187 ಕೋಟಿ ಖರ್ಚು ಮಾಡಿ, ನಾಲ್ಕು ವರ್ಷ ನಾಡಿನ ಶಿಕ್ಷಕರು ರಾಜ್ಯದಾದ್ಯಂತ ಅಲೆದಾಡಿ ತಯಾರಿಸಿದ ಕಾಂತರಾಜ ಆಯೋಗದ ವರದಿ ಎಲ್ಲಿದೆ, ಏನಾಯ್ತು? ಈ ಬಗ್ಗೆ ಆಯೋಗ ಉತ್ತರಿಸಬೇಕಲ್ಲವೇ?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಜಾತಿ ಜನಗಣತಿ ವರದಿ ಬಿಡುಗಡೆಗೆ ಸಿದ್ಧವಾಗಿದೆ. ಅದನ್ನು ಅಂಗೀಕರಿಸಲು ನಮ್ಮ ಪಕ್ಷ ಮತ್ತು ಸರ್ಕಾರ ಕೂಡಾ ಬದ್ಧವಾಗಿದೆ. ನಮ್ಮ ಪಕ್ಷದ ಎಲ್ಲ ನಾಯಕರು ತಾತ್ವಿಕವಾಗಿ ಜಾತಿಗಣತಿಯನ್ನು ಒಪ್ಪಿಕೊಂಡಿದ್ದಾರೆ. ಯಾರ ವಿರೋಧವೂ ಇಲ್ಲ. ಮುಂದಿನ ಸಚಿವ ಸಂಪುಟದ ಮುಂದೆ ಇಟ್ಟು ಚರ್ಚಿಸಲಾಗುವುದು’ ಎಂದಿದ್ದಾರೆ.
ಮುಖ್ಯಮಂತ್ರಿಗಳ ಮಾತಿನಲ್ಲಿ ಜಾತಿ ಜನಗಣತಿ ವರದಿ ಬಗ್ಗೆ ಒಲವೂ ಇದೆ, ಸಂಪುಟದ ಮುಂದಿಟ್ಟು ಚರ್ಚಿಸಲಾಗುವುದು ಎಂಬ ಮುಂದೂಡಿಕೆ ಮನೋಭಾವವೂ ಎದ್ದು ಕಾಣುತ್ತಿದೆ.
ಹಾಗೆಯೇ ಮುಡಾ ಹಗರಣದಲ್ಲಿ ಹೈಕೋರ್ಟ್ ನೀಡಿದ ತೀರ್ಪಿನ ನಂತರ, ಜಾತಿ ಜನಗಣತಿಯನ್ನು ಮುನ್ನೆಲೆಗೆ ತಂದಿರುವುದು; ಸಾರ್ವಜನಿಕ ಸಮಾರಂಭಗಳನ್ನು ಹಮ್ಮಿಕೊಂಡು, ಜನತಾ ನ್ಯಾಯಾಲಯದ ತೀರ್ಪಿಗೆ ತಲೆಬಾಗುವ ಮಾತುಗಳನ್ನು ಆಡುತ್ತಿರುವುದು ಹಲವು ಅನುಮಾನಗಳಿಗೂ ಎಡೆ ಮಾಡಿಕೊಡುತ್ತಿದೆ.
ಅಸಲಿಗೆ, ರಾಜ್ಯದ ಸಮಸ್ತ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಒಲವು ತೋರಿದ್ದು ಮತ್ತು ಆದೇಶ ನೀಡಿದ್ದು, 2014ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ. ನ್ಯಾಯವಾದಿ ಕಾಂತರಾಜ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದು ಕೂಡ ಸಿದ್ದರಾಮಯ್ಯನವರೇ. ಕಾಂತರಾಜ ನೇತೃತ್ವದ ಸಮಿತಿಗೆ ಸಮೀಕ್ಷೆ ನಡೆಸಲು 187 ಕೋಟಿ ರೂಪಾಯಿಗಳನ್ನು ಕೊಟ್ಟಿದ್ದು ಕೂಡ ಸಿದ್ದರಾಮಯ್ಯನವರೇ.
