ಪ್ರಚಾರದ ವೇಳೆ ಸುದೀಪ್ ಬಗ್ಗೆ ಮಾತನಾಡಿದ್ದ ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ಪರ ಪ್ರಚಾರಕ್ಕಳಿದವರು ಎಷ್ಟು ತಾಸಿನ ನಾಯಕರು ಎಂದ ಚೇತನ್
ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ನಟ ಕಿಚ್ಚ ಸುದೀಪ್ ಕೇವಲ ಮೂರು ತಾಸಿನ ನಾಯಕನಷ್ಟೇ ಎಂಬ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಆಕ್ಷೇಪ ವ್ಯಕ್ತಪಡಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಚೇತನ್ ಕುಮಾರ್, “ಸುದೀಪ್ ಅವರನ್ನು ‘3 ತಾಸಿನ ನಾಯಕನಷ್ಟೇ’ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಜಾರಕಿಹೊಳಿ ಅವರೇ ನಿಮ್ಮ ಪ್ರಕಾರ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುವ ಫಿಲ್ಮ್ ನಟರು ಎಷ್ಟು ತಾಸಿನ ನಾಯಕರು” ಎಂದು ಪ್ರಶ್ನೆ ಹಾಕಿದ್ದಾರೆ.
ಸೋಮವಾರ ಗುಂಡ್ಲುಪೇಟೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸತೀಶ್ ಜಾರಕಿಹೊಳಿ, “ಮೊನ್ನೆ ಸುದೀಪ್ ಕೂಡ ಇಲ್ಲಿ ಪ್ರಚಾರಕ್ಕೆ ಬಂದಿದ್ದರು. ನಾವೆಲ್ಲ ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿ ಸುದೀಪ್ ಅವರನ್ನು ನೋಡಬೇಕಿತ್ತು. ಆದರೆ, ಈಗ ಪುಕ್ಕಟ್ಟೆಯಾಗಿ ಬಂದು ಹೋಗಿದ್ದಾರೆ. ಅವರು ಅಳಲಿಕ್ಕೆ ದುಡ್ಡು ತೆಗೆದುಕೊಳ್ತಾರೆ. ನಗಲಿಕ್ಕೂ ದುಡ್ಡು ತೆಗೆದುಕೊಳ್ತಾರೆ. ಹೀಗಿರುವಾಗ ಅವರು ನಮ್ಮ (ಜನರ) ಕಷ್ಟಗಳನ್ನು ಯಾವಾಗ ನೋಡಲು ಸಾಧ್ಯ. ಅಂಥವರು ಕೇವಲ ಮೂರು ತಾಸಿನ ನಾಯಕರು ಮಾತ್ರ. ನಾವು ನಿರಂತರವಾಗಿ ನಿಮ್ಮ ಸೇವೆ ಮಾಡುವವರು. ಸುಮ್ಮನೆ ಯಾವುದೋ ಒಬ್ಬ ನಟ ಬಂದ ಕಣ್ಣೀರು ಹಾಕಿ ಹೋದರೆ ಅದು ಪರಿಹಾರ ಅಲ್ಲ” ಎಂದು ತಮ್ಮ ಪಕ್ಷದ ಪರ ಅಭ್ಯರ್ಥಿಗೆ ಮತ ಹಾಕುವಂತೆ ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಸುದೀಪ್ ಬಗ್ಗೆ ಮಾತನಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.