ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಬೆಳಗಾವಿ ನಗರದಲ್ಲಿ ನಡೆದ ಸಭೆಯಲ್ಲಿ ಕರಾಳ ದಿನಾಚರಣೆಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ದೀಪಾವಳಿ ಹಬ್ಬ ಮತ್ತು ಕರ್ನಾಟಕ ರಾಜ್ಯೋತ್ಸವ ನವೆಂಬರ್ 1ರಂದೇ ಬಂದಿರುವುದರಿಂದ ಅಂದು ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಿ, ನವೆಂಬರ್ 3ರಂದು ಮೆರವಣಿಗೆ ಆಯೋಜಿಸಬೇಕೆಂಬುದು ಕೆಲವು ಯುವಕ ಸಂಘಟನೆಗಳ ಮುಖಂಡರು ಒತ್ತಾಯವಾಗಿತ್ತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಹೋರಾಟಗಾರರು ಯಾವ ಕಾರಣಕ್ಕೂ ರಾಜ್ಯೋತ್ಸವದ ಮೆರವಣಿಗೆ ದಿನಾಂಕ ಮುಂದೂಡುವಂತಿಲ್ಲ. ಬೇಕಿದ್ದರೆ ಮೆರವಣಿಗೆ ಸಮಯ ವಿಸ್ತರಿಸಿ ಎಂದರು. ನಂತರ ಈ ಕುರಿತು ಚರ್ಚಿಸಿದ ನಂತರ, ನವೆಂಬರ್ 1ರಂದೇ ರಾಜ್ಯೋತ್ಸವದ ಭವ್ಯ ಮೆರವಣಿಗೆ ನಡೆಸುವ ನಿರ್ಧಾರವನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಕಟಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ವ್ಯಾಪಾರಕ್ಕೆಂದು ತಂದಿದ್ದ ₹1.50 ಲಕ್ಷ ಮೌಲ್ಯದ ಹಂದಿಗಳ ಕಳ್ಳತನ
“ದೀಪಾವಳಿ ಮತ್ತು ರಾಜ್ಯೋತ್ಸವ ಜತೆಯಾಗಿ ಬಂದಿದ್ದರಿಂದ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಗುವುದು. ವೀಕ್ಷಣೆಗಾಗಿ ಮಹಿಳೆಯರಿಗಾಗಿ ಪ್ರತ್ಯೇಕ ಗ್ಯಾಲರಿ ಮಾಡಲಾಗುವುದು. ಬೆಳಗಾವಿಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ಹೋರಾಡಿದ ಮಹನೀಯರ ಭಾವಚಿತ್ರಗಳನ್ನು ಪ್ರದರ್ಶಿಸಲಾಗುವುದು ಹಾಗೂ ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನಾಚರಣೆಗೆ ಅವಕಾಶವಿಲ್ಲ” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.