2014ರಿಂದ 2018ರವರೆಗೆ ಸಮೀಕ್ಷೆ ನಡೆದು ವರದಿ ಸಿದ್ಧವಾದಾಗ, ಸರ್ಕಾರಕ್ಕೆ ಸಲ್ಲಿಸಬೇಕು ಎಂದಾಗ, ಆಯೋಗದ ಅಧ್ಯಕ್ಷರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮುಂದಾಗಿ, ‘2018ರಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದರೂ ಅಂಕಿಅಂಶಗಳ ಪರಿಶೀಲನಾ ಕಾರ್ಯ ಪೂರ್ಣಗೊಳ್ಳದೆ ಇದ್ದ ಕಾರಣ ಆ ಅವಧಿಯಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ’ ಎಂದಿದ್ದೂ ಇದೆ.
2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿತ್ತು. ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದರು. ಆ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷರು ಅಂಕಿಅಂಶಗಳ ಪರಿಶೀಲನಾ ಕಾರ್ಯ ಪೂರ್ಣಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸುವ ಅವಕಾಶವಿತ್ತು. ಸಮೀಕ್ಷೆ ನಡೆಸಲು ಒಲವು ತೋರಿದ ಕಾಂಗ್ರೆಸ್ ಕೂಡ, ಸರ್ಕಾರದ ಭಾಗವಾಗಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜಮ್ಮು- ಕಾಶ್ಮೀರ ; ಚುನಾಯಿತ ಸರ್ಕಾರ ಬಂದರೂ ಉಪರಾಜ್ಯಪಾಲರೇ ಸರ್ವಾಧಿಕಾರಿ!
ಆದರೆ ಆಯೋಗದ ಅಧ್ಯಕ್ಷರಾದ ಕಾಂತರಾಜ್, ‘ವರದಿ ಸಲ್ಲಿಸಲು ಹೋದೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತೆಗೆದುಕೊಳ್ಳಲಿಲ್ಲ’ ಎಂದು ಹೇಳಿದ್ದು, ಸುದ್ದಿ ಮಾಧ್ಯಮಗಳಲ್ಲೂ ವರದಿಯಾಯಿತು. ಅದೇ ಸಮಯಕ್ಕೆ ಸರ್ಕಾರವೂ ಬಿದ್ದುಹೋಯಿತು.
ಇದಾದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿತು. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು. ಇವರ ನಂತರ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾದರು. ಆಗಲೂ ಆಯೋಗದ ಅಧ್ಯಕ್ಷ ಕಾಂತರಾಜ್, ‘ಬಸವರಾಜ ಬೊಮ್ಮಾಯಿಯವರಿಗೆ ವರದಿ ಕೊಡಲು ಹೋದೆ, ಸ್ವೀಕರಿಸಲಿಲ್ಲ’ ಎಂದರು.
ಅದೇ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷರಾದ ಕಾಂತರಾಜರೇ ಮತ್ತೊಂದು ಮಹತ್ವದ ಸಂಗತಿಯನ್ನೂ ಹೊರಗೆಡವಿದರು. ಅದೇನೆಂದರೆ, ‘ವರದಿಗೆ ಇಬ್ಬರು ಸದಸ್ಯರು ಸಹಿ ಹಾಕಿರಲಿಲ್ಲ. ಮೆಂಬರ್ ಸೆಕ್ರಟರಿ ಕೂಡ ಸಹಿ ಮಾಡಿರಲಿಲ್ಲ’ ಎಂದು.
ಅಂತಿಮ ವರದಿಗೆ ಇಬ್ಬರು ಸದಸ್ಯರು ಸಹಿ ಹಾಕಿರಲಿಲ್ಲ ಎಂದು ಅವರೇ ಹೇಳುತ್ತಾರೆ. ಮತ್ತು ಇಬ್ಬರು ಮುಖ್ಯಮಂತ್ರಿಗಳಿಗೆ ಕೊಡಲು ಹೋಗಿದ್ದೆ, ಅವರು ಸ್ವೀಕರಿಸಲಿಲ್ಲ ಎಂದು ಕೂಡ ಹೇಳುತ್ತಾರೆ.
