ರತನ್ ಟಾಟಾ | ಬಂಡವಾಳಶಾಹಿಗಳ ರತ್ನ – ಸಮಾಜವಾದಿ ಆಶಯಗಳ ದುಃಸ್ವಪ್ನ?

Date:

Advertisements

ರತನ್ ಟಾಟಾ ಅವರು ಭಾರತದ ಅಂದಿನ ಬಿರ್ಲಾ ಹಾಗೂ ಇನ್ನಿತರ ದೊಡ್ಡ ವ್ಯಾಪಾರಿಗಳಂತೆ ಬ್ರಿಟಿಷ್ ವಸಹಾತುಶಾಹಿಗಳ ಆಶ್ರಯ ಹಾಗೂ ಸಹಕಾರಗಳಿಂದ ಬಂಡವಾಳಶಾಹಿ ಉದ್ಯಮಿಯಾಗಿ ಬೆಳೆದವರು. ಸ್ವಾತಂತ್ರ್ಯ ನಂತರದಲ್ಲಿ ಮಿಶ್ರ ಆರ್ಥಿಕತೆಯ ಹೆಸರಿನಲ್ಲಿ ಪ್ರಭುತ್ವ ಬಂಡವಾಳ – ಅಂದರೆ ಜನರ ತೆರಿಗೆ, ಹೂಡಿಕೆ ಮತ್ತು ಉಳಿತಾಯಗಳಿಂದ ಸರ್ಕಾರ ಒದಗಿಸಿಕೊಟ್ಟ ಬಂಡವಾಳ – ಮತ್ತು ಮಾರುಕಟ್ಟೆಯನ್ನು ಆಧರಿಸಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡವರು.

1975ರ ತುರ್ತು ಪರಿಸ್ಥಿತಿಯನ್ನು ಭಾರತದ ಇತರ ದೊಡ್ಡ ಬಂಡವಾಳಶಾಹಿಗಳಂತೆ ಕಾರ್ಮಿಕರಲ್ಲಿ ಶಿಸ್ತು ತರಲು, ಮುಷ್ಕರಗಳನ್ನು ನಿಷೇಧಿಸಲು ಅತ್ಯಗತ್ಯ ಎಂದು ಟಾಟಾ ಕೂಡ ಸ್ವಾಗತಿಸಿದ್ದರು. ತುರ್ತು ಸ್ಥಿತಿಯ ಉತ್ತುಂಗದಲ್ಲಿ ಇಂದಿರಾ ಗಾಂಧಿಯವರು ಚಾಚೂ ತಪ್ಪದೆ ಅನುಸರಿಸಿದ ಕಾರ್ಮಿಕ ವಿರೋಧಿ, ಸಂವಿಧಾನದ ಸಮಾಜವಾದಿ ಆಶಯ ವಿರೋಧಿ ನೀತಿಗಳೆಲ್ಲ ಟಾಟಾ ಅವರು, 1974ರಲ್ಲಿ ಇಂದಿರಾ ಗಾಂಧಿಗೆ ನೀಡಿದ Tata Memorandumನ ಸೂಚನೆಗಳೇ ಆಗಿದ್ದವು.

1980ರಲ್ಲಿ ಇಂದಿರಾ ಗಾಂಧಿ ಎರಡನೇ ಬಾರಿಗೆ ಪ್ರಧಾನಿಯಾದ ನಂತರ ಅನುಸರಿಸಿದ್ದು ಇದೇ ಬಂಡವಾಳಶಾಹಿ ಕ್ರೋನಿ ಕ್ಯಾಪಿಟಲಿಸ್ಟ್ ನೀತಿಗಳನ್ನೇ. 1991ರಲ್ಲಿ ಭಾರತದ ಆರ್ಥಿಕ ಸಾರ್ವಭೌಮತ್ವವನ್ನು ರಾಜಿ ಮಾಡಿಕೊಂಡು ಕಾಂಗ್ರೆಸ್ – ಬಿಜೆಪಿಗಳು ಜಾರಿ ಮಾಡಿದ, ಕೇವಲ ಭಾರತದ ದೊಡ್ಡ ಬಂಡವಾಳಶಾಹಿಗಳಿಗೆ ಹೆಚ್ಚು ಲಾಭದಾಯಕವಾದ ‘ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣ’ (ಎಲ್‌ಪಿಜಿ) ನೀತಿಗಳ ಹಿಂದೆ ಇದ್ದದ್ದು ಕೂಡ ಇದೇ ಟಾಟಾ ನೇತೃತ್ವದ ದೊಡ್ಡ ಬಂಡವಾಳಶಾಹಿಗಳ Bombay Club (ಬಾಂಬೆ ಕ್ಲಬ್).

