ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಲು ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಹೈ ವೊಲ್ಟೋಜ್ ಸಭೆ ನಡೆಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಬಸವಕಲ್ಯಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಚುನಾವಣಾ ಬಾಂಡ್ ವಿಚಾರದಲ್ಲಿ ಪ್ರಧಾನಿ ರಾಜೀನಾಮೆ ಕೊಡಬೇಕೆಂಬ ಕೂಗಿದೆ. ಆದಕಾರಣ ಮೋದಿ ಅವರನ್ನು ಕೆಳಗಿಳಿಸಿ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಧಾನಿ ಮಾಡಲು ಚಿಂತನೆ ನಡೆದಿದೆ” ಎಂದು ಸ್ಫೋಟಕ ಸಂಗತಿ ಹೇಳಿದರು.
ಸತೀಶ ಜಾರಕಿಹೊಳಿ ವಿಚಾರವಾಗಿ ಮಾತನಾಡಿ, “ಮೈಸೂರಿನಲ್ಲಿ ಸಚಿವ ಸತೀಶ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಇತರೆ ಮುಖಂಡರು ಸಭೆ ನಡೆಸಿರುವುದರಲ್ಲಿ ವಿಶೇಷತೆ ಇಲ್ಲ. ಮೋದಿಯವರನ್ನು ಆರ್‌ಎಸ್‌ಎಸ್ ಬದಲಿಸಲು ಸಭೆ ನಡೆಸಿರುವ ಬಗ್ಗೆ ಮಾತನಾಡಿ” ಎಂದು ಸುದ್ದಿಗಾರರಿಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಮ್ಮು- ಕಾಶ್ಮೀರ ; ಚುನಾಯಿತ ಸರ್ಕಾರ ಬಂದರೂ ಉಪರಾಜ್ಯಪಾಲರೇ ಸರ್ವಾಧಿಕಾರಿ!
ಜಾತಿ ಗಣತಿ ವರದಿ ವಿಚಾರವಾಗಿ ಪ್ರತಿಕ್ರಿಯಿಸಿ, “ಯಾವುದೇ ವಿಷಯಕ್ಕೆ ಯಾವಾಗಲೂ ಪರ ವಿರೋಧ ಇದ್ದೇ ಇರುತ್ತದೆ. ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸುತ್ತಾರೆ. ಅದು ಅವರ ಕನಸು. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ” ಎಂದರು.
ಮುಡಾ ವಿಚಾರವಾಗಿ ಮಾತನಾಡಿ, “ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರೆ. ಸಿಎಂ ಪತ್ನಿ ಪರಿಹಾರದ ರೂಪದಲ್ಲಿ ನಿವೇಶನ ಪಡೆದಿದ್ದಾರೆ. ಯಾವುದೇ ವಿಶೇಷ ಕೆಟಗರಿಯಲ್ಲಿ ಪಡೆದಿಲ್ಲ. ಹೀಗಾಗಿ ಇದು ಕಾನೂನುಬಾಹಿರವಲ್ಲ” ಎಂದು ಹೇಳಿದರು.
“ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಬಿಜೆಪಿಯವರು ಸುಳ್ಳು ಹೇಳಿ, ವಾಮ ಮಾರ್ಗದಲ್ಲಿ ಹರಿಯಾಣದಲ್ಲಿ ಗೆಲುವು ಸಾಧಿಸಿದ್ದಾರೆ” ಎಂದು ಆರೋಪಿಸಿದರು.