ಅಂದರೆ, ಅಧ್ಯಕ್ಷ ಕಾಂತರಾಜರ ಮಾತುಗಳು ಗೊಂದಲಮಯವಾಗಿವೆ. ಇಬ್ಬರು ಸದಸ್ಯರು ಮತ್ತು ಮೆಂಬರ್ ಸೆಕ್ರಟರಿ ಸಹಿ ಮಾಡಿಲ್ಲವೆಂದರೆ, ಆ ವರದಿ ತಾಂತ್ರಿಕವಾಗಿ ಸರ್ಕಾರಕ್ಕೆ ಕೊಡಲು ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಗೊತ್ತಿದ್ದೂ, ಕೊಡಲು ಹೋಗಿದ್ದು ಏಕೆ?
ಕಾಂತರಾಜರ ಅವಧಿ ಮುಗಿದು ಜಯಪ್ರಕಾಶ್ ಹೆಗಡೆಯವರು ಆಯೋಗದ ಅಧ್ಯಕ್ಷರಾದ ಮೇಲೆ, ಜಾತಿ ಜನಗಣತಿ ವರದಿ ಬಗ್ಗೆ ಕಾಂಗ್ರೆಸ್ ಕೂಡ ಒತ್ತಾಯಿಸಲಿಲ್ಲ, ಬಿಜೆಪಿಗೂ ಅದು ಬೇಕಿರಲಿಲ್ಲ. ಮೂರೂ ಪಕ್ಷಗಳು ಮಾತನಾಡಲಿಲ್ಲ. 2023ರಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ, ಅಧಿಕಾರಕ್ಕೇರಿದಾಗ, ಸಿದ್ದರಾಮಯ್ಯನವರು ಮತ್ತೆ ಮುಖ್ಯಮಂತ್ರಿಗಳಾದಾಗ, ‘ಜಾತಿ ಜನಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಲು ಸಿದ್ಧ’ ಎಂದರು.
ಏತನ್ಮಧ್ಯೆ, ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆಯವರು, ‘ಸಮೀಕ್ಷೆಯ ದತ್ತಾಂಶಗಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿ ಸೀಲ್ ಮಾಡಲಾಗಿದೆ’ ಎಂಬ ವಿಷಯವನ್ನು ಬಹಿರಂಗಗೊಳಿಸಿದರು. ಸಿದ್ದರಾಮಯ್ಯನವರ ಸರ್ಕಾರ ಆಯೋಗಕ್ಕೆ ಮೆಂಬರ್ ಸೆಕ್ರಟರಿಯನ್ನಾಗಿ ದಯಾನಂದ ಎಂಬ ಅಧಿಕಾರಿಯನ್ನು ನಿಯೋಜಿಸಿತು. ‘ದಯಾನಂದರ ಸಮ್ಮುಖದಲ್ಲಿ ಸೀಲ್ ಮಾಡಿದ ಪೆಟ್ಟಿಗೆ ತೆರೆದು ನೋಡಿದಾಗ, ಅಲ್ಲಿ ವರದಿ ಇರಲಿಲ್ಲ. ಸಮೀಕ್ಷೆಯ ದತ್ತಾಂಶವನ್ನು ಇಟ್ಟುಕೊಂಡು ವರದಿ ತಯಾರಿಸಲಾಯಿತು’ ಎಂದು ಜಯಪ್ರಕಾಶ್ ಹೆಗಡೆ ಹೇಳಿದರು.
ಅಂದಮೇಲೆ, ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿಯವರಿಗೆ ಕೊಡಲು ಹೋಗಿದ್ದು ಯಾವ ವರದಿಯನ್ನು? ಕಾಂತರಾಜರ ಪ್ರಕಾರ ವರದಿ ಇತ್ತು. ಸೀಲ್ ಒಡೆದ ಜಯಪ್ರಕಾಶ್ ಹೆಗಡೆಯವರು ಹೇಳುತ್ತಾರೆ- ವರದಿ ಇಲ್ಲ ಎಂದು. ಹಾಗಾದರೆ, 187 ಕೋಟಿ ಖರ್ಚು ಮಾಡಿ, ನಾಲ್ಕು ವರ್ಷ ನಾಡಿನ ಶಿಕ್ಷಕರು ರಾಜ್ಯದಾದ್ಯಂತ ಅಲೆದಾಡಿ ತಯಾರಿಸಿದ ಕಾಂತರಾಜ ಆಯೋಗದ ವರದಿ ಎಲ್ಲಿದೆ, ಏನಾಯ್ತು? ಈ ಬಗ್ಗೆ ಆಯೋಗ ಉತ್ತರಿಸಬೇಕಲ್ಲವೇ?
ಬಿಜೆಪಿ ಸರ್ಕಾರ ನೇಮಿಸಿದ್ದ ಜಯಪ್ರಕಾಶ್ ಹೆಗಡೆಯವರು, ಸರ್ಕಾರಕ್ಕೆ ವರದಿ ಒಪ್ಪಿಸಿದ ನಂತರ ಕಾಂಗ್ರೆಸ್ ಸೇರಿದರು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರು.
ಹಾಗಾದರೆ, ಜಯಪ್ರಕಾಶ್ ಹೆಗಡೆಯವರು ತಯಾರಿಸಿದ ವರದಿ ಯಾವುದು? ಅದಕ್ಕೆ ಆಯೋಗದ ನಿಯಮದಂತೆ ದತ್ತಾಂಶ, ಕುಲಶಾಸ್ತ್ರೀಯ ಅಧ್ಯಯನ ಮತ್ತು ದ್ವಿತೀಯ ಮೂಲದ ಮಾಹಿತಿಯನ್ನು ತೆಗೆದುಕೊಂಡು ವರದಿ ತಯಾರಿಸಲಾಗಿದೆಯೇ ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಈ ನಡುವೆ ರಾಜ್ಯದ ಬಲಾಢ್ಯ ಸಮುದಾಯದವರಾದ ಲಿಂಗಾಯತ ಮತ್ತು ಒಕ್ಕಲಿಗ ಜಾತಿಯ ಕೆಲ ನಾಯಕರು, ‘ಜಾತಿಗಣತಿ ವೈಜ್ಞಾನಿಕವಾಗಿಲ್ಲ, ಎಲ್ಲರನ್ನು ಸಮಗ್ರವಾಗಿ ಸಮೀಕ್ಷೆಗೆ ಒಳಪಡಿಸಿಲ್ಲ, ಹಾಗಾಗಿ ನಾವು ಇದನ್ನು ಒಪ್ಪುವುದಿಲ್ಲ’ ಎಂದು ಅಪಸ್ವರವೆತ್ತಿರುವುದನ್ನೂ ಇಲ್ಲಿ ಗಮನಿಸಬೇಕಾಗುತ್ತದೆ.
ಇಷ್ಟೆಲ್ಲ ಗೊಂದಲಗಳಿರುವ, ಪ್ರಶ್ನೆಗಳಿರುವ ಹಿಂದುಳಿದ ಆಯೋಗದ ವರದಿ ಒಂದು ಕಡೆ, ರಾಜಕಾರಣಿಗಳ ನಿಧಾನತಂತ್ರ ಮತ್ತೊಂದು ಕಡೆ. ಇಲ್ಲಿ ತಬ್ಬಲಿ ಸಮುದಾಯಗಳನ್ನು ತಬ್ಬುವವರು ಯಾರು? ಸಾಮಾಜಿಕ ನ್ಯಾಯ ಸಿಗಲು ಸಾಧ್ಯವೇ?