Advertisements

2002ರಲ್ಲಿ ಮೋದಿ ನೇತೃತ್ವದಲ್ಲಿ ಗುಜರಾತ್ ನರಮೇಧ ನಡೆದಾಗ ಪ್ರಾರಂಭದಲ್ಲಿ ಭಾರತದ ಬಹುಪಾಲು ದೊಡ್ಡ ಬಂಡವಾಳಿಗರು ಮೋದಿಯನ್ನು ತೀವ್ರವಾಗಿ ವಿಮರ್ಶಿಸಿದರು. ಗುಜರಾತ್‌ನಲ್ಲಿ ಹೂಡಿಕೆ ಬಹಿಷ್ಕಾರ ಹಾಕಿದ್ದರು. ಆದರೆ, 2008ರಲ್ಲಿ ಗುಜರಾತ್‌ನ ಮೋದಿ ಸರ್ಕಾರ ಯಾವ ರಾಜ್ಯಗಳು ಕೊಡದಷ್ಟು ಭೂಮಿ, ಬಡ್ಡಿರಹಿತ ಬೃಹತ್ ಸಾಲ ಮತ್ತು ಲಾಭದ ಅವಕಾಶಗಳನ್ನು ಕೊಟ್ಟಿತು. ಆ ತಕ್ಷಣವೇ, ಹೂಡಿಕೆ ಬಹಿಷ್ಕಾರವನ್ನು ಮುರಿದು ನರಮೇಧದ ಗುಜರಾತ್‌ನಲ್ಲಿ ನ್ಯಾನೋ ಕಾರು ಕಾರ್ಖಾನೆ ತೆರೆದ ಮೊದಲಿಗರು ರತನ್ ಟಾಟಾ.

modi nano tata

ಅಷ್ಟು ಮಾತ್ರವಲ್ಲ, ನರಮೇಧದ ಮೋದಿಯನ್ನು ‘ಭಾರತದ ಅಭಿವೃದ್ಧಿ ಪುರುಷ’ ಎಂದು ಹಾಡಿ ಹೊಗಳಿ ಮೋದಿ ಮತ್ತು ನವಉದಾರವಾದಿ ಹಿಂದುತ್ವವು ದೆಹಲಿ ಪ್ರವೇಶಿಸಲು ಹಾದಿಯನ್ನು ಸುಗಮಗೊಳಿಸಿದವರಲ್ಲಿ ಆದಾನಿಯನ್ನು ಬಿಟ್ಟರೆ ಬಹುದೊಡ್ಡ ಪಾತ್ರ ರತನ್ ಟಾಟಾ ಅವರಿಗಿದೆ. ಅಲ್ಲದೆ, ಹಿಂದುತ್ವವಾದಿಗಳು ಸಂವಿಧಾನ ವಿರೋಧಿಯಾಗಿ ಅಸ್ಸಾಂನಲ್ಲಿ ಜಾರಿ ಮಾಡುತ್ತಿರುವ NRC ಯೋಜನೆಗೂ ಟಾಟಾ ಅವರದ್ದೇ ತಾಂತ್ರಿಕ ಮತ್ತು ಡಿಜಿಟಲ್ ಬೆನ್ನೆಲುಬು ಕೂಡ ಇದೆ.

ಇತ್ತೀಚೆಗಷ್ಟೇ, ಭಾರೀ ಚರ್ಚೆಗೆ ಕಾರಣವಾಗಿದ್ದ ಚುನಾವಣಾ ಬಾಂಡ್ ಹಗರಣದಲ್ಲಿ ಬಿಜೆಪಿಗೆ ಅತಿ ಹೆಚ್ಚು ದೇಣಿಗೆ ಕೊಟ್ಟು, ಅತಿ ಹೆಚ್ಚು ಪ್ರತ್ಯುಪಕಾರವನ್ನು ಪಡೆದವರಲ್ಲಿಯೂ ಟಾಟಾ ಉದ್ಯಮವು ಮುಂಚೂಣಿಯಲ್ಲಿದೆ.

tata 2

ಇದಲ್ಲದೆ, ಇತರ ಕೆಲವು ಉದ್ಯಮಿಗಳಂತೆ ಅವರೂ ಶಿಕ್ಷಣ ಸಂಸ್ಥೆಗಳನ್ನೂ, ಸ್ಕಾಲರ್‌ಶಿಪ್‌ಗಳನ್ನೂ, ಸಿಎಸ್‌ಆರ್ (Corporate Social Responsibility)ನ ಹೆಸರಲ್ಲಿ ಕೆಲವು ಜನೋಪಯೋಗಿ ಯೋಜನೆಗಳನ್ನು ಒದಗಿಸಿದ್ದಾರೆ. ಆದರೆ, ಈ ಸಿಎಸ್‌ಆರ್ ಎಂಬುದು ವಾಸ್ತವದಲ್ಲಿ ಬಂಡವಾಳಶಾಹಿ ಉದ್ಯಮಗಳು ತಮ್ಮ ಶೋಷಣೆಯ ಕ್ರೂರತೆಯನ್ನು ಮರೆಮಾಚಲು ಬಳಸುವ ‘ವೇಲ್ವೆಟ್ ಹೊದಿಕೆಗಳು’ ಎಂಬುದು ಈಗ ಎಲ್ಲರೂ ಬಲ್ಲ ಸಂಗತಿ.

