್ರೀಂ ಕೋರ್ಟ್, ಈ ಹಿಂಸಾಚಾರದಿಂದಾಗಿ ಮನೆ, ಬದುಕು ಕಳೆದುಕೊಂಡು ನಿರಾಶ್ರಿತರಾಗಿರುವ ಜನರ ರಕ್ಷಣೆಗೆ ತಕ್ಷಣದ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಮಣಿಪುರ ಹಿಂಸಾಚಾರದ ಬಗ್ಗೆ ಎಸ್‌ಐಟಿ ತನಿಖೆಗೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಮೇ 08) ವಿಚಾರಣೆ ನಡೆಸುತ್ತಿದ್ದಂತೆ, ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ರಾಜ್ಯದಲ್ಲಿ ಹಿಂಸಾಚಾರದಿಂದಾಗಿ ಜೀವ ಮತ್ತು ಆಸ್ತಿಪಾಸ್ತಿ ತೊಂದರೆಗೊಳಗಾದವರಿಗೆ ರಕ್ಷಣೆ ಒದಗಿಸುವಂತೆ ಆಗ್ರಹಿಸಿದರು.
“ಸಾರ್ವಜನಿಕರು ಮತ್ತು ಅವರ ಆಸ್ತಿಪಾಸ್ತಿಯ ರಕ್ಷಣೆ ಹಾಗೂ ಮರುಸ್ಥಾಪನೆ, ಪರಿಸ್ಥಿತಿ ಯಥಾಸ್ಥಿತಿಗೆ ಮರಳುವ ಬಗ್ಗೆ ನಾವು ನಮ್ಮ ಕಾಳಜಿಯನ್ನು ಸ್ಪಷ್ಟಪಡಿಸಿದ್ದೇವೆ. ಇದೊಂದು ಮಾನವೀಯತೆಯ ಸಮಸ್ಯೆ. ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ನಿರಾಶ್ರಿತರಿಗೆ ಪರಿಹಾರ ಶಿಬಿರಗಳಲ್ಲಿ ಮೂಲ ಸೌಕರ್ಯಗಳು, ಆಹಾರ ಮತ್ತು ಔಷಧಿಗಳನ್ನು ಒದಗಿಸಲು ಸೂಕ್ತ ವ್ಯವಸ್ಥೆಗಳನ್ನು ಮಾಡುವ ಕ್ರಮಗಳನ್ನು ಕೇಂದ್ರ ಮತ್ತು ಮಣಿಪುರ ಸರ್ಕಾರ ಕೈಗೊಳ್ಳಬೇಕು. ವೈದ್ಯಕೀಯ ಆರೈಕೆಯ ಅಗತ್ಯವಿರುವವರನ್ನು ಸೇನೆ ಅಥವಾ ಇತರ ಸೂಕ್ತ ಆಸ್ಪತ್ರೆಗಳಿಗೆ ವರ್ಗಾಯಿಸಬೇಕು” ಎಂದು ಡಿ ವೈ ಚಂದ್ರಚೂಡ್ ತಿಳಿಸಿದರು. ಸರ್ಕಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ಗಲಭೆ ಲಾಭ ಪಡೆದ ವಿಮಾನಯಾನ ಸಂಸ್ಥೆಗಳು; ₹2 ಸಾವಿರ ಬೆಲೆಯ ಟಿಕೆಟ್ ₹25 ಸಾವಿರಕ್ಕೆ ಏರಿಕೆ
ಘರ್ಷಣೆಗೆ ಕಾರಣವಾದ ಮಣಿಪುರ ಹೈಕೋರ್ಟ್ ತೀರ್ಪಿನ ಬಗ್ಗೆ ತಿಳಿಸಿದ ಮುಖ್ಯ ನ್ಯಾಯಾಧೀಶರು, ಯಾವುದೇ ಒಂದು ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಎಂದು ಗೊತ್ತುಪಡಿಸುವ ಅಧಿಕಾರವನ್ನು ಹೊಂದಿರುವುದು ರಾಷ್ಟ್ರಪತಿಗಳೇ ಹೊರತು ಹೈಕೋರ್ಟ್ ಅಲ್ಲ ಎಂದರು.
ಅಲ್ಲದೆ ಇದೇ ಸಂದರ್ಭದಲ್ಲಿ ಈಗಾಗಲೇ ಸ್ಥಳಾಂತರಗೊಂಡ ಜನರ ಬಗ್ಗೆ, ಅವರ ಮುಂದಿನ ಜೀವನದ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದೀರಾ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕೇಳಿತು. ಇದಕ್ಕೆ ಉತ್ತರ ನೀಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 52 ಕಂಪನಿಗಳು ಮತ್ತು ಸೇನೆ/ಅಸ್ಸಾಂ ರೈಫಲ್ಸ್‌ನ 105 ತುಕಡಿಗಳನ್ನು ರಾಜ್ಯದಲ್ಲಿ ನಿಯೋಜಿಸಲಾಗಿದೆ. ರಾಜ್ಯವು ತನ್ನ ಭದ್ರತಾ ಸಲಹೆಗಾರರಾಗಿ ನಿವೃತ್ತ ಪೊಲೀಸ್ ಅಧಿಕಾರಿಯನ್ನು ನೇಮಿಸಿದೆ ಮತ್ತು ಕೇಂದ್ರವು ಮಣಿಪುರದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲು ಹಿರಿಯ ಅಧಿಕಾರಿಯನ್ನು ವಾಪಸ್ ಕಳುಹಿಸಿದೆ” ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಮೈತಿ ಜನಾಂಗಕ್ಕೆ ಪರಿಶಿಷ್ಟ ಸ್ಥಾನಮಾನದ ಬೇಡಿಕೆ ನೀಡುವುದನ್ನು ವಿರೋಧಿಸಿ ನಡೆದ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿತ್ತು. ಗುಡ್ಡಗಾಡು ಜಿಲ್ಲೆಯಾದ ಚುರಾಚಂದ್‌ಪುರದಿಂದ ರಾಜಧಾನಿ ಇಂಫಾಲ್‌ವರೆಗೆ ಮಣಿಪುರ ರಾಜ್ಯಾದ್ಯಂತ ಕುಕಿ ಬುಡಕಟ್ಟು ಜನಾಂಗ ಮತ್ತು ಬಹುಸಂಖ್ಯಾತ ಮೈತಿ ಸಮುದಾಯದ ನಡುವಿನ ಹಿಂಸಾಚಾರವು ಉತ್ತುಂಗಕ್ಕೇರಿದೆ. ಬುಡಕಟ್ಟು ಜನಾಂಗದ ಐಕ್ಯತೆಯ ಮೆರವಣಿಗೆಯಲ್ಲಿ ಎಂಟು ಜಿಲ್ಲೆಗಳು ಹಿಂಸಾಚಾರಕ್ಕೆ ಒಳಗಾದವು. ಇಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ.