ಜೋಧಪುರದ 51 ವರ್ಷದ ಮಹಿಳೆಯೊಬ್ಬರು ಬುಧವಾರ ಅಹಮದಾಬಾದ್ ಆಸ್ಪತ್ರೆಯಲ್ಲಿ ಕಾಂಗೋ ಜ್ವರದಿಂದ ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ರಾಜಸ್ಥಾನದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ರಾಜಸ್ಥಾನದಲ್ಲಿ ಕಾಂಗೋ ವೈರಸ್ ತಡೆಗಟ್ಟಲು ಅಗತ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮಹಿಳೆಗೆ ಕಾಂಗೋ ಜ್ವರ ಇರುವುದು ದೃಢಪಟ್ಟಿದೆ. ಮಹಿಳೆ ಅಹಮದಾಬಾದ್‌ನ ಎನ್‌ಎಚ್‌ಎಲ್ ಮುನ್ಸಿಪಲ್ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪೀಡಿತ ಪ್ರದೇಶಕ್ಕೆ ಕ್ಷಿಪ್ರ ಸ್ಪಂದನಾ ತಂಡವನ್ನು ಕಳುಹಿಸುವ ಮೂಲಕ ಸೋಂಕನ್ನು ತಡೆಗಟ್ಟಲು ಜೋಧ್‌ಪುರದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಈ ಪ್ರದೇಶದಲ್ಲಿ ಶಂಕಿತ, ರೋಗ ಲಕ್ಷಣಗಳು ಇರುವವರು ಕಂಡುಬಂದರೆ ಪ್ರತ್ಯೇಕವಾಗಿ ಇರಿಸಲು ತಿಳಿಸಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ.ರವಿ ಪ್ರಕಾಶ್ ಮಾಥೂರ್ ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಗುಬ್ಬಿ | ಶೀತ, ಕೆಮ್ಮು, ಜ್ವರ ಹೆಚ್ಚಳ ತಂದ ಆತಂಕ : ಹೊರ ರೋಗಿಗಳ ಸಂಖ್ಯೆ ಹೆಚ್ಚಳ
ಕಾಂಗೋ ಜ್ವರವು ಝೂನೋಟಿಕ್ ವೈರಲ್ ಕಾಯಿಲೆಯಾಗಿದ್ದು, ಇದು ಉಣ್ಣಿ (Tick) ಕಡಿತದಿಂದ ಉಂಟಾಗುತ್ತದೆ. ಆದ್ದರಿಂದ ಪಶು ಸಂಗೋಪನಾ ಇಲಾಖೆ ಈ ರೋಗ ತಡೆಗಟ್ಟಲು ಹಾಗೂ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೋರಲಾಗಿದೆ ಎಂದು ಮಾಥುರ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಈ ರೋಗವನ್ನು ತಡೆಗಟ್ಟಲು, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು, ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಜನರಿಗೆ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಯಾವುದೇ ವ್ಯಕ್ತಿಗೆ ಕಾಂಗೋ ಜ್ವರದ ಲಕ್ಷಣಗಳು ಕಂಡುಬಂದರೆ, ತಕ್ಷಣವೇ ಅವರನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದು ಎಲ್ಲಾ ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ವೈದ್ಯಕೀಯ ಇಲಾಖೆಗೂ ಈ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಈ ನಡುವೆ ಆರ್‌ಯುಎಚ್‌ಎಸ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದ ನಾಗೌರ್‌ನ 20 ವರ್ಷದ ಯುವಕನ ಮಂಕಿಪಾಕ್ಸ್ ಪರೀಕ್ಷೆಯ ವರದಿಯು ನೆಗೆಟಿವ್ ಬಂದಿದೆ. ಯುವಕ ದುಬೈನಿಂದ ಜೈಪುರಕ್ಕೆ ಬಂದಿದ್ದ. ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದ ಕಾರಣ ಆತನ ಪರೀಕ್ಷೆ ಮಾಡಲಾಗಿತ್ತು.