ಈ ವರದಿ ಓದಿದ್ದೀರಾ?: ʼಈ ದಿನʼ ವಿಶ್ಲೇಷಣೆ | ಹರಿಯಾಣ ಚುನಾವಣೆ ಕಾಂಗ್ರೆಸ್ ಕೈ ತಪ್ಪಿದ್ದೇಕೆ?

ಟಾಟಾ ಅವರು ಸಾಲು ಮರಗಳನ್ನು ಮತ್ತು ಕುಡಿಯುವ ನೀರಿನ ಅರವತ್ತಿಗೆಗಳನ್ನು ಕಟ್ಟಿಸಿದ್ದಾರೆ. ಅದೇ ಸಮಯದಲ್ಲಿ ಖನಿಜ ಸಂಪತ್ತನ್ನು ಲೂಟಿ ಮಾಡಲು ದೇಶದ ಕಾಡುಗಳನ್ನು ಕಡಿಯುತ್ತಿದ್ದಾರೆ. ಜೀವಜಾಲವನ್ನು ಬತ್ತಿಸಿದ್ದಾರೆ. ಸ್ವಾಭಿಮಾನಿ ರೈತಾಪಿ ಆದಿವಾಸಿಗಳ ಬದುಕನ್ನು ಸರ್ವನಾಶ ಮಾಡುತ್ತಿದ್ದಾರೆ. ಇದನ್ನು ಕೇವಲ ಟಾಟಾ ಮಾತ್ರ ಮಾಡುತ್ತಿಲ್ಲ. ಎಲ್ಲ ಲಾಭಕೋರ ಉದ್ಯಮಿಗಳಂತೆ ಟಾಟಾ ಕೂಡ ಮಾಡುತ್ತಿದ್ದಾರೆ.

ಆದಾಗ್ಯೂ, ರತನ್ ಟಾಟಾ ನಿಧನದ ನಂತರ, ಅವರು ಬಂಡವಾಳಶಾಹಿ ಉದ್ಯಮಿಯೇ ಅಲ್ಲ. ಅವರು ಜನೋದ್ಯಮಿ. ವಸಾಹತುಶಾಹಿ ವಿರೋಧಿ ದೇಶಪ್ರೇಮಿ, ಕೋಮುವಾದ ವಿರೋಧಿ – ಎಂದೆಲ್ಲ ಇಲ್ಲಸಲ್ಲದ, ಕುರುಡು ಹೊಗಳಿಕೆಗಳು ಮಾಧ್ಯಮವನ್ನು ತುಂಬಿಕೊಳ್ಳುತ್ತಿವೆ.

tata1

ಸತ್ತವರ ಬಗ್ಗೆ ಸುಳ್ಳು ಹೇಳಬಾರದಲ್ಲವೇ? ಸಾವಿನ ಸಂದರ್ಭವನ್ನು ಕೂಡ ಬಂಡವಾಳಶಾಹಿ ಭಾರತ ಮತ್ತು ಮಾಧ್ಯಮಗಳು ಬಂಡವಾಳಶಾಹಿ ಶೋಷಣೆಯನ್ನು ಮರೆಸಲು ಅಥವಾ ವೈಭವೀಕರಿಸಲು ಮತ್ತು ಬಲಿಯಾದ ಶೋಷಿತ ಭಾರತದ ನೆನಪುಗಳನ್ನು ಕಡೆಗಣಿಸಲು ಬಳಸಿಕೊಳ್ಳುತ್ತಿರುವ ಸಮಯದಲ್ಲಿ ಸತ್ಯವನ್ನು ನೆನಪಿಸಬೇಕಲ್ಲವೇ? ಶೋಷಿತ ಭಾರತದ ಈ ಪುಟ್ಟ ಟಿಪ್ಪಣಿ ಬರೆಯಬೇಕೆನ್ನಿಸಿತು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶಿವಸುಂದರ್
ಶಿವಸುಂದರ್
ಚಿಂತಕ, ಬರಹಗಾರ. ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಹುಟ್ಟಿದ್ದು 1967 ಜನವರಿ 4ರಂದು. ಗೌರಿ ಲಂಕೇಶ್‌ ವಾರಪತ್ರಿಕೆಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಇವರು ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಚಾರ್ವಾಕ, ಖೈರ್ಲಾಂಜಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸಮಕಾಲೀನ- ವಿಡಿಯೋ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X