ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೆ ಅನುಸರಿಸುತ್ತಿರುವ ವಿಳಂಬ ನೀತಿ ಖಂಡಿಸಿ ಅಕ್ಟೋಬರ್ 16ರಂದು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡರು ಹೇಳಿದರು.
ಬಾಗಲಕೋಟೆ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ ಅವರು, “ಜಣಗಣತಿ ನೆಪವೊಡ್ಡಿ ಒಳಮೀಸಲಾತಿ ವಿಳಂಬ ಮಾಡಲಾಗುತ್ತಿದೆ” ಎಂದು ದೂರಿದರು.
“ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಒಳಮೀಸಲಾತಿ ಜಾರಿಗೊಳಿಸುವುದಾಗಿ ಗ್ಯಾರಂಟಿ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ಕೂಡಾ ಒಳಮೀಸಲಾತಿ ಜಾರಿ ನಿರ್ಧಾರ ರಾಜ್ಯ ಸರ್ಕಾರಗಳಿಗೆ ಸೇರಿದ್ದೆಂದು ಹೇಳಿದೆ. ಅದನ್ನು ಜಾರಿಗೊಳಿಸದೆ ನ್ಯಾಯಾಂಗ ನಿಂದನೆ ಮಾಡಲಾಗುತ್ತಿದೆ” ಎಂದು ಟೀಕಿಸಿದರು.
“ಸದಾಶಿವ ಆಯೋಗ ವರದಿ 2011ರ ಜನಗಣತಿ ಸಂಖ್ಯಾಧಾರಗಳೊಂದಿಗೆ ಪುನರ್ ಪರಿಶೀಲಿಸಿ ವರದಿ ಕೊಡಲು ರಚಿಸಿದ್ದ ಸಂಪುಟ ಅನುಮತಿ ಅತ್ಯಂತ ವೈಜ್ಞಾನಿಕ ವರದಿ ನೀಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನೀಡಿದ್ದ ಈ ವರದಿಯನ್ನು ಮಾನ್ಯಗೊಳಿಸಿ ಒಳಮೀಸಲಾತಿ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.
“ಒಳಮೀಸಲಾತಿ ಜಾರಿಗೊಳಿಸುವವರೆಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬಾರದು. ಇದರಿಂದ ಹಲವರಿಗೆ ಅನ್ಯಾಯವಾಗುತ್ತದೆ. ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಸಚಿವರಾದ ಆರ್ ಬಿ ತಿಮ್ಮಾಪುರ, ಕೆ ಎಚ್ ಮುನಿಯಪ್ಪ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಆದರೂ, ಚಿಂತನೆ ಮಾಡಿಲ್ಲ. ಸಚಿವರು, ಸರ್ಕಾರದ ಮೇಲೆ ಒತ್ತಡ ಹಾಕಬೇಕು” ಎಂದು ಒತ್ತಾಯಿಸಿದರು.
“ಒಳಮೀಸಲಾತಿ ಜಾರಿಗೊಳಿಸದಿದ್ದರೆ, ಹೋರಾಟವನ್ನು ತೀವ್ರಗೊಳಿಸಲಾಗುವುದು. ಜತೆಗೆ ನ್ಯಾಯಾಂಗ ನಿಂದನೆಯ ಮೊಕದ್ದಮೆಯನ್ನೂ ಹೂಡಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಯುವ ಜನತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು: ವಾರ್ತಾಧಿಕಾರಿ ಮಂಜುನಾಥ್
ಸುನಿಲ್ ಕಂಬೋಗಿ ಮಾತನಾಡಿ, “ದಲಿತ ಶಾಸಕರೂ ಒಳಮೀಸಲಾತಿ ಜಾರಿಗೆ ಧ್ವನಿ ಎತ್ತಬೇಕು. ಸಮುದಾಯದ ಅನುಕೂಲಕ್ಕಾಗಿ ಒತ್ತಡ ತರಬೇಕು” ಎಂದು ಆಗ್ರಹಿಸಿದರು.
ಹನಮಂತ ಚಿಮ್ಮಲಗಿ, ರಾಯಪ್ಪ ಬೀರಕಬ್ಬಿ, ಕಾಂತಿಚಂದ್ರ ಜ್ಯೋತಿ, ಅರುಣ ಲೋಕಾಪುರ, ಸಿದ್ದು ಮಾದರ ಇದ್ದರು.